ಧಾರವಾಡ
ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗೆ ಜಿಲ್ಲೆ ಪ್ರವೇಶಿಸದಂತೆ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ಪೀಠ ತೆರವುಗೊಳಿಸಿದೆ.
ನವೆಂಬರ್ ನಾಲ್ಕರಂದು ಕನ್ನೇರಿ ಸ್ವಾಮಿ ಎರಡು ತಿಂಗಳವರೆಗೆ ಜಿಲ್ಲೆಗೆ ಬರದಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದರು.
ಈ ವಿಚಾರವಾಗಿ ಕನ್ನೇರಿ ಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ನ ನ್ಯಾಯಮೂರ್ತಿ ನಾಗಪ್ರಸನ್ನ ಕನ್ನೇರಿ ಸ್ವಾಮಿಗೆ ಹಾಕಿದ್ದ ನಿರ್ಬಂಧ ತೆರವುಗೊಳಿಸಿ ಆದೇಶ ನೀಡಿದ್ದಾರೆ ಎಂದು ಸ್ವಾಮಿಯ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ವೆಂಕಟೇಶ ದಳವಾಯಿ ತಿಳಿಸಿದ್ದಾರೆ.
ಲಿಂಗಾಯತ ಧರ್ಮ ಮತ್ತು ಮಠಾಧೀಶರನ್ನು ಕೆಟ್ಟದಾಗಿ ನಿಂದಿಸಿರುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಯನ್ನು ಧಾರವಾಡ ಜಿಲ್ಲೆಗೆ ಬರದಂತೆ ತಡೆಯಲು ಮತ್ತು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲೆಯ ಬಸವಪರ ಸಂಘಟನೆಗಳು ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದವು.
ಹಳ್ಳಿಕೇರಿ ಗ್ರಾಮದ ಕಾರ್ಯಕ್ರಮದಲ್ಲಿ ಕನ್ನೇರಿ ಸ್ವಾಮಿ ಭಾಗವಹಿಸಲಿದ್ದಾರೆಂದು ಅಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ನಂತರ ಧಾರವಾಡದಲ್ಲಿ ಎರಡು ಬಾರಿ, ಅಣ್ಣಿಗೇರಿಯಲ್ಲಿ ಒಂದು ಬಾರಿ ಅವರ ವಿರುದ್ಧ ಬಸವಪರ ಪ್ರತಿಭಟಿಸಿದ್ದವು. ಜಿಲ್ಲಾ ಉಸ್ತುವಾರಿ ಮಂತ್ರಿ ಸಂತೋಷ್ ಲಾಡ್ ಅವರಿಗೂ ಮನವಿ ಸಲ್ಲಿಸಿದ್ದವು.
ಕನ್ನೇರಿ ಸ್ವಾಮಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದಲೂ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರ ವಿರುದ್ಧ ಕನ್ನೇರಿ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದ್ದರು. ಕನ್ನೇರಿ ಸ್ವಾಮಿಯಿಂದ ಕೀಳು ಮಟ್ಟದ ಭಾಷೆ ಪ್ರಯೋಗವಾಗಿದೆ ಎಂದು ನ್ಯಾಯಮೂರ್ತಿ ಮಗದುಂ ಛೀಮಾರಿ ಹಾಕಿದ್ದರು.
ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೊರೆ ಹೋದ ಕನ್ನೇರಿ ಸ್ವಾಮಿಗೆ ಕಾನೂನು ಸಮರದಲ್ಲಿ ಮತ್ತೆ ಹಿನ್ನಡೆಯಾಯಿತು.
ಅವರ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
“ಒಬ್ಬ ಸ್ವಾಮೀಜಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ. ನೀವು ಒಳ್ಳೆಯ ಪ್ರಜೆಯಲ್ಲ. ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ಅವಹೇಳನಕಾರಿ ಭಾಷೆ ಬಳಸಿದ್ದೀರಿ. ನೀವು ಮಾತನಾಡುವುದು ನಿಲ್ಲಿಸಿ ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ,” ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದ್ದರು.
ನಂತರ ಧಾರವಾಡದ ಜಿಲ್ಲೆಯ ನಿರ್ಬಂಧ ವಿರೋಧಿಸಿ ಕನ್ನೇರಿ ಸ್ವಾಮಿ ಹಾಕಿದ್ದ ಅರ್ಜಿಯನ್ನು ಈಗ ಧಾರವಾಡ ಹೈಕೋರ್ಟ್ನ ನ್ಯಾಯಮೂರ್ತಿ ನಾಗಪ್ರಸನ್ನ ಪುರಸ್ಕರಿಸಿದ್ದಾರೆ.

ಈ ನ್ಯಾಯಮೂರ್ತಿಯವರಿಂದ ಇಂತಹ ನಿರೀಕ್ಷಯಿತ್ತು. ನಿರೀಕ್ಷೆ ಸತ್ಯವಾಗಿದೆ.
ದಾರದ ಮಹಿಮೆ ಅಂದ್ರೆ ಸುಮ್ನೇನಾ?!