ಕೂಡಲಸಂಗಮ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹಲವಾರು ಪೂಜ್ಯರು, ಬಸವ ಸಂಘಟನೆಗಳ ಮುಖಂಡರು ಮಂಗಳವಾರ ಬಸವಣ್ಣನವರ ಐಕ್ಯ ಸ್ಥಳದಲ್ಲಿ ಸಭೆ ಸೇರಿದ್ದರು. ಬಸವ ಸಂಸ್ಕೃತಿ ಅಭಿಯಾನವನ್ನು ವಿವಿಧ ಜಿಲ್ಲೆಗಳಲ್ಲಿ ಯಶಸ್ವಿಗೊಳಿಸಿದ ಕಾರ್ಯಕರ್ತರನ್ನು ಗುರುತಿಸುವುದು ಸಭೆಯ ಉದ್ದೇಶವಾಗಿತ್ತು.
ನಿರೀಕ್ಷೆ ಮೀರಿ ಯಶಸ್ಸು ಕಂಡ ಅಭಿಯಾನ, ಲಿಂಗಾಯತರ ವಿರೋಧಿಗಳ ನಿದ್ದೆ ಕೆಡಿಸಿದೆ. ಅವರು ಮಠಾಧೀಶರ, ಮುಖಂಡರ ಟಾರ್ಗೆಟ್ ಮಾಡುತ್ತಾ, ವ್ಯವಸ್ಥಿತವಾಗಿ ಸುಳ್ಳುಗಳನ್ನು ಹರಡುತ್ತಾ ಲಿಂಗಾಯತರ ವಿರುದ್ದ ಮಿಕ್ಕ ಸಮುದಾಯಗಳ ಪ್ರಚೋದಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಕನ್ನೇರಿ ಸ್ವಾಮಿಯ ನೆಪ ಮಾಡಿಕೊಂಡು ಶನಿವಾರ ಗದಗಿನಲ್ಲಿಯೂ ಸೇರಿದಂತೆ ಹಲವಾರು ಕಡೆ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.

ಇದಕೆಲ್ಲಾ ಹಲವಾರು ಪೂಜ್ಯರು, ಒಕ್ಕೂಟದ ಪದಾಧಿಕಾರಿಗಳು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅಭಿಯಾನದ ನಂತರ ಮೊದಲ ಬಾರಿ ಪೂಜ್ಯರು ಹಾಗೂ ನಾಡಿನ ಬಸವ ಸಂಘಟನೆಗಳ ಪ್ರಮುಖರು ಕೂಡಲಸಂಗಮದಲ್ಲಿ ಅಭಿನಂದನಾ ಕಾರ್ಯಕ್ರಮಕ್ಕೆ ಸೇರಿದ್ದರು. ವೇದಿಕೆಯಿಂದ ಈ ಎಲ್ಲಾ ಮಂಗಾಟಗಳಿಗೆ ಅವರ ಪ್ರತಿಕ್ರಿಯೆ ಹೇಗೆ ಬರುತ್ತದೆ ಎಂಬ ಕುತೂಹಲ ಹಲವರಲ್ಲಿತ್ತು.
ಭಾನುವಾರ ಸಂಜೆ ಬೆಂಗಳೂರಿನ ಪತ್ರಕರ್ತರೊಬ್ಬರು ಕರೆ ಮಾಡಿ ಲಿಂಗಾಯತ ಮಠಾಧೀಶರನ್ನು ಬೆದರಿಸುವ ಪ್ರಯತ್ನ ಯಶಸ್ವಿಯಾಗುತ್ತದೆಯೇ, ಇನ್ನು ಮುಂದೆ ಅಭಿಯಾನದಂತಹ ಕಾರ್ಯಕ್ರಮಗಳನ್ನು ರೂಪಿಸಲು ಮಠಾಧೀಶರು ಮುಂದೆ ಬರುತ್ತಾರೆಯೇ, ಎಂದು ಕೇಳಿದರು.
ಹಾಗೆಯೇ, ಸಂಘ ಪರಿವಾರದವರ ಪ್ರತಿಭಟನೆ ನೋಡಿ ಬಸವ ಕಾರ್ಯಕರ್ತರು ಆತಂಕದಲ್ಲಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಕೇಳಿದರು. ಇದಕ್ಕೆ ಉತ್ತರ ನಾಳಿನ ಕಾರ್ಯಕ್ರಮದಲ್ಲಿ ಸಿಗುತ್ತದೆ ಎಂದು ಹೇಳಿದ್ದೆ.

