ಬಸವಕಲ್ಯಾಣ
ಭಕ್ತನಾದವನು ತನುವನ್ನು ಕರಗಿಸಿ ಮನವನ್ನು ಬಳಲಿಸಿ ತನ್ನ ಸ್ವಂತ ಕಾಯಕದಿಂದ ಬಂದ ಸಂಪಾದನೆಯಿಂದ ಗುರು-ಲಿಂಗ-ಜಂಗಮಕ್ಕೆ ದಾಸೋಹ ಮಾಡಬೇಕು, ಕಾಯಕದಿಂದಲೇ ಜೀವನ್ಮುಕ್ತಿ, ಆತ್ಮೋನ್ನತಿ ಎಂಬುದು ಚಂದಯ್ಯನವರ ವಚನಗಳಿಂದ ತಿಳಿದು ಬರುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಅವರು ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಶರಣ ಸಂಗಮ ಹಾಗೂ ನೂಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿ, ಪ್ರತಿಯೊಬ್ಬ ಜೀವಿಯು ಪರಮಾತ್ಮನ ಅಂಶವಾದ್ದರಿಂದ ಎಲ್ಲರಲ್ಲಿಯೂ ಪರಮಾತ್ಮ ಇದ್ದಾನೆ. ಅದನ್ನೇ ಚೈತನ್ಯ ಘನಲಿಂಗ ಎಂದು ಕರೆಯಲಾಗುತ್ತದೆ.
ಅಂತರಂಗ ಮತ್ತು ಬಹಿರಂಗ ಶುದ್ಧವಾಗಿರಬೇಕು. ಪರಮಗುರು ನೋಡುವುದು ಅಂತರಂಗವನ್ನು. ಅದು ಶುದ್ಧಿಯಾದಾಗಲೇ ಪರಮಾತ್ಮನ ಸಾಕ್ಷತ್ಕಾರವಾಗುವುದು. ಚಂದಯ್ಯನವರ ವಚನಗಳಲ್ಲಿ ಘನಲಿಂಗ ವಿವರಣೆ, ಕಾಯಕ, ದಾಸೋಹ, ನಡೆ-ನುಡಿ, ಗುರು, ಲಿಂಗ, ಜಂಗಮದ ಮಹತ್ವ ಕಾಣಬಹುದಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅನುಭವ ಎಜ್ಯುಕೇಷನ್ ಸಂಸ್ಥೆಯ ಅಧ್ಯಕ್ಷೆ ಲಿಂಗಾರತಿ ನಾವದಗೇರೆ ಮಾತನಾಡಿ, ೧೨ನೇ ಶತಮಾನದಲ್ಲಿ ಶರಣರು ಕೊಟ್ಟ ಮಹತ್ವಪೂರ್ಣ ಕೊಡುಗೆಗಳಲ್ಲಿ ಕಾಯಕವೂ ಒಂದು. ಅವರು ಕಾಯಕಕ್ಕೆ ಎಷ್ಟೊಂದು ಮಹತ್ವ ಕೊಟ್ಟಿದ್ದರು ಎನ್ನುವುದಕ್ಕೆ ಆಯ್ದಕ್ಕಿ ಲಕ್ಕಮ್ಮ ಹಾಗೂ ನುಲಿಯ ಚಂದಯ್ಯನವರ ವಚನಗಳು ನಿದರ್ಶನವಾಗಿವೆ.
ಚಂದಯ್ಯನವರ ಪ್ರಕಾರ ಸತ್ಯಶುದ್ಧ ಕಾಯಕದಿಂದ ಬಂದದ್ದು ಮಾತ್ರ ಲಿಂಗ- ಜಂಗಮಕ್ಕೆ ಅರ್ಪಿತವಾಗಬೇಕು. ಗುರು, ಲಿಂಗ, ಜಂಗಮವಾದಡೂ ಕಾಯಕ ಮಾಡಬೇಕು ಎಂದು ಹೇಳುವುದರ ಮೂಲಕ ಪೂಜೆಗಿಂತ ಕಾಯಕ ಶ್ರೇಷ್ಠ ಎಂದು ಸಾರಿದ ನೂಲಿಯ ಚಂದಯ್ಯನವರು ಕಾಯಕ, ದಾಸೋಹ, ಸತ್ಯನಿಷ್ಠೆಯ ಮೂಲಕ ಮಾನವ ಕೋಟಿಗೆ ಅರಿವಿನ ಬೆಳಕನ್ನು ನೀಡಿದ್ದಾರೆ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ವ್ಯವಸ್ಥಾಪಕರಾದ ಆನಂದಕುಮಾರ ಬಪ್ಪಣ್ಣ ಉದ್ಘಾಟಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ವ್ಯವಸ್ಥಾಪಕರಾದ ಆರ್.ಎಸ್. ಬಿರಾದರ ಧ್ವಜಾರೋಹಣಗೈದರು.
ಕಲ್ಪನಾ ಬೀದೆ ವಚನ ಗಾಯನ ನಡೆಸಿಕೊಟ್ಟರು. ಕು. ಸುಷ್ಮಾ ಪವಾಡಶೆಟ್ಟಿ ಹಾಗೂ ಕು. ಶ್ರೇಯಾಂಕಾ ಕುಂಬಾರ ಅವರಿಂದ ನಡೆದ ವಚನ ನೃತ್ಯಗಳು ಗಮನ ಸೆಳೆದವು. ಶಿವಕುಮಾರ ಪಂಚಾಳ ಮತ್ತು ಸಂಗಡಿಗರು ವಚನ ಗಾಯನ ಮಾಡಿದರು. ಕಲ್ಪನಾ ಕರಬಸಪ್ಪ ಬೀದೆ ಭಕ್ತಿ ದಾಸೋಹಗೈದರು.
ನಿರ್ಮಲಾ ಕಲ್ಯಾಣಿ ಸ್ವಾಗತಿಸಿದರೆ, ಉಷಾ ಮಿರ್ಚೆ ನಿರೂಪಿಸಿದರು. ಕೆಐಎಡಿಬಿ ಕಾಲೋನಿಯ ನೀಲಮ್ಮನ ಬಳಗದ ಶರಣೆಯರಿಂದ ವಚನ ಪ್ರಾರ್ಥನೆ ನಡೆಯಿತು.