ಕಲಬುರಗಿ
ವಚನಕಾರರ ಪ್ರಮುಖ ಆರ್ಥಿಕ ತತ್ವಗಳಲ್ಲಿ ಒಂದಾದ ಕಾಯಕವು, ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ಮತ್ತು ಶ್ರದ್ಧೆ ನಿಷ್ಠಾಪೂರಕವಾಗಿ ಮಾಡಬೇಕು ಎಂಬುದನ್ನು ಹೇಳಿಕೊಡುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಬಸವರಾಜ ಕೋಣಿನ ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವಪರ ಸಂಘಟನೆಗಳು, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಮಲ್ಲಿಕಾರ್ಜುನ ರಾಜಗಿರೆಯವರ ಮನೆಯಂಗಳದಲ್ಲಿ ಆಯೋಜಿಸಲಾಗಿದ್ದ ಮನೆಯಂಗಳದಲ್ಲಿ ವಚನ ವೈಭವ ಕಾರ್ಯಕ್ರಮದಲ್ಲಿ ‘ವಚನಗಳಲ್ಲಿ ಆರ್ಥಿಕ ಮೌಲ್ಯಗಳು’ ವಿಷಯ ಕುರಿತು ಮಾತನಾಡಿದ ಅವರು, ಶ್ರಮಿಕರ ಪ್ರಾಮಾಣಿಕ ದುಡಿಮೆಗೆ ಶರಣರು ಕಾಯಕ ಎಂದು ಹೆಸರಿಟ್ಟು, ಕಾಯಕದ ಮಹತ್ವವನ್ನು ಒತ್ತಿ ಹೇಳಿದರು.
ಬಳಸುವುದು ಮತ್ತು ಉಳಿಸುವುದು ಈ ಮೂರು ಪ್ರಕ್ರಿಯೆಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ, ಗಳಿಕೆಯ ಉಳಿಕೆಯನ್ನು ಸಮಾಜಕ್ಕೆ ಒಪ್ಪಿಸುವುದೇ ದಾಸೋಹ ಎಂದು ಹೇಳಿದರು.
ದಾಸೋಹದಲ್ಲಿ ಜ್ಞಾನ ದಾಸೋಹ, ನೈತಿಕ ದಾಸೋಹ ಮೊದಲಾದ ವಿಧಗಳ ಕುರಿತು ವಿವರಿಸುವ ಮೂಲಕ ದಾಸೋಹವು ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ ಎಂದರು. ಇದು ಸಂಪತ್ತಿನ ಕೇಂದ್ರೀಕರಣವನ್ನು ವಿರೋಧಿಸುವುದಲ್ಲದೆ ಸಮಾಜದ ಪ್ರತಿಯೊಬ್ಬರೂ ಸಮೃದ್ಧಿಯಿಂದ ಬದುಕಲು ಸಹಕರಿಸುತ್ತದೆ ಎಂದು ದಾಸೋಹದ ವೈಶಿಷ್ಟ್ಯತೆಯ ಬಗ್ಗೆ ತಿಳಿಸಿದರು.
ವಚನಕಾರರು ಸಂಪತ್ತನ್ನು ಗಳಿಸುವುದನ್ನು ವಿರೋಧಿಸಿಲ್ಲ, ಆದರೆ ಅದನ್ನು ಸರಿಯಾದ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಗಳಿಸಬೇಕು ಎಂದು ಹೇಳಿದ್ದಾರೆ. ಲಂಚ, ಮೋಸ, ವಂಚನೆಯಂತಹ ಅನ್ಯಾಯದ ಮಾರ್ಗಗಳಿಂದ ಗಳಿಸಿದ ಸಂಪತ್ತು ಪಾಪದ ಸಂಪತ್ತು ಎಂದು ವಚನಕಾರರು ತಿಳಿಸಿದ್ದಾರೆ.
‘ಕಾಣಿಯ ಸೋಲ, ಅರ್ದ ಕಾಣಿಯ ಗೆಲ್ಲ’ ಎಂಬ ವಚನಸೂಕ್ತಿಯನ್ನು ಸಮಾಜದ ಆರ್ಥಿಕ ಹಿತದೃಷ್ಟಿಯಿಂದ No Profit & No Loss ಅಡಿಯಲ್ಲಿ ವ್ಯಾಖ್ಯಾನಿಸಿದರು.
ಕಾಯಕ ಮತ್ತು ದಾಸೋಹ ತತ್ವಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ, ಅಂದರೆ ಪ್ರಾಮಾಣಿಕ ದುಡಿಮೆಯಿಂದ ಸಂಪತ್ತು ಗಳಿಸಿ ಅದನ್ನು ಸಮರ್ಪಕ ರೀತಿಯಲ್ಲಿ ಸಮಾಜಕ್ಕೆ ಒಪ್ಪಿಸುವ ಮೂಲಕ ಆರ್ಥಿಕ ಸಮತೋಲನವನ್ನು ಸಾಧಿಸಬಹುದು ಎಂದು ವಚನಕಾರರು ನಂಬಿದ್ದರು ಎಂದರು.
12ನೇ ಶತಮಾನದಲ್ಲಿ ಕಾಯಕ ಮತ್ತು ದಾಸೋಹ ತತ್ವಗಳು ಸಮಾಜವನ್ನು ಕಲ್ಯಾಣವಾಗಿಸಲು ಹೇಗೆ ಸಹಕಾರಿ ಆಗಿದ್ದವು ಹಾಗೂ ಇಂದಿಗೂ ಅವು ಹೇಗೆ ಪ್ರಸ್ತುತವಾಗಿವೆ ಎಂದು ವಿವರಿಸಿದರು.
ಶರಣ ಶರಣಗೌಡ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶರಣ ಶರಣೆಯರು ಪಾಲ್ಗೊಂಡಿದ್ದರು.