ಮಠಾಧೀಶರ ಬೆದರಿಸಿ ಬಾಯಿ ಮುಚ್ಚಿಸುವ ಉದ್ದೇಶ ಯಾರಿಗಾದರು ಇದ್ದಿದ್ದರೆ ಅದು ಮೋದಿಯವರ ನೋಟು ರದ್ದತಿಯಷ್ಟೇ ಸಫಲವಾಗಿದೆ ಎಂದು ಕಾರ್ಯಕ್ರಮ ಸ್ಪಷ್ಟಪಡಿಸಿತು. ಎಲ್ಲರೂ ಮಾತನಾಡಿದ್ದು ಅಭಿಯಾನವನ್ನು ವಿವಿಧ ರೀತಿಯಲ್ಲಿ ಮುಂದುವರಿಸುವ ಬಗ್ಗೆಯೇ. ಯಾರ ಮಾತಿನಲ್ಲಿಯೂ ಹಿಂಜರಿಕೆ, ಆತಂಕ ಯಾವುದೂ ಕಾಣಿಸಲಿಲ್ಲ.
ಅಭಿಯಾನ ಮುಂದುವರೆಸುವ ಪೂಜ್ಯರ ಸಲಹೆಗಳನ್ನು ಬಸವ ಸಂಘಟನೆಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅವರ ಹುರುಪು, ಸಂಭ್ರಮ ನೋಡಿದರೆ ಎಲ್ಲರೂ ಇನ್ನೂ ಅಭಿಯಾನದ ಗುಂಗಿನಲ್ಲಿಯೇ ಇದ್ದಂತೆ ಕಾಣಿಸಿತು. ಅಲ್ಲಲ್ಲಿ ಕಾಣುತ್ತಿರುವ ಸಂಘ ಪರಿವಾರದ ಪ್ರತಿರೋಧವನ್ನು ಯಾರೂ ಗಂಭೀರವಾಗಿ ತೆಗೆದುಕೊಂಡ ಹಾಗೆ ಕಾಣಲಿಲ್ಲ.

ಎದೆಯ ಮೇಲೆ ಕಾಲಿಟ್ಟು ಸಾಗುತ್ತೇವೆ: ಶಿವಾನಂದ ಶ್ರೀ
ಸ್ವಾಗತ ಭಾಷಣದ ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಲಿಂಗಾಯತ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಅಭಿಯಾನಕ್ಕೆ ದುಡಿದ ಬಸವ ಭಕ್ತರನ್ನು ಅಭಿನಂದಿಸಿದರು.
ಅಭಿಯಾನದ ಯಶಸ್ಸು ಇಡೀ ನಾಡಿನ ತುಂಬಾ ಸಂಚಲನವನ್ನು ಮೂಡಿಸಿದೆ. ಅದಕ್ಕೆ ಕೆಲವರು ತಲೆಕೆಡಿಸಿಕೊಂಡು ಹೊಟ್ಟೆಉರಿಯಿಂದ ಸಭೆಗಳನ್ನು ನಡೆಸುತ್ತಿದ್ದಾರೆ. ತಪ್ಪಾಗಿದ್ದರೆ ತಲೆ ಮೇಲೆ ಕಾಲಿಟ್ಟುಕೊಂಡು ಕ್ಷಮೆ ಕೇಳುತ್ತೇವೆ. ತಪ್ಪಿಲ್ಲದಿದ್ದರೆ ನಿಮ್ಮ ಎದೆಯ ಮೇಲೆ ಕಾಲಿಟ್ಟು ಮುಂದೆ ಸಾಗುತ್ತೇವೆ, ಎಂದು ಎಚ್ಚರಿಕೆ ನೀಡಿದರು.
ಅಭಿಯಾನದಲ್ಲಿ ಅರಿವಿನ ಮಾತುಗಳಿಂದ ಎದ್ದು ಕಂಡವರು ಶಿವಾನಂದ ಶ್ರೀಗಳು. ಸೂಕ್ಶ್ಮ ವಿಷಯಗಳನ್ನೂ ಸಂಯಮದಿಂದ ವಿವರಿಸುವ ಪೂಜ್ಯರಿಂದ ತೀಕ್ಷ್ಣ ತಿರುಗೇಟು ಬರುತ್ತಿದ್ದಂತೆಯೇ ಸಭೆಯಲ್ಲಿದ್ದ ಸಾವಿರಕ್ಕೂ ಹೆಚ್ಚು ಬಸವ ಸಂಘಟನೆಗಳ ಕಾರ್ಯಕರ್ತರು ಚಪ್ಪಾಳೆ ಹೊಡೆದು ಸ್ವಾಗತಿಸಿದರು.

ಪಾದಯಾತ್ರೆಗೆ ಸಜ್ಜು: ಮನಗುಂಡಿ ಶ್ರೀ
ಕನ್ನೇರಿ ಸ್ವಾಮಿಗೆ ವಿವಾದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ಬಂದಿರುವುದು ಮನಗುಂಡಿಯ ಪೂಜ್ಯ ಬಸವಾನಂದ ಸ್ವಾಮೀಜಿಯವರಿಂದ. ಈ ವಿವಾದದ ಮೇಲೆ ಅವರು ಮಾಡಿರುವ ವಿಡಿಯೋಗಳು ವೈರಲ್ ಆಗಿವೆ.
ಅಭಿಯಾನ ನಿಲ್ಲಬಾರದೆಂದು ಹೇಳಿ, ಹಳ್ಳಿ ಹಳ್ಳಿಗಳಲ್ಲಿ ಜನ ಜಾಗೃತಿಯನ್ನು ಮುಂದುವರೆಸಲು ಮಠಾಧೀಶರು ಪಾದಯಾತ್ರೆ ನಡೆಸಬೇಕೆಂದು ಸಲಹೆ ನೀಡಿದರು. ಶ್ರೀಗಳು ಖುದ್ದಾಗಿ ಎರಡು ಪಾದಯಾತ್ರೆಗಳನ್ನು ಹಮ್ಮಿಕೊಳ್ಳುವ ಆಲೋಚನೆಯಲ್ಲಿದ್ದಾರೆ.
ಶ್ರೀಗಳು ಮುಂಚೆಯೂ ಪಾದಯಾತ್ರೆ ಮಾಡಿದ್ದರೂ ಈ ಬಾರಿ ಜನ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳಿಗೆ ಒತ್ತು ಕೊಡುವುದಾಗಿ ಹೇಳಿದರು.
ಪಾದಯಾತ್ರೆ ನಮ್ಮ ಜಿಲ್ಲೆಯ ಮೂಲಕ ಸಾಗಿದರೆ ನಾವೂ ಸೇರಿಕೊಳ್ಳುತ್ತೇವೆ ಎಂದು ಕೆಲವು ಬಸವ ಕಾರ್ಯಕರ್ತರು ಉತ್ಸಾಹ ತೋರಿಸಿದರು. ದಾರಿಯುದ್ದಕ್ಕೂ ಬಸವ ಸಂಘಟನೆಗಳ ಬೆಂಬಲ ತೆರೆದುಕೊಳ್ಳುವ ಸಾಧ್ಯತೆ ಶ್ರೀಗಳಿಗೆ ಮತ್ತಷ್ಟು ಹುರುಪು ತರುವಂತಹ ವಿಷಯ.
ರಾಜ್ಯದ ಮೂಲೆ ಮೂಲೆಗಳಲ್ಲೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ಬಸವ ತತ್ವ ಬಿತ್ತುವ ಯಾವುದೇ ಕಾರ್ಯಕ್ರಮಕ್ಕೂ ತನುಮನಧನ ಹಾಕಿ ನಿಸ್ವಾರ್ಥದಿಂದ ದುಡಿಯುತ್ತಿರುವುದೇ ಇಂದು ಲಿಂಗಾಯತ ಧರ್ಮದ ವಿರೋಧಿಗಳಿಗೆ ತಲೆನೋವಾಗಿರುವುದು.

ಒಗ್ಗಟ್ಟಿನಲ್ಲಿ ಬಲವಿದೆ: ಜಾಮದಾರ್
ಲಿಂಗಾಯತರಲ್ಲಿ ಈಗ ಕಾಣಿಸುತ್ತಿರುವ ಸಂಘಟನಾ ಸಾಮರ್ಥ್ಯಕ್ಕೆ ಗಮನ ಸೆಳೆದವರು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ್.
ಪೂಜ್ಯರ ಮತ್ತು ಸಂಘಟನೆಗಳ ನಡುವೆ ಬೆಳೆದಿರುವ ಐಕ್ಯತೆ ಅಭಿಯಾನದ ಯಶಸ್ಸಿಗೆ ಮುಖ್ಯ ಕಾರಣವಾಯಿತು. ಅಭಿಯಾನಕ್ಕೆ ಪೈಪೋಟಿ ನೀಡಲು ಹೊರಟ ದಸರಾ ದರ್ಬಾರ್, ಏಕತಾ ಸಮಾವೇಶಗಳು ನೆಲ ಕಚ್ಚಿದವು. ಮುಂದಿನ ದಿನಗಳಲ್ಲಿ ಲಿಂಗಾಯತ ಸಮಾಜದ ಐಕ್ಯತೆಯನ್ನು ಗಟ್ಟಿಗೊಳಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು, ಎಂದು ಜಾಮದಾರ್ ಹೇಳಿದರು.
ಅಭಿಯಾನದ ಮುಂದುವರೆದ ಭಾಗವಾಗಿ ನಿಜಾಚರಣೆಗಳಲ್ಲಿ ಏಕತೆ ತರುವ ಪ್ರಯತ್ನ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ಅದಕ್ಕೆ ಮಠಾಧೀಶರ ಮುದ್ರೆ ಬಿದ್ದ ನಂತರ ಎಲ್ಲಾ ಜಿಲ್ಲೆಗಳಲ್ಲಿ ಪೂಜ್ಯರಿಗೆ, ವಚನ ಮೂರ್ತಿಗಳಿಗೆ ತರಬೇತಿ ನೀಡಲಾಗುವುದು, ಎಂದರು.
