ಹುನಗುಂದ
“ಇಂದಿನ ಆಧುನಿಕ ಯುಗ ಅನಿಷ್ಟ ಮತ್ತು ಮೌಢ್ಯಗಳ ಕಸದಿಂದ ಕೂಡಿದೆ. ಇದನ್ನು ಕಳೆಯಲು ಬಸವಾದಿ ಶರಣರ ವಚನಗಳ ಅನುಸಂಧಾನ ಅಗತ್ಯವಿದೆ” ಎಂದು ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ. ಸೋಮಶೇಖರ ಹೇಳಿದರು.
ಅವರು ನಗರದ ಗುದ್ಲಿ ಕಾಯಕಯೋಗಿ ಬಸವಪ್ಪ ಹಾದಿಮನಿ ಶರಣರ ೪೪ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
“ಶರಣರು ಶ್ರಮ ಸಂಸ್ಕೃತಿಗೆ ಘನತೆ ಮತ್ತು ಮಾನ್ಯತೆ ತಂದುಕೊಟ್ಟರು. ಮಠಗಳು ಶಿಕ್ಷಣ ಮತ್ತು ದಾಸೋಹ ಕಾರ್ಯ ಮಾಡುವುದರ ಮೂಲಕ ಲೋಕಕಲ್ಯಾಣ ಮಾಡಿದರು. ಕನ್ನಡದ ವಚನಗಳು ಸ್ವಾಸ್ಥ್ಯ ಬದುಕಿನ ಪ್ರತಿಬಿಂಬ. ಅದರ ಬೆಳಕಿನಲ್ಲಿ ನಾವು ಸಾಗಬೇಕು” ಎಂದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ಲೇಖಕ ಡಾ. ಅಶೋಕ ನರೋಡೆ ಮಾತನಾಡಿ, “ಶರಣರು ತೋರಿದ ಹಾದಿಯಲ್ಲಿ ಎಲ್ಲರೂ ನಡೆಯಬೇಕು. ವಚನ ಸಾಹಿತ್ಯ ಸರ್ವರ ಬಾಳಿನ ಬದಲಾವಣೆಯ ಆಶಯವನ್ನು ಹೊಂದಿದೆ. ಅದು ಸಮಾಜದ ಅಭಿವೃದ್ಧಿಗೆ ಮುನ್ನುಡಿ. ಈ ಭಾಗದಲ್ಲಿ ಶರಣತತ್ವ ಪಾಲಿಸಿ ಕಾಯಕ ಮಾಡಿದ ಬಸವಪ್ಪ ಹಾದಿಮನಿ ಅವರ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕು” ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಪ್ರಶಸ್ತಿ ಪಡೆದ ಪುಂಡಲೀಕಪ್ಪ ಸುಂಕದ, ಅಶೋಕ ಬೆಳ್ಳಿ ಹಾಗೂ ಪುಷ್ಪ ಅಂಗಡಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರೇಬಾದವಾಡಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
ಇಳಕಲ್ಲ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಮೀನಗಡ ಶಂಕರರಾಜೇಂದ್ರ ಶ್ರೀಗಳು ಅಧ್ಯಕ್ಷತೆ ಮತ್ತು ಬೆಳವಿ ಶರಣಬಸವ ಅಪ್ಪಗಳು ಸಮ್ಮುಖ ವಹಿಸಿದ್ದರು. ಶಿರೂರ ಡಾ. ಬಸವಲಿಂಗ ಶ್ರೀಗಳು, ಬಾಗೇವಾಡಿ ಸಂಗನಬಸವ ಶ್ರೀಗಳು, ಶಿವಲಿಂಗ ಶರಣರು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎ. ಎಸ್. ಪಾವಟೆ, ಮೇಘಮೈತ್ರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ಕಮತಗಿ, ಶಸಾಪ ತಾಲೂಕಾಧ್ಯಕ್ಷ ಎಸ್.ಎನ್. ಹಾದಿಮನಿ, ಕದಳಿ ವೇದಿಕೆ ಅಧ್ಯಕ್ಷೆ ಡಾ. ಶಿವಗಂಗಾ ರಂಜಣಗಿ ಉಪಸ್ಥಿತರಿದ್ದರು.
ಹಾದಿಮನಿ ಟ್ರಸ್ಟ್ ಕಾರ್ಯಾಧ್ಯಕ್ಷ ವಿ.ಎಂ. ಹಾದಿಮನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಲಲಿತಾ ಹೊಸಪ್ಯಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿ ಪಡೆದವರನ್ನು ಸಂಗಣ್ಣ ಎಮ್ಮಿ ಪರಿಚಯಿಸಿದರು. ಪ್ರಭು ಮಾಲಗಿತ್ತಿಮಠ ಮತ್ತು ಗೀತಾ ತಾರಿವಾಳ ನಿರೂಪಿಸಿದರು.
ಸಂಗಣ್ಣ ಶಿವಣಗಿ ಅವರ ತಂಡದಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು.