ಕರಿದ ತಿಂಡಿಗೆ ಆಸೆ ಪಡುವ ಇಲಿಯಂತಾಗಿರುವ ಯತ್ನಾಳರು

ನಾಗನೂರು

ಬೀದರಿನಲ್ಲಿ ನಡೆದ ವಕ್ಫ್ ಹೋರಾಟದಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಗುರುಬಸವಣ್ಣನವರ ಲಿಂಗೈಕ್ಯದ ಬಗ್ಗೆ ತುಂಬಾ ಹಗುರವಾದ ಮಾತುಗಳನ್ನಾಡಿದ್ದಾರೆ‌. ಅದು ಎಲ್ಲ ಲಿಂಗಾಯತರ ಭಾವನೆಗಳಿಗೆ ತುಂಬ ನೋವನ್ನುಂಟು ಮಾಡಿದೆ.

ಯತ್ನಾಳರು ಸ್ವತಃ ತಾವು ಲಿಂಗಾಯತರಾಗಿದ್ದು ಬಸವಣ್ಣನವರ ಹೆಸರು ಇಟ್ಟುಕೊಂಡು, ಆ ಮಹಾಪುರುಷರ ಜಿಲ್ಲೆಯಲ್ಲಿಯೇ ಹುಟ್ಟಿ, ಯಾರೋ ಒಡ್ಡಿದ ಆಮಿಷಕ್ಕೊಳಗಾಗಿ ವಿಚಾರಶಕ್ತಿಯನ್ನು ಕಳೆದುಕೊಂಡು ಬಾಯಿಗೆ ಬಂದಂತೆ ಹರಟುವ ಇವರನ್ನು ಕಂಡರೆ ನಮಗೆ ಅಯ್ಯೋ! ಪಾಪ ಎನಿಸುತ್ತದೆ. ಇನ್ನೊಬ್ಬರ ಬಲೆಯಲ್ಲಿ ಬಂಧಿಯಾಗಿ ಇವರ ಕಣ್ಣು ಕಿವಿ ಕುರುಡಾಗಿವೆ. ನಿನಗೆ ಇನ್ನೇನೋ ಕೊಡುತ್ತೇವೆ ನಿಮ್ಮ ತಂದೆ-ತಾಯಿಯನ್ನು ಮಾರಿಬಿಡು ಅಂದರೆ ಇವರು ಅದಕ್ಕೂ ತಯಾರಾಗುತ್ತಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ನಾಣ್ಣುಡಿಯಂತೆ ಇವರಿಗೆ ವಿನಾಶಕಾಲ ಸನ್ನಿಹಿತವಾಗಿದೆ.

ಸ್ವಲ್ಪ ರಾಜಕೀಯ ಪಕ್ಕಕ್ಕಿಟ್ಟು ದೇವರೆಂದರೇನು? ಧರ್ಮಗುರು ಎಂದರೇನು? ಸ್ವಲ್ಪವಾದರೂ ಕಣ್ಣಾಡಿಸಿದರೆ ಬಸವಾದಿ ಪ್ರಮಥರ ಬಗ್ಗೆ ತಿಳಿದೀತು. ಇವರಿಗೆ ವಿಭೂತಿ-ಲಿಂಗದ ಬಗ್ಗೆ ದರುಶನವೇ ಇಲ್ಲ. ಯಾವಾಗಲೂ ಹಣೆತುಂಬ ಕುಂಕುಮ ಬಳಿದುಕೊಂಡು ಲಗಾಮು ಇಲ್ಲದ ಕುದುರೆಯ ಹಾಗೆ ಮೈತುಂಬ ಬರೀ ನಾನತ್ವವನ್ನೇ ತುಂಬಿಕೊಂಡಿರುವ ಇವರಿಗೆ ಗುರುಬಸವಣ್ಣನವರ ಬಗ್ಗೆ ಮಾತನಾಡುವ ಯೋಗ್ಯತೆಯಾದರೂ ಎಲ್ಲಿದೆ? ಇಟ್ಟುಕೊಂಡಿರುವ ಹೆಸೆರಿಗೂ ಅನ್ಯಾಯ ಮಾಡುತ್ತ ಇವರ ವ್ಯಕ್ತಿತ್ವ ಇವರ ನಾಲಿಗೆ ಹೇಳುತ್ತಿದೆ.

“ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು, ಕರ್ತನಟ್ಟಿದನಯ್ಯಾ ಒಬ್ಬ ಶಿವಶರಣನ” ಅಂತಾ ಅಲ್ಲಮಪ್ರಭುಗಳು ಹೇಳುತ್ತಾರೆ‌. ಆ ಶಿವಶರಣನೇ ಗುರುಬಸವಣ್ಣನವರು. ದೀನ ದಲಿತರ ಉದ್ಧಾರ, ಸ್ತ್ರೀಕುಲೋದ್ಧಾರ, ವರ್ಣಭೇದ, ವರ್ಗಬೇಧ, ಜಾತಿಬೇಧ ತೊಡೆದು ಸಮಾಜದಲ್ಲಿ ಅತೀ ಕೆಳಮಟ್ಟದಲ್ಲಿರುವವರನ್ನ ಸಮಾಜದ ಮುಖ್ಯವಾಹಿನಿಗೆ ತಂದು ಕಲ್ಯಾಣದ ಪಣ್ಯಾಂಗನೆಯರನ್ನೆಲ್ಲ ಶಿವಶರಣೆಯರನ್ನಾಗಿ ಮಾಡಿ ಅನುಭವ ಮಂಟಪದಲ್ಲಿ ಸ್ಥಾನ ಕಲ್ಪಿಸಿಕೊಟ್ಟ ಕೀರ್ತಿ ಬಸವಣ್ಣನವರಿಗೆ ಸಲ್ಲತ್ತದೆ.

ಅಂತ ಮಹಾ ಪುರುಷನನ್ನು ಯತ್ನಾಳರು ತಮ್ಮ ಹೊಲಸು ಬಾಯಿಯಿಂದ ಏನೇನೋ ಮಾತನಾಡಿದರೆ ಅದು ಆಕಾಶಕ್ಕೆ ಉಗುಳಿದಂತೆ. ೧೨ನೇ ಶತಮಾನದಲ್ಲೂ ಈ ಮನುವಾದಿಗಳು ಬಸವ ಎಂಬ ಚಿದ್ಬೆಳಕನ್ನು ಆರಿಸಲು ಏನೆಲ್ಲಾ ಆಟ ಆಡಿದರು? ಗಡಿಪಾರು, ಶರಣರ ಕಗ್ಗೊಲೆ, ವಚನ ಸಾಹಿತ್ಯ ಸುಟ್ಟು ಹಾಕುವುದು ಹೀಗೆ ನಾನಾ ರೀತಿ ಆದರೆ ಆ ಬಸವ ಚಿದ್ಬೆಳಕು ಆರಲಿಲ್ಲ ಬದಲಾಗಿ ಇನ್ನೂ ಹೆಚ್ಚಿಗೆ ಪ್ರಜ್ವಲಿಸಿತು. ಅಂದು ಆ ಕಾರ್ಯಕ್ಕೆ ಕೈಗೂಡಿದವರಿಗೆಲ್ಲ ಏನೇನಾಯಿತು? ಬಸವ ತತ್ವದ ABCD ಗೊತ್ತಿಲ್ಲದಿರುವ ಯತ್ನಾಳರಿಗೆ ಇತಿಹಾಸ ಗೊತ್ತಿರಲು ಹೇಗೆ ಸಾಧ್ಯ ಅಲ್ಲವೇ.

ಕರಿದ ತಿಂಡಿಗೆ ಆಸೆ ಪಡುವ ಇಲಿಯಂತಾಗಿದೆ ಅವರ ಬದುಕು. ೧೨ನೇ ಶತಮಾನದಲ್ಲಿ ಮಾಡಿದ ಪ್ರಯತ್ನ ತಿರಗಾ ೨೧ನೇ ಶತಮಾನದಲ್ಲಿ ಮಾಡುತ್ತಿದ್ದಾರೆ. ಇನ್ನೂ ಇಂತಹ ಎಷ್ಟೋ ಶತಮಾನಗಳು ಕಳೆದರೂ ಬಸವಜ್ಯೋತಿಗೆ ಒಂದು ಸಣ್ಣ ಕಪ್ಪು ಚುಕ್ಕೆ ಅಂಟೋಲ್ಲ. ಶರಣರ ನೋವೇ ಲಿಂಗದ ನೋವು. ಶರಣರೊಡನೆ ಸರಸವಾಡಿದರೆ ಸುಣ್ಣದಾ ಕಲ್ಲನ್ನು ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ. ಸುಣ್ಣದಾ ಕಲ್ಲನ್ನು ಮಡಿಲಲ್ಲಿ ಕಟ್ಟಿಕೊಂಡು ತಾವೇ ಹೊಳೆಗೆ ಹಾರುತ್ತಿದ್ದಾರೆ. ಮೊದಲು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲಿ.