ನಿಜಾಚರಣೆಯ ಮೇಲೆ ಗಮನ ಕೊಡದಿದ್ದು ಅಭಿಯಾನದ ಮೇಲೆ ಬಂದ ಒಂದು ಟೀಕೆ. ಈ ಲೋಪವನ್ನು ಈಗ ಸರಿಪಡಿಸುವ ಪ್ರಯತ್ನ ನಡೆಯುತ್ತಿರುವುದು ಉತ್ತಮವಾದ ಬೆಳವಣಿಗೆ.
ಆರಂಭದಿಂದ ಸಮಾರೋಪದವರಗೆ ಅಭಿಯಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಪಾತ್ರ ದೊಡ್ಡದ್ದಿತ್ತು. ಆದರೆ ಅಭಿಯಾನ ಕೇವಲ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಕ್ರಮವಾಗಲು ಬಿಡದೆ ಎಲ್ಲಾ ಬಸವ ಸಂಘಟನೆಗಳ ಕಾರ್ಯಕ್ರಮವಾಗಿಸಿದ್ದು ಜಾಮದಾರ್. ಇದು ಅಭಿಯಾನದ ಯಶಸ್ಸಿಗೆ ಬಹು ದೊಡ್ಡ ಕಾರಣವಾಯಿತು.
ಈ ಒಂದು ನಿರ್ಣಯದಿಂದ ವೀರಶೈವ ಮಹಾಸಭೆಯೂ ಸೇರಿದಂತೆ ಎಲ್ಲಾ ಬಸವ ಸಂಘಟನೆಗಳು ಪೂಜ್ಯರ ಜೊತೆ ಒಂದು ಬಿಗಿ ಮುಷ್ಟಿಯಂತೆ ದುಡಿಯಲು ಸಾಧ್ಯವಾಯಿತು.

ರಾಷ್ಟ್ರಮಟ್ಟದ ಬಸವ ಜಯಂತಿ: ಭಾಲ್ಕಿ ಶ್ರೀ
ಅಭಿಯಾನದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ನೇತೃತ್ವ ವಹಿಸಿದ್ದು ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು. ಅಭಿಯಾನದಲ್ಲಿ ಪ್ರಬುದ್ಧ, ಮೃದು ಮಾತುಗಳಿಂದ ಸ್ಪಷ್ಟವಾಗಿ ಬಸವ ತತ್ವವನ್ನು ಜನರ ಮನಸ್ಸಿಗೆ ಮುಟ್ಟಿಸಿದವರು ಅವರು. ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ನೀಡಿದವರೂ ಅವರೇ.
ಕೂಡಲ ಸಂಗಮದಲ್ಲಿ ಎಲ್ಲರ ಗಮನ ಸೆಳೆದ ರಾಷ್ಟ್ರೀಯ ಮಟ್ಟದ ಬಸವ ಜಯಂತಿ ಆಚರಿಸುವ ಆಲೋಚನೆ ಬಂದಿದ್ದೂ ಇವರಿಂದಲೇ.
ನಾಡಿನ ಎಲ್ಲಾ ಪೂಜ್ಯರು, ಬಸವ ಸಂಘಟನೆಗಳು ಸೇರಿ ವರ್ಷಕ್ಕೊಂದು ಜಿಲ್ಲೆಯಲ್ಲಿ ಅಥವಾ ರಾಜ್ಯದ ಹೊರಗೂ ರಾಷ್ಟ್ರದ ಗಮನ ಸೆಳೆಯುವಂತೆ ಬಸವ ಜಯಂತಿಯನ್ನು ಆಚರಿಸಬೇಕಂದು ಸಲಹೆ ನೀಡಿದರು.
ಇದು ಜಾರಿಗೆ ಬಂದರೆ ಪ್ರತಿ ವರ್ಷ ಮಿನಿ ಅಭಿಯಾನದ ರೀತಿಯಲ್ಲಿ ನಡೆಯುವ ಬಸವ ಜಯಂತಿ ರಾಷ್ಟ್ರಮಟ್ಟದಲ್ಲಿ ಬಸವ ತತ್ವವನ್ನು ಬಿತ್ತಲು ನೆರವಾಗುತ್ತದೆ. ಎಲ್ಲಾ ಪೂಜ್ಯರು, ಸಂಘಟನೆಗಳು ವೇದಿಕೆ ಹಂಚಿಕೊಂಡರೆ ಮುಂದಿರುವ ವಿಷಯಗಳ ಬಗ್ಗೆ ಚರ್ಚಿಸಲು, ಹೊಸ ಕಾರ್ಯಕ್ರಮಗಳನ್ನು ರೂಪಿಸಲೂ ಸಾಧ್ಯವಾಗುತ್ತದೆ. ಲಿಂಗಾಯತ ಧರ್ಮದ ಹೋರಾಟಕ್ಕೆ, ಸಂಘಟನೆಗೆ ಶಕ್ತಿ ತುಂಬಲು ಸಮರ್ಥವಾಗಿರುವ ಈ ಸಲಹೆಯನ್ನು ಹಲವರು ಅನುಮೋದಿಸಿದರು.
