ಕಾಯಕವೇ ಕೈಲಾಸ

ಆಯ್ದಕ್ಕಿ ಮಾರಯ್ಯನವರ ವಚನದ ಈ ಸಾಲು ಲಿಂಗಾಯತ ಧರ್ಮದಲ್ಲಿ ಕಾಯಕಕ್ಕಿರುವ ಮಹತ್ವವನ್ನು ಸೂಚಿಸುತ್ತದೆ. ಅನ್ನ ದೇವರಾದರೆ ಅದನ್ನು ಹುಟ್ಟಿಸುವ ಕಾಯಕವೂ ದೈವಿಕ.

ಲಿಂಗ ಪೂಜೆ ಮನಸ್ಸಿನ ವಿಕಾರಗಳನ್ನು ದೂರಮಾಡಿ ವ್ಯಕ್ತಿತ್ವವನ್ನು ಶುದ್ಧಗೊಳಿಸುತ್ತದೆ. ತಲ್ಲೀನರಾಗಿ ಮಾಡುವ ಕಾಯಕವೂ ವ್ಯಕ್ತಿತ್ವವನ್ನು ಶುದ್ದಿಗೊಳಿಸಿ ಲಿಂಗ ಪೂಜೆಗೆ ಸಮವಾಗುತ್ತದೆ.

ಕಾಯಕದ ತಲ್ಲೀನತೆ ಅನ್ನವನ್ನು ಹುಟ್ಟಿಸುವುದರಿಂದ ಅದರಲ್ಲಿ ತೊಡಗಿದ್ದಾಗ ಲಿಂಗ ಪೂಜೆಯನ್ನೂ ಮರೆಯಬಹುದು. ಕಾಯಕ ಆತ್ಮಶುದ್ಧಿಗೆ ಮಾತ್ರವಲ್ಲ ಸುಖ ಸಮಾಜಕ್ಕೂ ಅವಶ್ಯ.

ಪ್ರಾಮಾಣಿಕವಾಗಿ ದುಡಿದು, ಅವಶ್ಯವಿದ್ದಷ್ಟು ಇಟ್ಟುಕೊಂಡು, ಮಿಕ್ಕಿದನ್ನು ದಾಸೋಹಕ್ಕೆ ವಿನಿಯೋಗಿಸಬೇಕು. ‘ನಾನು ದುಡಿಯಬೇಕು, ನಾವು ಉಣ್ಣಬೇಕು’ ಎನ್ನುವುದು ಶರಣರ ಧ್ಯೇಯ.

ಶರಣರ ಕಾಲದಲ್ಲಿ ವೃತ್ತಿಗಳು ವರ್ಣ, ಜಾತಿಗಳಲ್ಲಿ ಹಂಚಿ ಹೋಗಿದ್ದವು. ವೃತ್ತಿಗಳ ನಡುವೆ ಮೇಲು-ಕೀಳೆಂಬ ಭಾವನೆ ಬೆಳೆದು, ಬೌದ್ಧಿಕ ವೃತ್ತಿ ಶ್ರೇಷ್ಠ, ದೈಹಿಕ ಶ್ರಮ ಕನಿಷ್ಠವೆಂಬ ನಂಬಿಕೆ ಬೆಳೆದಿತ್ತು.

ಬಸವ ಚಳುವಳಿಯ ಪ್ರವಾಹದಲ್ಲಿ ವೃತ್ತಿಗಳ ತಾರತಮ್ಯತೆ, ಜಾತೀಯತೆ ಕೊಚ್ಚಿಹೋದವು. ಯಾವುದೇ ಕಳಂಕವಿಲ್ಲದೆ ವೃತ್ತಿಯ ಹೆಸರಿನಿಂದ ತಮ್ಮನ್ನು ಗುರುತಿಸುಕೊಳ್ಳುವ ಹೆಮ್ಮೆಯ ಪ್ರವೃತ್ತಿ ಬೆಳೆಯಿತು.

(‘ಕಾಯಕ ಸಿದ್ಧಾಂತದ ಆಯಾಮಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)

Share This Article
Leave a comment

Leave a Reply

Your email address will not be published. Required fields are marked *