ಕವಿಗಳು ಶರಣರಂತೆ ನುಡಿದಂತೆ ನಡೆಯಲಿ: ಶಂಕರ ಸೋಮಪ್ಪ ಬೋಳಣ್ಣವರ

ಬೈಲಹೊಂಗಲ:

ಬದುಕಿನ ಮೌಲ್ಯಗಳನ್ನು ಬಿಂಬಿಸುವ 12 ನೆಯ ಶತಮಾನದ ವಚನ ಸಾಹಿತ್ಯ ಕನ್ನಡದ ಹೆಮ್ಮೆ ಎಂದು ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶಂಕರ ಸೋಮಪ್ಪ ಬೋಳಣ್ಣವರ ಹೇಳಿದರು.

ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಬಸವ ಸಮಿತಿಯಿಂದ  ‘ಕರ್ನಾಟಕ ರಾಜ್ಯೋತ್ಸವ’ ‘ಬಸವ ದಿನಚರಿ ಲೋಕಾರ್ಪಣೆ’ ಹಾಗೂ ‘ರಾಜ್ಯಮಟ್ಟದ ಕವಿಗೋಷ್ಠಿ’ ಉದ್ಘಾಟಿಸಿ ಮಾತನಾಡಿದರು.

ನುಡಿದಂತೆ ನಡೆದು ತೋರಿಸಿ ಜಗತ್ತಿಗೆ ಮಾನವೀಯತೆಯನ್ನು ಸಾರಿ ಹೇಳಿದ ಮಹಾನ್ ದಾರ್ಶನಿಕ ಬಸವಣ್ಣ ಎಲ್ಲ ಕವಿಗಳಿಗೆ ಸ್ಪೂರ್ತಿಯಿದ್ದಂತೆ ಎಂದು ಅಭಿಪ್ರಾಯಪಟ್ಟರು.

ಸರಳ ಭಾಷೆಯಲ್ಲಿ ಅದ್ಭುತ ಅರ್ಥ ಕೊಡುವ ಕವಿತೆಗಳು ಜನರ ಹೃದಯಕ್ಕೆ ಹತ್ತಿರವಾಗಬಲ್ಲವು ಎಂದು ಹೇಳಿದರು.

ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರು, ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತಮ ದೂರದೃಷ್ಟಿಯನ್ನಿಟ್ಟುಕೊಂಡು ಮಾಜಿ ರಾಷ್ಟ್ರಪತಿಗಳಾದ ಡಾ. ಬಿ.ಡಿ. ಜತ್ತಿಯವರಿಂದ 1964 ರಲ್ಲಿ ಸ್ಥಾಪನೆಯಾದ ಬಸವ ಸಮಿತಿ ವಚನ ಸಾಹಿತ್ಯ, ಶರಣ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾಯಕ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.

ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಕವಿಗೋಷ್ಠಿಯಲ್ಲಿ ಸಕ್ರಿಯವಾಗಿ ಭಾಗಿಯಾದ  ಕವಿಗಳ ಉತ್ಸಾಹ ಮೆಚ್ಚುವಂತದ್ದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಇಬ್ರಾಹಿಮ್ ಮುಲ್ಲಾ ಮಾತನಾಡಿ, ಉದಯೋನ್ಮುಖ ಕವಿಗಳು ಸಾಕಷ್ಟು ಅಧ್ಯಯನ ಮಾಡುವುದರಿಂದ ಉತ್ತಮ ಸಾಹಿತ್ಯ ರಚನೆಯಾಗುತ್ತದೆ ಎಂದರು.

ಸಾವಿರಾರು ವರ್ಷಗಳ ಇತಿಹಾಸ ಮತ್ತು ಸ್ವಂತ ಲಿಪಿ ಹೊಂದಿದ ಕನ್ನಡ ಭಾಷೆಯ ಬಗ್ಗೆ ಎಲ್ಲರಿಗೂ ಅಭಿಮಾನ ಇರಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೇಕಲಮರಡಿ ಗ್ರಾಮದ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಕಾಶೀಮಸಾಬ ಜಮಾದಾರ ಮಾತನಾಡಿ, ಮುಂದಿನ ರಾಜ್ಯೋತ್ಸವದ ಅಚರಣೆಯಲ್ಲಿ ಕವಿಗಳಿಗೆ ವಿಶೇಷ ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡಲಾಗುವುದು ಎಂದರು. ಕನ್ನಡದಲ್ಲಿ ಇನ್ನಷ್ಟು ಶ್ರೇಷ್ಟ ಸಾಹಿತ್ಯ ರಚನೆಯಾಗಲಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.  ಠಕ್ಕಾಯಿ, ಕವಿಗಳಿಗೆ ಕಲ್ಪನಾ ಶಕ್ತಿಯ ಜೊತೆಗೆ ವಾಸ್ತವದ ಅರಿವು ಕೂಡ ಅಗತ್ಯ ಎಂದರು.

ಬದುಕಿನ ಎಲ್ಲ ಅನುಭವಗಳನ್ನು ಸಮಚಿತ್ತದಿಂದ ಆಸ್ವಾದಿಸುವ ಗುಣವಿರುವ ಕವಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾವ್ಯ ಸೃಷ್ಟಿಸಬಲ್ಲ ಎಂದರು.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ. ಚಂದ್ರಶೇಖರ ಗಣಾಚಾರಿ,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ರವಿಕುಮಾರ ಹುಲಕುಂದ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಉಪಾಧ್ಯಕ್ಷರಾದ ಶ್ರೀಶೈಲ ಶರಣಪ್ಪನವರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಕೋಳಿ, ಪ್ರಗತಿಪರ ಕೃಷಿಕರಾದ  ಬಸವರಾಜ ಜಂಬಗಿ, ಮಹಾಂತೇಶ ಬೋಳಣ್ಣವರ, ಅನಿಲ ಗೀರನವರ, ಅದೃಶಪ್ಪ ಹುಚ್ಚನವರ, ಯರಗಟ್ಟಿ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ರಮೇಶ ಯರಗಟ್ಟಿ, ಪತ್ರಕರ್ತ ಮಹಮ್ಮದ ಯೂನಸ್ ಬಡೇಘರ ಮುಖ್ಯ ಅತಿಥಿಗಳಾಗಿ ಅಗಮಿಸಿದ್ದರು.

ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಕವಿಗಳು ಕವನ ವಾಚಿಸಿದರು. ಶಿಕ್ಷಕ ಬಾಳೇಶ ಫಕ್ಕೀರಪ್ಪನವರ, ಶಿವಾನಂದ ಪಟ್ಟಿಹಾಳ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಕೊಪ್ಪದ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.