ಕಾವೇರಿ ಆರತಿ ಬದಲು ವಚನ ಕಮ್ಮಟ ನಡೆಸಲು ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ:

ಉತ್ತರದ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಕೈಬಿಟ್ಟು ಬಸವಣ್ಣನವರ ವಚನಗಳ ಸಮಾಲೋಚನೆ ನಡೆಸಬೇಕೆಂದು ‘ನಾವು ದ್ರಾವಿಡ ಕನ್ನಡಿಗರು ಚಳುವಳಿ’ ಸಂಘಟನೆಯು ಅದರ ಸಂಸ್ಥಾಪಕ, ಸಂಚಾಲಕರಾದ ಹನಕೆರೆ ಅಭಿಗೌಡ ನೇತೃತ್ವದಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಸರ್ಕಾರಕ್ಕೆ ಒತ್ತಾಯಿಸಿದೆ.

ಈಗಾಗಲೇ ಕೇಂದ್ರ ಸರ್ಕಾರವು ಸರ್ವಾಧಿಕಾರದಿಂದ ವರ್ತಿಸುತ್ತ, ನಮ್ಮ ಕನ್ನಡ ನಾಡು ನುಡಿ ಆಚರಣೆಗಳಿಗೆ ಅವಕಾಶ ಕೊಡದೆ ಉತ್ತರ ಭಾರತದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಸಾವಿರಾರು ಕೋಟಿ ವ್ಯಯಿಸುತ್ತಿರುವಾಗ, ಕರ್ನಾಟಕ ಸರ್ಕಾರ ಕೂಡ ಉತ್ತರ ಭಾರತದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಹಣ ವ್ಯಯಿಸುವುದು ತಪ್ಪು ನಡೆಯಾಗುತ್ತದೆ. ಆದ್ದರಿಂದ ಈ ನಡವಳಿಕೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಲಾಗಿದೆ.

ಪರ್ಯಾಯವಾಗಿ ಕಾವೇರಿ ನದಿ ತೀರದಲ್ಲಿ ಪ್ರತಿ ದಸರಾ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳನ್ನು ಕರೆಯಿಸಿ, ಬಸವಣ್ಣ ಹಾಗೂ ಬಸವಾದಿ ಶರಣರ ವಚನಗಳ ಸಮಾಲೋಚನೆಯ ವಚನ ಕಮ್ಮಟ ಕಾರ್ಯಕ್ರಮ ನಡೆಸಬೇಕು.

ಈ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಇಂದಿಗೂ ಕಾಡುತ್ತಿರುವ ಅಸ್ಪೃಶ್ಯತೆ, ಜಾತಿ ಅಸಮಾನತೆ ಮತ್ತು ನದಿ ನೀರನ್ನು ಕಲುಷಿತಗೊಳಿಸುವ ಮೌಢ್ಯಾಚರಣೆಗಳನ್ನು ತಡೆಗಟ್ಟಬಹುದಾಗಿದೆ ಎಂದು ಸಂಘಟನೆ ಹೇಳಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ‘ನಾವು ದ್ರಾವಿಡ ಕನ್ನಡಿಗರು ಚಳುವಳಿ’ ಸಂಘಟನೆ ಮುಖಂಡರಾದ ರಾಜೇಂದ್ರಸಿಂಗ್ ಬಾಬು, ಜಯರಾಂ ಹೊಸೂರ, ಮದ್ದೂರು ಧನುಷ್ ಗೌಡ ಮತ್ತೀತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *