ವಿಜಯಪುರ
ವಕ್ಫ್ ಭೂ ಕಬಳಿಕೆ ವಿರೋಧಿಸಿ ಭಾರತೀಯ ಕಿಸಾನ್ ಸಂಘದ ವತಿಯಿಂದ ನೆನ್ನೆ ನಡೆದ ಸಭೆಯಲ್ಲಿ ವಿಜಯಪುರ ಜಿಲ್ಲೆಯ ಅನೇಕ ಮಠಾಧೀಶರು ಭಾಗವಹಿಸಿದ್ದಾರೆ. ಭಾರತೀಯ ಕಿಸಾನ್ ಸಂಘ ಬಿಜೆಪಿ, ಸಂಘ ಪರಿವಾರದ ಸಂಸ್ಥೆ.
ವಕ್ಫ್ ವಿಷಯದಲ್ಲಿ ಕೋಮುವಾದಿ ಬಿಜೆಪಿ, ಆರ್ ಎಸ್ ಎಸ್ ನವರ ರಾಜಕೀಯವನ್ನು ಬೆಂಬಲಿಸುತ್ತಾ ಬಸವನಾಡಿನ ಸ್ವಾಮಿಗಳು ಬೀದಿಗಿಳಿದಿರುವುದು ಖಾವಿ ಸಂಸ್ಕೃತಿಗೆ ಹಾಗೂ ಬಸವಾದಿ ಶರಣರಿಗೆ ಮಾಡಿರುವ ಅಪಚಾರ. ಈ ನಡೆ ಬಸವಾನುಯಾಯಿಗಳಿಗೆ ತೀವ್ರ ನೋವು ತಂದಿದೆ ಎಂದು ರಾಷ್ಟ್ರೀಯ ಬಸವ ಸೇನಾ ಜಿಲ್ಲಾಧ್ಯಕ್ಷ ಡಾ ರವಿಕುಮಾರ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘ ಪರಿವಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಈ ಸ್ವಾಮೀಜಿಗಳು ಬಸವಣ್ಣನವರಿಗೆ ಆರೆಸ್ಸೆಸ್ ನವರು ಅಪಚಾರ ಮಾಡಿದಾಗ ಬೀದಿಗಿಳಿಯಬೇಕೆಂಬುದು ನೆನಪಾಗಲಿಲ್ಲ, ಬಸವಾದಿ ಶರಣರ ತತ್ವಕ್ಕೆ ವಿರುದ್ಧವಾದ ವಚನ ದರ್ಶನವೆಂಬ ವಿವಾದಾತ್ಮಕ ಪುಸ್ತಕವನ್ನು ಆರೆಸ್ಸೆಸ್ ನವರು ರಾಜ್ಯದ ತುಂಬೆಲ್ಲಾ ಬಿಡುಗಡೆ ಮಾಡಿದಾಗಲೂ ಯಾವೊಬ್ಬ ಸ್ವಾಮಿಯೂ ಬೀದಿಗಿಳಿದು ಪ್ರತಿಭಟಿಸಲಿಲ್ಲ.
ಆದರೆ ರಾಜಕೀಯ ಕಾರಣಕ್ಕೆ ಈಗ ಬೀದಿಗಿಳಿದಿದ್ದಾರೆ. ಇವರಿಗೆ ಬಸವಣ್ಣನವರ ಹೆಸರು ಮಾತ್ರ ಬೇಕು ಆದರೆ ಅವರ ತತ್ವಗಳು ಬೇಕಿಲ್ಲ. ಈ ರೀತಿ ಜನರಲ್ಲಿ ಒಡಕು ಮೂಡಿಸುವ ಹೋರಾಟಗಳಲ್ಲಿ ಭಾಗವಹಿಸುವುದು ಶರಣ ಪರಂಪರೆಗೆ ಮಾಡಿದ ಅವಮಾನವಾಗಿದೆ. ಅಲ್ಲದೇ ಈ ರೀತಿಯ ಸ್ವಾಮೀಜಿಗಳ ನಡುವಳಿಕೆ ಬಸವಾನುಯಾಯಿಗಳಲ್ಲಿ ಭ್ರಮನಿರಸನ ಉಂಟು ಮಾಡಿದೆ ಎಂದು ಪ್ರಕಟಣೆಯೊಂದರಲ್ಲಿ ಹೇಳಿದ್ದಾರೆ.