ಕೊಪ್ಪಳದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ಶ್ರೀ ಅಂಬಿಗರ ಚೌಡಯ್ಯ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಅವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.

ಅವರು ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದ ಅನುಭವ ಮಂಟಪದ ಶರಣ ಅಂಬಿಗರ ಚೌಡಯ್ಯನವರು ತಮ್ಮ ನೇರ ನುಡಿ ವಚನಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಅಂಧ ಶ್ರದ್ದೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. 12ನೇ ಶತಮಾನದ ಶರಣರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದರು. ಸಮಾಜ ಹಾಗೂ ದೇಶಕ್ಕೆ ನೀಡಿದ ಅವರ ಕೊಡುಗೆ ಬಹು ದೊಡ್ಡದಿದೆ.

ಭಾರತ ದೇಶದಲ್ಲಿ ಹುಟ್ಟಿದ ನಾವು ಪುಣ್ಯವಂತರು. ಇಲ್ಲಿ ಹಲವಾರು ಜಾತಿ ಧರ್ಮಗಳಿದ್ದರು ನಾವೆಲ್ಲರೂ ಒಂದೇ ತಾಯಿ ಭಾರತಾಂಬೆಯ ಮಕ್ಕಳಾಗಿ. ಪರಸ್ಪರ ಸಹೋದರತೆಯಿಂದ ಜೀವನ ನಡೆಸುತ್ತಿದ್ದೆವೆ ಎಂದು ಹೇಳಿದರು.

ಕೊಪ್ಪಳ ನಗರದಲ್ಲಿ ಅಂಬಿಗರ ಚೌಡಯ್ಯ ವೃತ್ತ ನಿರ್ಮಿಸಬೇಕೆಂಬ ತಮ್ಮ ಬೇಡಿಕೆಯಂತೆ ನಗರಸಭೆಯ ಬರುವ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯಿಸಲಾಗುವುದು ಎಂದರು.

ಶಿಕ್ಷಕರಾದ ಮಹೇಶ ಬಳ್ಳಾರಿ ಅವರು ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ ನೀಡುತ್ತಾ, ಅನುಭವ ಮಂಟಪದ 770 ಅಮರಗಣಂಗಳಲ್ಲಿ ಅಂಬಿಗರ ಚೌಡಯ್ಯವರು ಒಬ್ಬರಾಗಿದ್ದರು. ಅವರು ಕಾಲಜ್ಞಾನಿ, ಚಿಂತಕ ಹಾಗೂ ಪಾಂಡಿತ್ಯದ ಬಹುದೊಡ್ಡ ನಿಧಿಯಾಗಿದ್ದರು. 64 ವಿದ್ಯೆಗಳಲ್ಲಿ ಒಂದಾದ ಸಂಜೀವಿನಿ ವಿದ್ಯೆಯನ್ನು ಕೆಲವರಿಗೆ ಮಾತ್ರ ಬರುತಿತ್ತು. ಅದರಲ್ಲಿ ನಮ್ಮ ನಿಜ ಶರಣರು ಒಬ್ಬರು ಎಂದು ಹೇಳಿದರು.

12ನೇ ಶತಮಾನದಲ್ಲಿ ಕಲ್ಯಾಣದ ಕಡೆಗೆ ಅಪಘಾನಿಸ್ಥಾನ, ಕಾಶ್ಮೀರ ಸೇರಿದಂತೆ ಹಲವಾರು ಕಡೆಯಿಂದ ಸಾವಿರಾರು ಜನರು ಬಂದು ಕಲ್ಯಾಣದಲ್ಲಿ ಶರಣರಾದರು. ಕಲ್ಯಾಣದ ಕ್ರಾಂತಿಯ ನಂತರ ವಚನಗಳ ಸಂರಕ್ಷಣೆ ಜವಾಬ್ದಾರಿಯನ್ನು ಅಂಬಿಗರ ಚೌಡಯ್ಯ ಹೊತ್ತಿದ್ದರು. ಗಂಗಾಮತಸ್ಥ ಸಮಾಜವನ್ನು 39 ಹೆಸರುಗಳಿಂದ ಕರೆಯಲಾಗುತ್ತದೆ. ಅಂಬಿಗ ಎಂದರೆ ನಂಬಿಗಸ್ಥ. ನಮ್ಮ ಸಮಾಜ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಇನ್ನೂ ಮುಂದೆ ಬರಬೇಕಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಎನ್.ಯಂಕಪ್ಪ, ಶಂಕರಗೌಡ ಮಾಲಿ ಪಾಟೀಲ, ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಸೋಮಣ್ಣ ಬಾರಕೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಕೊಟ್ರೇಶ ಮರಬನಳ್ಳಿ, ಕೊಪ್ಪಳ ತಾಲ್ಲೂಕಿನ ಗ್ರೇಡ್-2 ತಹಶಿಲ್ದಾರ ಗವಿಸಿದ್ದಪ್ಪ ಮಣ್ಣೂರು, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಹನುಮಂತಪ್ಪ ಯಲಿಗಾರ, ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ಬಸಯ್ಯಜ್ಜ ಹಿರೇಮಠ, ಸಿದ್ದು ಮ್ಯಾಗೇರಿ ಸೇರಿದಂತೆ ಇತರೆ ಹಲವಾರು ಜನರು ಹಾಗೂ ಗಂಗಾಮತಸ್ಥ ಸಮಾಜದ ಕುಲಭಾಂದವರು ಉಪಸ್ಥಿತರಿದ್ದರು.

ಮೆರವಣಿಗೆ:
ಬೆಳಿಗ್ಗೆ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಭಾವಚಿತ್ರದ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಆರಂಭವಾಗಿ ಜಿಲ್ಲಾ ಸಾಹಿತ್ಯ ಭವನದವರೆಗೆ ನಡೆಯಿತು. ಇದಕ್ಕೆ ಕೊಪ್ಫಳ ತಾಲ್ಲೂಕು ತಹಶೀಲ್ದಾರ ವಿಠ್ಠಲ ಚೌಗಲಾ ಹಾಗೂ ಸಮಾಜದ ಮುಖಂಡರು ಚಾಲನೆ ನೀಡಿದರು.

Share This Article
Leave a comment

Leave a Reply

Your email address will not be published. Required fields are marked *