ಇವರ ಹಿಂದೆ ಇರುವ ದೊಡ್ಡವರು ತಿದ್ದಿ ಬುದ್ಧಿ ಹೇಳಬೇಕು. ಅವರು ಮಾಡಿದ್ದೇ ಸರಿ ಎಂದು ಬೆನ್ನು ಚಪ್ಪರಿಸುವುದು ಮೂರ್ಖತನ. ತಾವೇ ಸುಟ್ಟು ಭಸ್ಮ ಆಗುವುದರೊಳಗೆ ಗುರುಬಸವಣ್ಣನವರ ಕ್ಷಮೆ ಕೇಳಿ ಬದುಕಿಕೊಳ್ಳಲಿ. ಕೊಂಡಿ ಮಂಚಣ್ಣನವರಂತ ಪರಿಸ್ಥಿತಿ ಬರುವುದರೊಳಗಾಗಿ ಸುಧಾರಿಸಿಕೊಳ್ಳಲಿ. ಬಸವಣ್ಣನವರು ಲಿಂಗೈಕ್ಯ ಆಗಿದ್ದಾರೆ ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿ. ಭಂಡತನದಿಂದ ನಾನೇ ಬಸವಣ್ಣ ಎಂದು ಹೇಳುವ ಯತ್ನಾಳ ಮೂರ್ಖತನದ ಪರಮಾವಧಿ. ಬಸವಣ್ಣನವರ ಹೆಸರು ಹೇಳಾಕೂ ಯೋಗ್ಯತೆ ಇಲ್ಲದವರು. ಬಸವಣ್ಣ ಆಗ್ತಾರಂತೆ ಬಸವಣ್ಣ! ಬಸವಣ್ಣನವರಿಗೆ ಬಸವಣ್ಣನವರೇ ಸಾಟಿ. ಅವರನ್ನ ಬಿಟ್ಟರೇ ಈ ಜಗತ್ತಿನಲ್ಲಿ ಮತ್ತೊಬ್ಬ ಬಸವಣ್ಣ ಆಗಲು ಸಾಧ್ಯವಿಲ್ಲ.

289
"ಬಸವಣ್ಣನವರಂತೆ ಹೊಳ್ಯಾಗ ಜಿಗೀರಿ" ಎಂದಿರುವ ಯತ್ನಾಳ್:
Share This Article
2 Comments
  • ಇದಕ್ಕಿಂತಲೂ ಕೆಳಮಟ್ಟದಲ್ಲಿ ಹೇಗೆ ಬುಧ್ದಿಕಲಿಸಬೇಕು! ಸಾಕು ಮತಿಭ್ರಮಣೆಯಿಂದ ಹೊರಬಂದು ಕ್ಷಮೆಯಾಚಿಸಿ ಬದುಕಿಕೊಳ್ಳಲಿ ಇಲ್ಲಾ ಶರಣರ ಅವಕ್ರಪೆಗೆ ಒಳಗಾಗಲಿ. ಜಯ ಬಸವ! ಜೈ ಲಿಂಗಾಯತ! ಶರಣು, ಶರಣಾರ್ಥಿಗಳು

  • ಉತ್ತಮ ಉದಾಹರಣೆ. ಕರಿದ ಪದಾರ್ಥಗಳಿಗೆ ಹೇಗೇ ಮಾರು ಹೋಗುತ್ತಾರೋ ಹಾಗೆ ಅಧಿಕಾರ, ದೊಡ್ಡಸ್ತಿಕೆ ಅಮಲಿನ ಸೆಳವಿಗೆ ಬಿದ್ದಿದ್ದಾರೆ ಮಾತಾಜಿ 🙏🙏🙏🙏🙏

Leave a Reply

Your email address will not be published. Required fields are marked *

-ಪೂಜ್ಯ ಬಸವಗೀತಾ ಮಾತಾಜಿ, ಗುರುಬಸವ ಮಠ, ನಾಗನೂರ