ನರೇಂದ್ರ ಮೋದಿ ಸರಕಾರ ಈ ವರ್ಷದ ಬಜೆಟ್ ಮೂಲಕ ತನ್ನ ಮಲತಾಯಿ ಧೋರಣೆ ಮುಂದು ವರಿಸಿದೆ ಎಂದು ದಾವಣಗೆರೆ ಕ್ಷೇತ್ರ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಂಗಳವಾರ ಹೇಳಿದರು.
ದೆಹಲಿಯಲ್ಲಿ ಕೇಂದ್ರ ಬಜೆಟ್ ಬಗ್ಗೆ ಕನ್ನಡ ಪ್ರಭಾದ ಜೊತೆ ಮಾತನಾಡುತ್ತ ಅವರು ಮಿತ್ರ ಪಕ್ಷಗಳ ರಾಜ್ಯಗಳಿಗೆ ಹೆಚ್ಚು ಸ್ಪಂದಿಸುವ ಮೂಲಕ ಕರ್ನಾಟಕವನ್ನು ಕಡೆಗಣಿಸಿದೆ ಎಂದರು.
ರಾಜ್ಯದಲ್ಲಿ ಅನಾವೃಷ್ಟಿ, ಅತಿವೃಷ್ಟಿ ಬಗ್ಗೆಯೂ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಈಗ ರಾಜ್ಯಕ್ಕೆ ಯಾವುದೇ ರೀತಿ ಅನುದಾನ ನೀಡಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಕೇಂದ್ರ ಸಚಿವರು, ಬಿಜೆಪಿ, ಎನ್‌ಡಿಎ ಮಿತ್ರ ಪಕ್ಷಗಳ ಸಂಸದರು ಅನುದಾನ, ಯೋಜನೆ ತರುವಲ್ಲಿ ಅಸಮರ್ಥರಾಗಿದ್ದಾರೆ, ಇದರ ಬಗ್ಗೆ ಚಕಾರ ಕೂಡ ಎತ್ತಿಲ್ಲ ಎಂದು ಸಂಸದೆ ಡಾ.ಪ್ರಭಾ ಚಾಟಿ ಬೀಸಿದರು.
ರಾಜ್ಯದಲ್ಲಿ ಎಐಎಂಎಸ್, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವಂತೆ, ನೀರಾವರಿ ಯೋಜನೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದೆವು. ಆದರೆ, ಅದ್ಯಾವುದಕ್ಕೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದರು.