ರಾಯಚೂರು
ಬಸವ ಕೇಂದ್ರದ 162ನೇ “ಮನೆಯಲ್ಲಿ ಮಹಾಮನೆ” ಜ್ಯೋತಿ ಕಾಲೊನಿಯ ವೆಂಕಣ್ಣ ಆಶಾಪುರ ಇವರ ಮನೆಯಲ್ಲಿ ನಡೆಯಿತು. ವೆಂಕಣ್ಣ ಅವರ ಧರ್ಮಪತ್ನಿ ಶರಣೆ ಲಕ್ಷ್ಮಮ್ಮ ಅವರ ಪುಣ್ಯಸ್ಮರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಮಿಟ್ಟಿಮಲ್ಕಾಪುರೆ ಶಾಂತಾಶ್ರಮದ ಪೂಜ್ಯ ನಿಜಾನಂದ ಮಹಾಸ್ವಾಮಿಗಳು, ಸಾಮಾನ್ಯವಾಗಿ ದೇವರ ಬಗೆಗೆ ಕಲ್ಪನೆ ಎಲ್ಲರೂ ಆಕಾಶ ಸುತ್ತ ನೋಡಿದರೆ, ಅಲ್ಲಮಪ್ರಭುಗಳು ಕೆಳಗೆ ನೋಡುತ್ತಾರೆ. ಋಷಿಮುನಿಗಳು ಅಲ್ಲಿರುವುದು ನಮ್ಮ ಮನೆ, ಇಲ್ಲಿರುವುದು ಸುಮ್ಮನೆ ಎಂದು ಹೇಳುತ್ತಾ ಬಂದಿದ್ದರು. ಈ ಭೂಮಿ ಕರ್ತಾರನ ಕಮ್ಮಟ, ಇಲ್ಲಿರುವದೇ ನಮ್ಮ ಮನೆ ಅದೇ ಗುಹೇಶ್ವರನ ಸ್ವರೂಪವಾಗಿರುತ್ತದೆ ಎಂದು ಅಲ್ಲಮರು ಹೇಳಿದರು ಎಂದರು.
ಮಹಾದೇವಿ ಮಠಪತಿ ಅಕ್ಕನವರು ಕನ್ನಡದ ನೆಲದಲ್ಲಿ ಜನ ಸಮುದಾಯಕ್ಕೆ ಮೊದಲ ಬಾರಿಗೆ ಸಹಜವಾದ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಟ್ಟವರೆಂದರೆ ಬಸವಾದಿ ಶರಣರು. ಮಾನವನ ಏಳಿಗೆಗಾಗಿಯೇ ರಚಿಸಿದ ಈ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದುಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನ ಮತ್ತು ನಾಂದಿ ಸಾಧ್ಯವೆಂದರು.
ಕಲ್ಯಾಣಮ್ಮನವರು ಮಾತನಾಡುತ್ತಾ, ಬಸವಾದಿ ಶರಣರು ಸರ್ವರಿಗೂ ಸಮಪಾಲು, ಸರ್ವರಿಗೂ ಸಮನ್ವಯ ತತ್ವ ಬೋಧನೆ ಅನುಕರಣೀಯ ಸದಾಚಾರ, ಸದ್ಭಾವನೆ, ಸನ್ನಡತೆಯ ಜೊತೆಗೆ ಸತ್ಯ ಶುದ್ಧ ಕಾಯಕ ಮತ್ತು ಆದರ್ಶಗಳನ್ನು ನಾವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿ ಬದುಕಿದಲ್ಲಿ ಮಾತ್ರ ಜನ್ಮ ಸಾರ್ಥಕವೆಂದರು.
ಬಸವ ಕೇಂದ್ರದ ಕಾರ್ಯದರ್ಶಿಗಳಾದ ಚನ್ನಬಸವಣ್ಣ ಮಹಾಜನಶೆಟ್ಟಿ ಅವರು ಮಾತನಾಡಿ, ಹಿರಿಯರಾದ ವೆಂಕಣ್ಣ ಆಶಾಪೂರವರು ಬಸವ ಮಾರ್ಗವನ್ನು ನಿತ್ಯ ಜೀವನದಲ್ಲಿ ಅವಡಿಸಿಕೊಂಡು ಸತ್ಯ ಶುದ್ಧ ಕಾಯಕ ಮಾಡುತ್ತಿರುವ ಅವರ ಜೀವನಶೈಲಿ ನಮಗೆಲ್ಲ ಮಾರ್ಗದರ್ಶಕವಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಿ. ಬಿ. ಪಾಟೀಲ ವಕೀಲರು, ಬಸವಾದಿ ಶರಣರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೃದಯ ವೈಶಾಲ್ಯತೆಯಿಂದ ಸಾಗಿದ್ದಲ್ಲಿ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳುವದು. ಇದೇ ಶರಣರ ದೃಷ್ಟಿಯಲ್ಲಿ ಮಹಾಮನೆ ಎಂದರು.
ಬಸವ ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು ಅಧ್ಯಕ್ಷ ನುಡಿಗಳನ್ನಾಡಿ, ಪಾರಂಪಾರಿಕವಾಗಿ ರೂಢಿಯಲ್ಲಿದ್ದ ವರ್ಣಾಶ್ರಮದ ಸಂಕೋಲೆಯಲ್ಲಿ ಸಿಲುಕಿದ್ದ ಸಮಾಜಕ್ಕೆ ಸರ್ವಧರ್ಮ ಸಮಾನತೆ, ವ್ಯಕ್ತಿ ಗೌರವ, ಸ್ತ್ರೀ ಸಮಾನತೆ, ಕಾಯಕ ನಿಷ್ಠೆ ಮತ್ತು ದಾಸೋಹ ಪರಿಕಲ್ಪನೆಯನ್ನು ತಂದುಕೊಟ್ಟು ಬದಲಾವಣೆಯನ್ನು ತಂದವರು ಮಹಾತ್ಮ ಬಸವೇಶ್ವರರು ಎಂದು ಹೇಳಿದರು.
ಬಸವ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಹಾಗೂ ನಾಗೇಶ್ವರಪ್ಪ ವಚನ ಗಾಯನ, ಸಾಮೂಹಿಕ ಬಸವ ಪ್ರಾರ್ಥನೆಯನ್ನು ನಡೆಸಿಕೊಟ್ಟರು.
ಮಹಾದೇವಪ್ಪ ಏಗನೂರ ಸ್ವಾಗತಿಸಿದರು. ಎ. ವೀರಭದ್ರಪ್ಪ ಮಹಾಮನೆಯ ಕುರಿತು ಮಾತನಾಡಿದರು. ರಾಘವೇಂದ್ರ ಆಶಾಪೂರ ಕಾರ್ಯಕ್ರಮವನ್ನು ರೂಪಿಸಿದರು. ಎಸ್. ಶಂಕರಗೌಡರು ವಂದಿಸಿದರು.