ಮುಂದುವರೆದು ಭಾಲ್ಕಿ ಶ್ರೀಗಳು ‘ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ತಾಲ್ಲೂಕು, ಗ್ರಾಮ ಮಟ್ಟಗಳಲ್ಲಿ, ಯುವಕರಲ್ಲಿ ಜಾಗೃತಿ ಮೂಡಿಸಬೇಕು, ಒಳ ಪಂಗಡಗಳನ್ನು ಪಾಲ್ಗೊಳ್ಳುವಂತೆ ಮಾಡಬೇಕು.
ಪ್ರತಿಯೊಬ್ಬರು ವರ್ಷಕ್ಕೆ 10 ಕುಟುಂಬಗಳನ್ನು ಬಸವಮಯ ಗೊಳಿಸಬೇಕು. ಪ್ರೀತಿಯಿಂದ ಧರ್ಮ ಪ್ರಚಾರ ಮಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಕ್ರೈಸ್ತ ಮಿಷಿನರಿಗಳಂತೆ ಧರ್ಮ ಪ್ರಚಾರ ಮಾಡಿ. ಒಮ್ಮೆಲೇ ಜಗಲಿಯಿಂದ ದೇವರ ತೆಗೆಸಲು ಹೋಗಬೇಡಿ,’ ಎಂದು ಹೇಳಿದರು.

ದಶಕಗಳ ಪರಿಶ್ರಮದ ಫಲ: ಇಳಕಲ್ ಶ್ರೀ
ಅಭಿಯಾನದ ಯಶಸ್ಸು ಕೆಲವರಿಗೆ ಅಚ್ಚರಿ ಮೂಡಿಸಿರಬಹುದು ಆದರೆ ಇದು ಆಕಸ್ಮಿಕವಲ್ಲ, ಇದು ಎರಡು ಮೂರು ತಿಂಗಳ ಪ್ರಯತ್ನಗಳ ಫಲವೂ ಅಲ್ಲ.
ಇಳಕಲ್ಲ ಪೂಜ್ಯ ಗುರು ಮಹಾಂತ ಸ್ವಾಮಿಗಳು ಶ್ರೀಗಳು ಹೇಳಿದಂತೆ ಐದಾರು ದಶಕಗಳಿಂದ ಬಸವ ಸಂಘಟನೆಗಳು ಮನೆಯಲ್ಲಿ ಮಹಾಮನೆಯಂತಹ ಕಾರ್ಯಕ್ರಮಗಳ ಮೂಲಕ ಬಸವ ತತ್ವ ಬಿತ್ತುವ ಕಾರ್ಯ ನಡೆಸಿವೆ. ಆ ಒಟ್ಟೂ ಪರಿಶ್ರಮದಿಂದ ಅಭಿಯಾನ ಭರ್ಜರಿಯಾಗಿ ನಡೆಯಿತು.
‘ತಳ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಮುಂದುವರೆಸಬೇಕು. ಮನೆಯಲ್ಲಿ ಲಿಂಗ, ವಚನ, ವಿಭೂತಿ ಇಟ್ಟುಕೊಂಡು ಬರುವ ಬಂಧು ಮಿತ್ರರಿಗೆ ಕೊಡಬೇಕು. ಪ್ರತಿಯೊಬ್ಬರು ಪ್ರತಿ ವರ್ಷ 10 ಜನರಿಗೆ ಲಿಂಗದೀಕ್ಷೆ ಕೊಡಿಸಬೇಕು. ಸಮಾಜವನ್ನು ಬಸವಮಯ ಗೊಳಿಸಬೇಕು,’ ಎಂದು ಶ್ರೀಗಳು ಹೇಳಿದರು.
ಸೌಜನ್ಯದ ಸಾಕಾರ ಮೂರ್ತಿಗಳಾದ ಇಳಕಲ್ಲ ಪೂಜ್ಯರು ಸಂಘರ್ಷದ ಸ್ವರೂಪವನ್ನು ಸರಿಯಾಗಿ ಗ್ರಹಿಸಿದ್ದಾರೆ. ಧರ್ಮ ಪ್ರಚಾರ ತೀವ್ರಗೊಳಿಸುವುದೇ ವಿರೋಧಿಗಳಿಗೆ ನಾವು ನೀಡಬಹುದಾದ ಉತ್ತರ.

