ಕ್ರಿಯಾಶೀಲತೆ, ಕಾಯಕ ಶ್ರದ್ಧೆಗಳೇ ಯಶಸ್ಸಿನ ಮೂಲ: ಸಾಣೇಹಳ್ಳಿ ಶ್ರೀ

ಎಚ್. ಎಸ್. ದ್ಯಾಮೇಶ
ಎಚ್. ಎಸ್. ದ್ಯಾಮೇಶ

ಸಾಣೇಹಳ್ಳಿ

ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದ ನಿಮಿತ್ತ, ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ ಚಿಂತನಾ ಗೋಷ್ಠಿಯ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾಡುವ ಕಾಯಕವನ್ನು ಶ್ರದ್ಧೆ, ಸದ್ಭಾವನೆ, ಸಂತೋಷದಿಂದ ಮಾಡಬೇಕು. ಭಯದಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲು ಖಂಡಿತಾ ಸಾಧ್ಯವಿಲ್ಲ.

ಅಬಾಲವೃದ್ಧರಾದಿಯಾಗಿ ಎಲ್ಲರೂ ಯಶಸ್ಸನ್ನು ಪಡೆಯಬೇಕು ಎನ್ನುವ ಆಶಾ ಭಾವನೆ ಇಟ್ಟುಕೊಂಡಿರುತ್ತಾರೆ. ಅದರೆ ಎಲ್ಲರೂ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಯಾವುದೇ ಸಾಧನೆ ಮಾಡದೆ ದಿನಬೆಳಗಾಗುವದರೊಳಗೆ ದಿಢೀರ್ ಶ್ರೀಮಂತನಾಗಬೇಕು ಎನ್ನುವ ಹಗಲುಗನಸು ಕಂಡರೆ ಅದೂ ಸಾಧ್ಯವಿಲ್ಲ.

ಅತಿಯಾದ ಆತ್ಮವಿಶ್ವಾಸವೂ ಯಶಸ್ಸಿಗೆ ಅಡ್ಡಿಯಾಗುವುದು. ಈ ನೆಲೆಯಲ್ಲಿ ತಾಳ್ಮೆಯೂ ಬಹಳ ಮುಖ್ಯವಾದುದು. `ಕೂತು ಉಂಡರೆ ಕುಡಿಕೆ ಹೊನ್ನು ಸಾಲದು’ ಎನ್ನುವಂತೆ ಯಶಸ್ಸು ಬಂದ ಮೇಲೆ ಮೈಮರೆತರೆ ಅದೂ ಅದೂ ಅಪಾಯಕಾರಿಯೇ.

ಕ್ರಿಯಾಶೀಲತೆ, ಕಾಯಕ ಶ್ರದ್ಧೆಗಳೇ ಯಶಸ್ಸಿನ ಮೂಲ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ರ್ಯಾಂಕ್ ಬರುತ್ತೇನೆ ಎಂದು ಕನಸು ಕಂಡರೆ ಆಗದು. ಅದಕ್ಕೆ ನಿರಂತರ ಪ್ರಯತ್ನ ಬೇಕು. ನಿದ್ದೆಯಲ್ಲಿ ಕನಸು ಕಾಣುವುದು ಮುಖ್ಯವಲ್ಲ; ಕಂಡ ಕನಸನ್ನು ನನಸು ಮಾಡಿಕೊಳ್ಳುವುದು ಮುಖ್ಯ. ಮಕ್ಕಳು ಮೊದಲು ಒಳ್ಳೆ ವೈದ್ಯ, ಇಂಜಿನಿಯರ್, ರೈತ, ಸ್ವಾಮಿಜಿ, ಸಮಾಜಸೇವಕ, ರಾಜಕಾರಣಿ ಆಗುವ ದೊಡ್ಡ,ದೊಡ್ಡ ಕನಸು ಕಾಣಬೇಕು. ಕಂಡ ಕನಸನ್ನು ನನಸು ಮಾಡಲು ಹಗಲಿರುಳು ಶ್ರಮಿಸಬೇಕು. ಇದಕ್ಕೆ ನಮ್ಮ ಮುಂದಿನ ಒಳ್ಳೆಯ ಉದಾಹರಣೆಯೆಂದರೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕಂಡ ಕನಸುಗಳು. ದುಗ್ಗಾಣಿ ಮಠವನ್ನು ಶ್ರೀಮಂತ ಮಠವನ್ನಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು.

ಗುರುಗಳು ಸಮಾಜದ ಅಭ್ಯುದಯಕ್ಕೆ ಶಿಕ್ಷಣ ಬೇಕು ಅನ್ನುವುದನ್ನು ಅರಿತು ಮೊದಲು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಸಂಕಲ್ಪ ಮಾಡಿದರು. ಅದರಂತೆ ಮೊದಲು ಸಿರಿಗೆರೆಯಲ್ಲಿಯೇ ಶಾಲೆ ಆರಂಭ ಮಾಡಿ ನಂತರ ರಾಜ್ಯದ ವಿವಿದೆಡೆ ನೂರಾರು ಶಾಲಾ-ಕಾಲೆಜುಗಳನ್ನು ತೆರೆದರು. ಆ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳು ತಲೆಯೆತ್ತಿ ಬಾಳುವಂತೆ ಮಾಡಿದರಲ್ಲದೆ ಸಾವಿರಾರು ಜನರಿಗೆ ಉದ್ಯೋಗವನ್ನೂ ನೀಡಿದರು. ಇಚ್ಛಾಶಕ್ತಿ, ಕಾಯಕ ಶ್ರದ್ಧೆ, ಸತತ ಪರಿಶ್ರಮಗಳೇ ಯಶಸ್ಸಿನ ಗುಟ್ಟು. ಯಶಸ್ಸು ಬೇರೆಯವರ ಸಾಧನೆಯನ್ನು ನೋಡಿದರೆ, ಕೇಳಿದರೆ ಬರುವುದಿಲ್ಲ; ನಾವೂ ಅವರಂತೆ ಪ್ರಯತ್ನ ಮಾಡಬೇಕು. ಅಬ್ದುಲ್ ಕಲಾಮ್ ನಿಮ್ಮಂತೆಯೇ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು. ಆದರೆ ಸತ್ಯ, ಪ್ರಾಮಾಣಿಕತೆ, ಸತತ ಪರಿಶ್ರಮಗಳ ಮೂಲಕ ಅದ್ಭುತ ಯಶಸ್ಸನ್ನು ಸಾಧಿಸಿದರು. ಇಂಥ ಮಹನೀಯರ ಜೀವನ ಸಾಧನೆಗಳು ನಮಗೆಲ್ಲ ಪಾಠವಾಗಬೇಕು ಎಂದರು.

