ಬೆಂಗಳೂರು
‘ದೇಶದಲ್ಲಿ ಕೋಮುವಾದಿ ಹಾಗೂ ಮನುವಾದಿ ಶಕ್ತಿಗಳು ಹುಚ್ಚೆದ್ದು ಕುಣಿಯುತ್ತಿವೆ. ಜಾತಿಯ ಹೆಸರಿನಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿವೆ. ಇದು ದೇಶದ ಏಕತೆ ಮತ್ತು ಸಮಗ್ರತೆಗೆ ಮಾರಕವಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಕಳವಳ ವ್ಯಕ್ತಪಡಿಸಿದರು.
ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ನಾಗಪುರದ ಬುದ್ಧಿಸ್ಟ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ‘ಮಹಾನಾಯಕ ಸಾಮ್ರಾಟ್ ಅಶೋಕ’ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾತಿರಹಿತ ಸಮಸಮಾಜ ನಿರ್ಮಿಸುವುದಕ್ಕೆ ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನಾಯಕರು ಹೋರಾಡಿದರು. ಆದರೆ, ಇದುವರೆಗೂ ಸಾಧ್ಯವಾಗಿಲ್ಲ. ಇಂದಿಗೂ ಸಮಾಜದಲ್ಲಿ ಜಾತಿಯತೆ, ಮೂಢನಂಬಿಕೆ, ಅಸ್ಪೃಶ್ಯತೆ ಆಚರಣೆಯಲ್ಲಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಸಾಮ್ರಾಟ ಅಶೋಕನ ಆಡಳಿತ ಕಾಲದಲ್ಲಿ ಎಲ್ಲ ಧರ್ಮಗಳನ್ನು ಗೌರವಿಸಲಾಗುತ್ತಿತ್ತು. ಅಶೋಕನ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ದೇಶದಲ್ಲಿರುವ 140 ಕೋಟಿ ಜನ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಬಲರಾದಾಗ ಮಾತ್ರ ನಮ್ಮ ದೇಶ ಬಲಾಢ್ಯವಾಗಲಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಕಾರ್ಮಿಕರ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಕತ್ತಲೆಯನ್ನು ಓಡಿಸುವ ಶಕ್ತಿ ಬೌದ್ಧಧರ್ಮಕ್ಕೆ ಇದೆ. ಸಮಾಜದಲ್ಲಿ ಶಾಂತಿ, ಪ್ರೀತಿ, ಸಮಾನತೆ ಪ್ರಸಾರ ಮಾಡುವುದೇ ಬೌದ್ಧದಮ್ಮದ ಅನುಯಾಯಿಗಳ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ದಸಂಸ ರಾಜ್ಯಾಧ್ಯಕ್ಷ ಡಿ.ಜಿ.ಸಾಗರ್, ದಸಂಸ ಸಂಚಾಲಕ ಅಣ್ಣಯ್ಯ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
(ಕೃಪೆ ವಾರ್ತಾ ಭಾರತಿ)