ಎದೆತಟ್ಟಿ ನಿಲ್ಲಬೇಕು: ಗದಗ ಶ್ರೀಗಳು
ಉಡುಪಿ ಮಂಗಳೂರುಗಳಂತಹ ಊರುಗಳಲ್ಲಿಯೂ ಯಶಸ್ವಿಯಾದ ಅಭಿಯಾನ ಬಹಳ ಜನರ ಕಣ್ಣು ತೆರೆಸಿದೆ. ಅದಕ್ಕೆ ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಿ ಗದಗದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಅಭಿಯಾನದ ವಿರೋಧಿಗಳ ಬಗ್ಗೆ ಮಾತನಾಡಿದರು.
‘ಅಭಿಯಾನದ ಯಶಸ್ಸು ಅಸಹಿಷ್ಣುತೆಯ ಉರಿಯೆಬ್ಬಿಸಿದೆ. ಅಭಿಯಾನಕ್ಕೆ ಬಂದಿರುವ ವಿರೋಧ ಅದರ ಯಶಸ್ಸಿನ ಮುದ್ರೆಯಾಗಿದೆ.
ಅಭಿಯಾನದಲ್ಲಿ ಸಂಯಮದಿಂದ ಬಸವ ತತ್ವದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಇದರ ವಿರುದ್ಧ ಬಂದಿರುವ ಅಸಹನೆ ಲೆಕ್ಕಿಸದೆ ಒಕ್ಕೂಟ ಎದೆತಟ್ಟಿ ನಿಲ್ಲಬೇಕು, ಮುಂದಿನ ಕಾರ್ಯಕ್ಕೆ ಪ್ರೇರಣೆಯಾಗಿ ಬಳಸಿಕೊಳ್ಳಬೇಕು. ಬಸವ ಸಂಘಟನೆಗಳ ಸಹಯೋಗದಲ್ಲಿ ಸಮಾಜದಲ್ಲಿ ಮುಂದೆ ಏನು ಮಾಡಬೇಕೆಂದು ಗುರುತಿಸಬೇಕು.
ಬಹುತ್ವ ಸಂಸ್ಕೃತಿಯ ನಾಡಿನಲ್ಲಿ ಒಂದು ದೇಶ ಒಂದು ಧರ್ಮವೆನ್ನುವುದು ಮೂರ್ಖತನ,’ ಎಂದು ಶ್ರೀಗಳು ಹೇಳಿದರು.
ತಿಂಗಳಿಗೊಂದು ಜಿಲ್ಲೆಯಲ್ಲಿ ಕಾರ್ಯಕ್ರಮ: ಸಾಣೇಹಳ್ಳಿ ಶ್ರೀ
ಎಂದಿನಂತೆ ಲಿಂಗಾಯತ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿರುವುದು ಸಾಣೇಹಳ್ಳಿ ಹಾಗೂ ನಿಜಗುಣಾನಂದ ಶ್ರೀಗಳು.
‘ಟೀಕೆಗಳಿಗೆ ಅಂಜದೆ ಅಭಿಯಾನ ಮುಂದುವರೆಯಬೇಕು, ತಿಂಗಳಿಗೊಂದು ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಬೇಕು. ಡಿಸೆಂಬರ್ 27, 28, 29 ಸಾಣೇಹಳ್ಳಿಯಲ್ಲಿ 35 ವರ್ಷದ ಒಳಗಿನ ಯುವಕರಿಗೆ ನಿಜಾಚರಣೆ ಕಮ್ಮಟ ಏರ್ಪಡಿಸಲಾಗಿದೆ,’ ಎಂದು ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿ ಸಂಕ್ಷಿಪ್ತವಾಗಿ ಹೇಳಿದರು.

ಗಮನಿಸಬೇಕಾದ ಅಂಶಗಳು
ಇವು ವೇದಿಕೆಯಿಂದ ಬಸವಭಕ್ತರಿಗೆ ಬಂದ ಮುಖ್ಯ ಸಂದೇಶಗಳು. ಇದರಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ಅಂಶಗಳಿವೆ.
ಅಭಿಯಾನಕ್ಕೆ ಬಂದಿರುವ ವಿರೋಧದ ಬಗ್ಗೆ ತಲೆ ಕೆಡೆಸಿಕೊಳ್ಳುವ ಬದಲು ಲಿಂಗಾಯತ ಪೂಜ್ಯರು, ಸಂಘಟನೆಗಳು ವಿವಿಧ ರೀತಿಗಳಲ್ಲಿ ಅಭಿಯಾನವನ್ನು ಮುನ್ನಡೆಸುವ ಬಗ್ಗೆ ಚಿಂತಿಸುತ್ತಿದ್ದಾರೆ.
ಶರಣ ತತ್ವ ಚಿಂತಕ ಟಿ.ಆರ್. ಚಂದ್ರಶೇಖರ್ ಹೇಳುವಂತೆ ಇಂದು ಅಜೆಂಡಾ ರೂಪಿಸುತ್ತಿರುವವರು ಲಿಂಗಾಯತರು, ಅದಕ್ಕೆ ಪ್ರತಿಕ್ರಿಯೆ ನೀಡಲು ತಿಣುಕಾಡುತ್ತಿರುವವರು ಸಂಘ ಪರಿವಾರದವರು, ಪಂಚ ಪೀಠದವರು.
ಬಸವ ತತ್ವ ಇಂದು ವೈಯಕ್ತಿಕ, ಸಾಮಾಜಿಕ ಅಭುದ್ಯಯಕ್ಕೆ ಬೇಕಾಗಿರುವ ಶಕ್ತಿಯಾಗಿದೆ. ಸಂಘ ಪರಿವಾರದ ಚಿಂತನೆಗಳು ಒಂದು ವರ್ಗಕ್ಕೆ ಹಿತರಕ್ಷಣೆಗೆ ಬದ್ಧವಾದ ಸವಕಲು ನಾಣ್ಯದಂತೆ ಗೋಚರಿಸುತ್ತವೆ. ಜನರನ್ನು ವೈಚಾರಿಕವಾಗಿ ಗೆಲ್ಲುವುದಕ್ಕಿಂತಲೂ ದಾರಿ ತಪ್ಪಿಸುವ, ಕುತಂತ್ರ ಅಥವಾ ತೋಳ್ಬಲದಿಂದ ಅಧಿಕಾರದ್ದಲ್ಲಿ ಉಳಿಯುವ ಅನಿವಾರ್ಯತೆ ಅವರಲ್ಲಿ ಕಾಣಿಸುತ್ತಿದೆ.

ಕೂಡಲ ಸಂಗಮದಲ್ಲಿ ವ್ಯಕ್ತವಾದ ಪ್ರತಿಯೊಂದು ಅಭಿಪ್ರಾಯ, ಸಲಹೆಯ ಹಿಂದೆಯೂ ಸ್ವತಂತ್ರ ಆಲೋಚನೆಯಿತ್ತು. ನೂರಾರು ಸಂಘಟನೆಗಳು, ಪೂಜ್ಯರು ಸ್ವತಂತ್ರವಾಗಿ ಆಲೋಚಿಸಿ ಒಂದೇ ದಿಕ್ಕಿನಲ್ಲಿ ಸಾಗುತ್ತಿರುವ ವಿಕೇಂದ್ರೀಕೃತ ವ್ಯವಸ್ಥೆ ಲಿಂಗಾಯತ ಧರ್ಮ. ಇವರ ನಡುವೆ ಸಮನ್ವಯತೆ ಸಾಧಿಸುತ್ತಿರುವುದು ಬಸವ ತತ್ವದ ಬದ್ಧತೆ. ಇಲ್ಲಿ ದುಡಿಯುವ ಕೈಗಳು ನೂರಾರಿದ್ದರೆ ಆಲೋಚಿಸುವ ತಲೆಗಳೂ ನೂರಾರಿವೆ. ಇದು ನಮ್ಮ ನಿಜವಾದ ಸಾಮರ್ಥ್ಯ.
ನಮ್ಮ ಸೈದ್ಧಾಂತಿಕ ವಿರೋಧಿಗಳಲ್ಲಿ ಸ್ಕ್ರಿಪ್ಟ್ ಬರೆಯುವವರು ಕೆಲವರು, ಅದಕ್ಕೆ ತಕ್ಕಂತೆ ಕುಣಿಯುವವರು ಹಲವರು. ಲಿಂಗಾಯತರಲ್ಲಿ ಆಟವಾಡಿಸುವವರು, ಆಡುವವರು ಒಬ್ಬರೇ.
ಕೂಡಲಸಂಗಮದಲ್ಲಿ ಕೇಳಿಸಿದ್ದು ವಿಶ್ವಾಸದ ಮಾತುಗಳು. ಇವೆಲ್ಲಾ ಒಂದು ಬಲಿಷ್ಠ ಜಾಗೃತ ಸಮುದಾಯದ ಪ್ರತಿನಿಧಿಗಳಿಗೆ ಇರಬೇಕಾದ ಸಹಜ ಮನೋಭಾವ. ಬಸವಣ್ಣನವರ ಪ್ರಭಾವ ನಮ್ಮನೆಲ್ಲ ಬುಲೆಟ್ ಪ್ರೂಫ್ ಮಾಡಿದೆ ಎಂದು ಭಾಲ್ಕಿ ಶ್ರೀಗಳು ಒಮ್ಮೆ ಹೇಳಿದ್ದರು. ಲಿಂಗವಂತರು ತಾವು ಅಂಜಲೇಕೆ, ಅಳುಕಲೇಕೆ ಎಂಬ ಬಸವಣ್ಣನವರ ವಚನ ಇಲ್ಲಿ ನೆನಪು ಮಾಡಿಕೊಳ್ಳಬೇಕು.
