ಅಭಿಯಾನ: ಕೊಪ್ಪಳ ಸಭೆಯಲ್ಲಿ ಹಲವಾರು ಶರಣರಿಂದ ದಾಸೋಹ ಘೋಷಣೆ

‘ಇಷ್ಟು ಬೃಹತ್ ಸಂಖ್ಯೆಯ ಜನ ಸೇರಿರುವುದನ್ನು ನಾನು ಇದೇ ಮೊದಲು ನೋಡುತ್ತಿದ್ದೇನೆ.’

ಕೊಪ್ಪಳ

ಸೆಪ್ಟಂಬರ್ 8 ಕೊಪ್ಪಳದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲು ಶ್ರೀ ಶಿವಶಾಂತ ಮಂಗಲಭವನದಲ್ಲಿ ಕರೆಯಲಾಗಿದ್ದ ವಿಸ್ತೃತ ಸಭೆ ರವಿವಾರ ಯಶಸ್ವಿಯಾಗಿ ನಡೆಯಿತು.

ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡುತ್ತ, ಕೊಪ್ಪಳ ಸದಾಕಾಲ ಬಸವಾದಿ ಶರಣರ ನಡೆಯಲ್ಲಿ ಸಾಗುತ್ತಿರುವ ನೆಲ. ಕೊಪ್ಪಳದ ಬಸವ ಜಯಂತಿ ಕಾರ್ಯಕ್ರಮ ಇಡೀ ರಾಜ್ಯದಲ್ಲಿ ಗಮನ ಸೆಳೆಯುತ್ತದೆ. ಪೂರ್ವಭಾವಿ ಸಭೆಯಲ್ಲಿ ಇಷ್ಟು ಬೃಹತ್ ಸಂಖ್ಯೆಯ ಜನ ಸೇರಿರುವುದನ್ನು ನಾನು ಇದೇ ಮೊದಲು ನೋಡುತ್ತಿದ್ದೇನೆ. ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನದ ಧ್ಯೇಯ, ಉದ್ದೇಶಗಳು, ಅಭಿಯಾನದ ಹಿನ್ನೆಲೆ ಮತ್ತು ಯಶಸ್ವಿಯಾಗಿ ಈ ಅಭಿಯಾನ ಕೊಪ್ಪಳದಲ್ಲಿ ನೆರವೇರಿಸಲು ಬೇಕಾದ ಎಲ್ಲಾ ಪೂರ್ವ ಸಿದ್ಧತೆಯ ಕುರಿತು ವಿವರಿಸಿದರು.

ಸರಕಾರಿ ವಕೀಲರಾದ ಬಿ.ಎಸ್. ಪಾಟೀಲರು ಮಾತನಾಡಿ, ತಮ್ಮಿಂದಲೇ ಹಣಕಾಸಿನ ಸಂಗ್ರಹ ಆರಂಭವಾಗಲಿ ಎಂದು ಹದಿನೈದು ಸಾವಿರ ರೂಪಾಯಿ ದಾಸೋಹ ನೀಡಿ, ಕೊಪ್ಪಳದಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಬೇಕಾದ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಕಾರ್ಯದರ್ಶಿ ರಾಜೇಶ ಸಸಿಮಠ ಮತ್ತು ಶೇಖರ ಇಂಗಳದಾಳ ಅಚ್ಚುಕಟ್ಟಾಗಿ ಸಂಘಟಿಸಿ ಸಭೆಯ ನಿರ್ವಹಣೆ ಮಾಡಿದರು.

ಗಂಗಾವತಿಯ ಪಟ್ಟಣಶೆಟ್ಟರು, ಎ.ಕೆ. ಮಹೇಶಕುಮಾರ, ಸಿದ್ದಣ್ಣ ಜೇಟ್ಲಿ, ವೀರಣ್ಣ ಅರಹುಣಸಿ, ಕುಷ್ಟಗಿಯ ಮಾಜಿ ಶಾಸಕರಾದ ಕೆ. ಶರಣಪ್ಪ, ಟಿ. ಬಸವರಾಜ, ಕೊಪ್ಪಳದ ಮಲ್ಲಿಕಾರ್ಜುನ ಬಳ್ಳೊಳ್ಳಿ, ಗುರುರಾಜ ಹಲಗೇರಿ, ಸತೀಶ ಕೊತಬಾಳ, ಗಾಳೆಪ್ಪ ಕಡೆಮನಿ, ಆನಂದ ಅಳವಂಡಿ, ಗುಡದಪ್ಪ ಹಡಪದ, ವೀರಣ್ಣ ಚಾಕಲಬ್ಬಿ, ಶರಣ ಬಸನಗೌಡ ಪಾಟೀಲ, ಶಿವಬಸಯ್ಯ ವೀರಾಪುರ ಹಿರೇಮಠ, ಎಂ. ಬಸವರಾಜಪ್ಪ ಇಂಜಿನಿಯರ್, ಶಿವಕುಮಾರ ಕುಕನೂರ, ದಾನಪ್ಪ ಶೆಟ್ಟರ, ವೀರಣ್ಣ ಸಂಕ್ಲಾಪುರ, ರಮೇಶ ಕವಲೂರ, ಕದಳಿ ವೇದಿಕೆಯ ನಿರ್ಮಲ ಬಳ್ಳೊಳ್ಳಿ, ಅಪರ್ಣ ಬಳ್ಳೊಳ್ಳಿ, ಅನ್ನಪೂರ್ಣ ಮನ್ನಾಪುರ, ಸೌಮ್ಯ ನಾಲವಾಡ, ಅರುಣ ನರೇಂದ್ರ ಸೇರಿದಂತೆ ಗಂಗಾವತಿ, ಕುಷ್ಟಗಿ, ಕೊಪ್ಪಳ, ಯಲಬುರ್ಗಾ ತಾಲೂಕುಗಳ ವಿವಿಧ ಲಿಂಗಾಯತ, ಬಸವಪರ ಸಂಘಟನೆಗಳ ನಾಲ್ಕುನೂರಕ್ಕೂ ಹೆಚ್ಚಿನ ಜನ ಮುಖಂಡರು, ಸದಸ್ಯರು ಪಾಲ್ಗೊಂಡು ಅಭಿಯಾನದ ಸರ್ವಸಿದ್ಧತೆಯ ಕುರಿತು ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ಜಿ. ನಾಗರಾಜ ಗಂಗಾವತಿ ಚನ್ನಬಸವೇಶ್ವರ ಚಾರಿಟೇಬಲ್ ಟ್ರಸ್ಟ್ 5 ಕ್ವಿಂಟಲ್ ಅಕ್ಕಿ, ಸಿದ್ದಣ್ಣ ನಾಲವಾಡ 5 ಸಾವಿರ ರೂ. ಅಶೋಕ ಕುಂಬಾರ 5 ಸಾವಿರ ರೂ. ಸಂಗಮೇಶ್ ಕಲಹಾಳ 10 ಸಾವಿರ ರೂ. ದೇಣಿಗೆ ಘೋಷಿಸಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ಮತ್ತು ಕೊಪ್ಪಳ ಜಿಲ್ಲೆಯ ಸರ್ವ ಬಸವಪರ, ಲಿಂಗಾಯತ ಸಂಘಟನೆಗಳ ಸಹಯೋಗದೊಂದಿಗೆ ಸಭೆ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *