ಗದಗ
ಕುವೆಂಪು ಅವರು ಹೇಳುವಂತೆ ಕನ್ನಡವೆನ್ನುವುದು ಮನೆಯ ಬಾಗಿಲಾದರೆ, ಇತರ ಭಾಷೆಗಳು ಮನೆಯ ಕಿಡಕಿಗಳಂತಿರಲಿ. ಎಲ್ಲ ದಿಕ್ಕಿನಿಂದಲೂ ಜ್ಞಾನದ ಬೆಳಕು ಹರಿದು ಬಂದಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಪ್ರತಿಯೊಬ್ಬರು ಆಡುವ ಭಾಷೆಗಳು ಭಿನ್ನವಾದರೂ ಆಲೋಚಿಸುವುದು ಮಾತೃಭಾಷೆಯಲ್ಲಿಯೇ ಎನ್ನುವುದು ವಿಶೇಷ.
ಕನ್ನಡಿಗರಾಗಿರುವ ನಾವು ಪ್ರತಿಯೊಬ್ಬರು ಕನ್ನಡವನ್ನು ಹೆತ್ತ ತಾಯಿಯಂತೆ ಗೌರವಿಸಬೇಕು. ಇಂಗ್ಲೀಷ್ ಅನಿವಾರ್ಯವಾಗಿದ್ದರೂ ನಮ್ಮ ಪ್ರಥಮ ಆದ್ಯತೆ ಕನ್ನಡವಾಗಿರಲಿ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
೨೭೧೯ ನೇ ಶಿವಾನುಭವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಾತನಾಡುವಾಗ, ವ್ಯವಹರಿಸುವಾಗ ವಿಶೇಷವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ಕನ್ನಡದಲ್ಲಿ ಅಧ್ಯಯನ ಮಾಡುವದರಿಂದ ನಮ್ಮ ಬೌದ್ಧಿಕ ಶಕ್ತಿ ಹೆಚ್ಚಿ ವಿಕಾಸಗೊಳ್ಳಲಿಕ್ಕೆ ಸಾಧ್ಯವಾಗುತ್ತದೆ.
ಕನ್ನಡ ಭಾಷೆ ನಮ್ಮ ತಾಯಿ. ಪ್ರತಿಯೊಬ್ಬರು ಮಾತೃಭಾಷೆಯ ಬಗ್ಗೆ ಅಭಿಮಾನ ಮತ್ತು ಪ್ರೀತಿಯನ್ನು ಹೊಂದಬೇಕು. ಬಸವಾದಿ ಶಿವಶರಣರು, ದಾಸರು, ಪಂಪ, ರನ್ನ ರಾಘವಾಂಕ, ಚಾಮರಸನಂತಹ ಅನೇಕ ಶ್ರೇಷ್ಠ ಕವಿಗಳು ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಿದ್ದಾರೆ. ಬಸವಾದಿ ಶಿವಶರಣರು ಕನ್ನಡದಲ್ಲಿ ವಚನಸಾಹಿತ್ಯವನ್ನು ರಚಿಸಿ ಕನ್ನಡ ಭಾಷೆಯ ಸ್ಥಾನಮಾನವನ್ನು ಹೆಚ್ಚಿಸಿದ್ದಾರೆ ಎಂದು ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ ಕೆ.ವಿ.ಎಸ್.ಆರ್. ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೋ ಬಿ.ಆರ್. ಜಾಲಿಹಾಳರವರು ಮಾತನಾಡಿ ಬೇರೆ ಭಾಷೆಗಳನ್ನು ಕಲಿಯುವುದರ ಜೊತೆಗೆ ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದೋಣ. ನಮ್ಮ ಭಾಷೆಯನ್ನು ಮರೆಯಬಾರದು. ಜನರಿಗೆ ಬದುಕಿನ ಭಾಷೆ ಬೇಗ ಅರ್ಥವಾಗುತ್ತದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಅಲ್ಲಮಪ್ರಭು ಬೆಟ್ಟದೂರ ಅವರು ಮಾತನಾಡಿ, ಗುರುವಿರಲಿ, ಜಂಗಮವಿರಲಿ, ಲಿಂಗವಿರಲಿ ಎಲ್ಲವೂ ಕಾಯಕದ ಹೊಳಹು. ಕಾಯಕದಲ್ಲಿ ತರತಮ ಸಲ್ಲದು. ಶರಣರು ದೈಹಿಕ ಮತ್ತು ಬೌದ್ಧಿಕ ಎಲ್ಲ ಕಾಯಕಗಳು ಸಮಾನ ಎಂದು ತಿಳಿಸಿಕೊಟ್ಟಿದ್ದಾರೆ. ಜ್ಞಾನಕ್ಕಿಂತ ಮುಖ್ಯವಾದುದು ಕ್ರಿಯಾಜ್ಞಾನ. ಪಡೆದುಕೊಂಡಂತಹ ಜ್ಞಾನವನ್ನು ಅಳವಡಿಸಿಕೊಳ್ಳದೆ ಹೋದರೆ ಜ್ಞಾನಕ್ಕೆ ಅರ್ಥವಿಲ್ಲ. ಜ್ಞಾನಕ್ಕೆ ಅರ್ಥ ಬರಬೇಕಾದರೆ ಕ್ರಿಯೆ ಬೇಕು. ಕನ್ನಡದ ಬಗ್ಗೆ ಪ್ರೀತಿ ಇರಬೇಕು. ಕನ್ನಡದ ಬಗ್ಗೆ ಪ್ರೀತಿ ಕಡಿಮೆಯಾಗಲು ಮೂಲ ಕಾರಣ ಜಾಗತೀಕರಣ. ಜಾಗತೀಕರಣದಿಂದಾಗಿ ಇಂಗ್ಲೀಷಗೆ ಎಲ್ಲಿಲ್ಲದ ಪ್ರಾಶಸ್ತö್ಯ ಒದಗಿದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇಂಗ್ಲೀಷ ಕಲಿತರೆ ಮಾತ್ರ ಉದ್ಯೋಗ ಎಂಬುದು ಸಾಮಾನ್ಯನಿಗೂ ತಿಳಿದಿದೆ. ಹೀಗಾಗಿ ಇಂಗ್ಲೀಷ ಮಾದ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಲ್ಲಮಪ್ರಭು ಬೆಟ್ಟದೂರು ಇವರನ್ನು ಹಾಗೂ ಗದಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತ ಪುರಸ್ಕೃತರಾದ ಶ್ರೀ ಬಾಲಚಂದ್ರ ಭರಮಗೌಡ್ರ ಇವರುಗಳನ್ನು ಸಂಮಾನಿಸಲಾಯಿತು.
ಧರ್ಮಗ್ರಂಥ ಪಠಣವನ್ನು ವೈಭವ .ಸಿ. ಗಾಣಿಗೇರ, ವಚನ ಚಿಂತನೆಯನ್ನು ಖುಷಿ .ಏ. ಖಟವಟೆ ಇವರು ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಎಸ್.ಆರ್. ನರೆಗಲ್, ನಿವೃತ್ತ ಶಿಕ್ಷಕರು ಗದಗ ವಹಿಸಿಕೊಂಡಿದ್ದರು. ಗುರುಬಸವ ಸಿಬಿಎಎಸ್‌ಇ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು. ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಮಂಜುಳಾ ಹಾಸಲಕರ ನಿರೂಪಿಸಿದರು. ಸಮಿತಿಯ ಚೇರ್ಮನ್‌ರಾದ ಐ.ಬಿ. ಬೆನಕೊಪ್ಪ. ಸಂಮಾನಿತರನ್ನು ಪರಿಚಯಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿಯಾದ ವೀರಣ್ಣ ಗೋಟಡಕಿ, ಸದಸ್ಯರಾದ ಸೋಮಶೇಖರ ಪುರಾಣಿಕ, ವಿದ್ಯಾ ಗಂಜಿಹಾಳ, ಮಹೇಶ್ ಗಾಣಿಗೇರ, ನಾಗರಾಜ್ ಹಿರೇಮಠ, ಬಸವರಾಜ ಕಾಡಪ್ಪನವರ ಹಾಗೂ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.