ಲಿಂಗವಶದಿಂದ ಬಂದ ನಡೆಗಳು
ಲಿಂಗವಶದಿಂದ ಬಂದ ನುಡಿಗಳು
ಲಿಂಗವಂತರು ತಾವು ಅಂಜಲದೇಕೆ ಲಿಂಗವಿರಿಸಿದಂತಿಪ್ಪುದಲ್ಲದೆ
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ.

ಗುರುಗಳಲ್ಲಿ ಸ್ಪಷ್ಟತೆ, ಸಾತ್ವಿಕ ಸಿಟ್ಟು ಇರುವುದು ಒಳ್ಳೆಯದು.
ಬಸವ ಸಂಸ್ಕೃತಿ ಅಭಿಯಾನ ಯಶಶ್ವಿ ಗೊಳಿಸಿದ ಮಹನೀಯರೆಲ್ಲರಿಗೂ ಶರಣಾ ರ್ಥಿಗಳು,
ವಿರೋಧಿ ಗಳಿಗೆ ವೇದಿಕೆ ಮೂಖಾ ಂತ ರ ಚಳಿಬಿಡಿಸಿದ್ದು ಅವರ ಅರಿವಿಗೆ ಬಂದಿದೆ ಎಂದು ಭಾ ವಿಸುತ್ತೇನೆ 🙏🙏🙏
ಸಂಘರ್ಷದ ದಾರಿಯಾದರೂ ಸರಿ ಬಸವಣ್ಣನವರನ್ನು ಮತ್ತು ಶರಣರ ತತ್ವವನ್ನು ಜನರಿಗೆ ಮುಟ್ಟಿಸುತ್ತೇವೆ ಮತ್ತು ಜಾಗೃತಿಗೊಳಿಸುತ್ತೇವೆ ಅನ್ನುವ ಧೃಡವಾದ ಸಂಕಲ್ಪ ಈ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ನಿಮ್ಮ ಲೇಖನ ಆ ಸಂಕಲ್ಪದ ಪ್ರಮುಖ ಅಂಶಗಳನ್ನು ಧಾಖಲಿಸಿದೆ.
ಪ್ರತಿಯೊಬ್ಬ ಲಿಂಗಾಯತನೂ ಗಣಾಚಾರಿಯಾಗಬೇಕು ಗುರಿ ಮುಟ್ಟುವ ತನಕ!
ತಪ್ಪಿಲ್ಲದಿದ್ದರೆ ” ನಿಮ್ಮ ಎದೆಯ ಮೇಲೆ ಕಾಲಿಟ್ಟು “ಮುಂದೆಸಸಾಗುತ್ತೇವೆ. ಈ ಮಾತು ವಿರೋಧಿಗಳ ಬಾಯಿ ಮುಚ್ಚಿಸುತ್ತದೆ.
ಉತ್ತಮ ಕಾರ್ಯಕ್ರಮ. ಬಸವ ಕಾರ್ಯಕರ್ತರಿಗೂ ಮಾತನಾಡಲು ಅವಕಾಶ ಕೊಡಬೇಕಿತ್ತು.
ಸೈದ್ಧಾಂತಿಕ ಬದ್ಧತೆಯಿದ್ದರೆ ಮಾತ್ರ ಇಂದಿನ ಪರಿಸ್ಥಿತಿಯಲ್ಲಿ ಉಳಿಯಲು ಸಾಧ್ಯ. ಇಲ್ಲವಾದರೆ ನುಂಗಿ ನೀರು ಕುಡಿಯುತ್ತಾರೆ
ಸಂಘ ಪರಿವಾರದ ಮುಖಂಡರು… ಲಿಂಗಾಯತ ಧರ್ಮದ ಬಗ್ಗೆ ಹಾಗೂ ಬಸವ ಪರಂಪರೆಯವರನ್ನು ವಿರೋಧಿಸುವ ಕೆಲಸ ಇವರದಾಗಿದೆ…. ಭಾರತ ದೇಶದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧ ಮಾಡುವುದೇ ಇವರ ಮುಖ್ಯ ಉದ್ದೇಶವಾಗಿದೆ…ಈ ಎರಡು ವ್ಯವಸ್ಥೆ ಇವರನ್ನು ನಿಂದೆ ಮಾಡದಿರುವಂತೆ ಕಾಡುತ್ತಿದೆ..ಶರಣ ಬಂಧುಗಳೇ.. ಶರಣು ಶರಣಾರ್ಥಿಗಳು ❤ 🙏 🙏 ಇವರಿಗೆ..ಉತ್ತಮ ಉತ್ತರ.?…ಬಸವ ಧರ್ಮದ ತತ್ವ ಸಿದ್ಧಾಂತಗಳು ಆದರ್ಶಗಳು ಮತ್ತು ಬಸವಾದಿ ಶಿವಶರಣರ ವಚನಗಳು,, ಹಾಗೂ ಸಂವಿಧಾನ… ಶರಣು ಶರಣಾರ್ಥಿಗಳು ❤ 🙏