ರಾಯಚೂರು
ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪ ನನ್ನ ಕನಸಾಗಿದೆ. ವೃದ್ಧಾಪ್ಯದ ಕೊನೆಯ ದಿನಗಳನ್ನು ಎಣಿಸುತ್ತಿರುವ ನಾನು, ಸಾವಿಗೆ ಮೊದಲು ಬಸವಕಲ್ಯಾಣದ ಅನುಭವ ಮಂಟಪವನ್ನು ಕಾಣುವ ಕಾತುರತೆ ಹೊಂದಿದ್ದೇನೆ ಎಂದು ಹಿರಿಯ ಶರಣ ಸಾಹಿತಿ ಗೊ.ರು. ಚನ್ನಬಸಪ್ಪನವರು ತಮ್ಮ ಮನದಿಂಗಿತ ವ್ಯಕ್ತಪಡಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಎಂ.ನಾಗಪ್ಪ ವಕೀಲರು ಪ್ರತಿಷ್ಠಾನ, ಜಿಲ್ಲಾ ಕದಳಿ ವೇದಿಕೆ, ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಅಭಿನಂದನೆ ಮತ್ತು ಗೌರವ ಸನ್ಮಾನ ಸ್ವೀಕರಿಸಿ, ಸಮಾರಂಭದಲ್ಲಿ ಅವರು ಮಾತನಾಡಿದರು.

12ನೇ ಶತಮಾನದ ಅನುಭವ ಮಂಟಪ ಆಧುನಿಕ ಪರಿಭಾಷೆಯಲ್ಲಿ ಅದೊಂದು ಲೋಕ ಸೋಜಿಗದ ಸಂಸತ್ತು, ವೈಚಾರಿಕತೆಯ ವಿಜಯವಾಗಿದೆ. ಸನಾತನವಾದಿಗಳು ತಮ್ಮ ಧರ್ಮವೇ ಸುಡುವುದೆಂದು ತಿಳಿದು ಅಂದು ಶರಣರಿಗೆ ಕಿರುಕುಳ ಕೊಡಲು ಪ್ರಾರಂಭಿಸಿದರು. ಶರಣರು ಸೃಷ್ಟಿಸಿದ ವಚನ ಸಾಹಿತ್ಯವನ್ನು ನಾಶಮಾಡಲು ಸಂಪ್ರದಾಯವಾದಿಗಳು ಪ್ರಾರಂಭಿಸಿದರು. ದಿಗ್ಭ್ರಾಂತರಾದ ಶರಣರು ಉಳಿದಂತಹ ವಚನಗಳನ್ನು ಕಟ್ಟಿಕೊಂಡು ಕಲ್ಯಾಣವನ್ನು ಬಿಡಬೇಕಾಯಿತು. ಅದೊಂದು ಐತಿಹಾಸಿಕವಾದ ದುರಂತವೆಂದು ಗೊರುಚ ಪ್ರಸ್ತಾಪಿಸಿದರು.

ಮಸ್ಕಿ ನಾಗರಾಜ ಮಾತನಾಡುತ್ತ, 25 ವರ್ಷಗಳ ಹಿಂದೆ ಅಂದರೆ 2000ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನವನ್ನು ರಾಯಚೂರಲ್ಲಿ ಮಾಡಿದ್ದೆವು. ಆ ದಿನಗಳಿಂದ ಗೊರುಚರವರು ನಮ್ಮ ಜಿಲ್ಲಾ ಪರಿಷತ್ತಿಗೆ ಆತ್ಮೀಯರು ಮತ್ತು ಮಾರ್ಗದರ್ಶಕರು. ಹಿರಿಯರ ಒಡನಾಟದಲ್ಲಿ ಪರಿಷತ್ತನ್ನು ನಾವಿಂದು ಗಟ್ಟಿಯಾಗಿ ಕಟ್ಟಲು ಸಾಧ್ಯವಾಗಿದೆ ಎಂದರು. ಮಹಾಂತೇಶ ಮಸ್ಕಿ ಆಶಯ ನುಡಿಗಳನ್ನಾಡಿದರು.
ಅಭಿನಂದನಾ ಮಾತುಗಳನ್ನು ಡಾ. ಚನ್ನಬಸವ ಹಿರೇಮಠ ಆಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಚಂದ್ರಶೇಖರ ಮಿರ್ಜಾಪುರ ವೀರಶೈವ ಲಿಂಗಾಯತ ಮಹಾಸಭಾ,
ಶರಣ ಭೂಪಾಲ ನಾಡಗೌಡ ವೀರಶೈವ ಸಮಾಜ, ರಾಚನಗೌಡ ಕೋಳೂರು ಬಸವ ಕೇಂದ್ರ, ಡಾ. ಸರ್ವಮಂಗಳ ಸಕ್ರಿ, ಜಾಗತಿಕ ಲಿಂಗಾಯತ ಮಹಾಸಭಾ, ಮಹಿಳಾ ಘಟಕ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಮಸ್ಕಿ ನಾಗರಾಜ ಅಧ್ಯಕ್ಷ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಲಲಿತ ಬಸವನಗೌಡ ಉಪಸ್ಥಿತರಿದ್ದರು.
ಪರಿಷತ್ತಿನ ಕಾರ್ಯದರ್ಶಿ ಅಂಬಾಪತಿ ಪಾಟೀಲ ಸ್ವಾಗತಿಸಿದರು. ವಂದನಾರ್ಪಣೆಯನ್ನು ವೀರಭದ್ರಪ್ಪ ವಕೀಲರು, ರೇಖಾ ಪಾಟೀಲ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಮತ್ತು ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.