`ಯಶಸ್ಸಿನ ಗುಟ್ಟು’ ಕುರಿತಂತೆ ಗಡಿರಂಗಾಪುರದ ಎಂ. ಯಶೋಧಮ್ಮ ಕರಿಯಪ್ಪ ಮಾತನಾಡಿ, ಇಲ್ಲಿನ ಶ್ರೀಮಠದ ಚಟುವಟಿಕೆಗಳು ಕೇವಲ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗದೆ ನಾಟಕ, ಕಲೆ, ಸಾಹಿತ್ಯ, ಸಂಗೀತ ಮೊದಲಾದ ಸಾಂಸ್ಕೃತಿಕ ಕಾರ್ಯಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿವೆ. ಪೂಜ್ಯರ ನಿರಂತರ ಸಾಮಾಜಿಕ ಕಳಕಳಿಯೇ ಈ ಎಲ್ಲ ಕಾರ್ಯಗಳ ಹಿಂದಿನ ಯಶಸ್ಸಿನ ಗುಟ್ಟು.

ನಾನು ಸರಕಾರಿ ಶಾಲೆಯ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಕಳೆದ 40 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಮನ್ನಿಸಿ ರಾಜ್ಯ, ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿ ಪುರಸ್ಕರಗಳು ಲಭಿಸಿವೆ. ದೂರದರ್ಶನ, ಆಕಾಶವಾಣಿ ಮತ್ತು ಪತ್ರಿಕೆಗಳಲ್ಲೂ ನನ್ನ ಸಂದರ್ಶನ ಬಂದಿದೆ. ನನ್ನ ಈ ಯಶಸ್ಸಿಗೆ ಮೂಲ ಕಾರಣ ಪ್ರಾಮಾಣಿಕತೆ, ಸಮಯಪಾಲನೆ, ಕರ್ತವ್ಯ ನಿಷ್ಠೆ. ಜೊತೆಗೆ ನನ್ನ ಪತಿ ಮತ್ತು ಕುಟುಂಬದ ಸದಸ್ಯರ ಸಹಕಾರವೂ ಇದೆ. ನನ್ನಂತೆ ನನ್ನ ಅನೇಕ ಶಿಷ್ಯರೂ ಉನ್ನತ ಸ್ಥಾನಮಾನಗಳನ್ನು ಗಳಿಸಿದ್ದಾರೆ. ಯಾರೇ ಆಗಲಿ ಯಶಸ್ಸನ್ನು ಪಡೆಯಲು ಕೆಲವು ಆದರ್ಶಗಳನ್ನು ಸ್ವಯಂಪ್ರೇರಿತರಾಗಿ ರೂಢಿಸಿಕೊಳ್ಳಬೇಕು. ನಾವು ಮಾಡುತ್ತಿರುವ ಕೆಲಸಗಳನ್ನು ಆಗಾಗ್ಗೆ ಪರಿಶೀಲಿಸುವ, ಆತ್ಮಾವಲೋಕನ ಮಾಡಿಕೊಳ್ಳುವ ಕೆಲಸವನ್ನೂ ಮಾಡುತ್ತಿರಬೇಕು. ಆದ ತಪ್ಪುಗಳನ್ನು ಸಮರ್ಥಿಸಿಕೊಳ್ಳದೆ ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಾಡುವ ಕೆಲಸದಲ್ಲಿ ಭಯ, ಭಕ್ತಿ ಇರಬೇಕು.

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ದೊಡ್ಡಗುಣವನ್ನು ಹೊಂದಿರಬೇಕು. ಜೀವನದಲ್ಲಿ ಎದುರಾಗುವ ಹತಾಶೆಗಳನ್ನು ಮೆಟ್ಟಿನಿಲ್ಲುವ ಯುಕ್ತಿ, ಶಕ್ತಿ, ಸಹನೆ, ತಾಳ್ಮೆ, ಜಾಣ್ಮೆ, ಆತ್ಮವಿಶ್ವಾಸ, ದೃಢಸಂಕಲ್ಪಗಳಿರಬೇಕು. ಆಗ ಯಶಸ್ಸು ಸುಲಭಸಾಧ್ಯವಾಗುವುದು ಎಂದರು.

ಆರಂಭದಲ್ಲಿ ಸಂಗೀತ ಶಿಕ್ಷಕ ಹೆಚ್.ಎಸ್. ನಾಗರಾಜ್ ಧ್ಯಾನ, ಮೌನ, ವಚನ ಪ್ರಾರ್ಥನೆ, ಶಿವಮಂತ್ರಲೇಖನ, ಶಿಕ್ಷಕ ಸೋಮಶೇಖರ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *