ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ ಶಿವಾನುಭವ ಗೋಷ್ಠಿ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಶರಣೆ ಶರಣಮ್ಮ ಶರಣ ಮುದಿಯಪ್ಪ ಹಳ್ಳಿ ಇವರ ಸುಪುತ್ರಿಯಾದ ವಿಜಯಲಕ್ಷ್ಮೀ ಹಳ್ಳಿ ಮತ್ತು ಶರಣಪ್ಪ ಇಂಗಳದಾಳ ಶರಣ ದಂಪತಿಗೆ ಹುಟ್ಟಿದ ಸುಪುತ್ರಿಗೆ “ಬಸವಾರ್ಪಿತಾ” ಎಂದು ಹೆಸರಿಟ್ಟು ತೊಟ್ಟಿಲು ತೂಗಲಾಯಿತು.

ಮೊದಲಿಗೆ ಲಿಂಗದೀಕ್ಷೆ ಮಾಡಿ, ತೊಟ್ಟಿಲು ಕಾರ್ಯಕ್ರಮವನ್ನು ಬೀದರ ಬಸವಗಿರಿಯ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಹಾಗೂ ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟನ ಶರಣ ಬಳಗದವರು ವಚನಗಳು, ಸ್ವರ ವಚನಗಳು, ಜೋಗುಳ ಪದಗಳನ್ನು ಹಾಡಿ ಅರ್ಥಪೂರ್ಣವಾಗಿ ತೊಟ್ಟಿಲು ಕಾರ್ಯಕ್ರಮವನ್ನು ನೆರವೇರಿಸಿದರು.

ತೊಟ್ಟಿಲು ಕಾರ್ಯಕ್ರಮದ ನಂತರ ಶಿವಾನುಭವ ಗೋಷ್ಠಿ ನಡೆಯಿತು. ಲಿಂಗಾಯತ ಧರ್ಮದ ನಿಜಾಚಾರಣೆ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ ಘಟಕದ ಅಧ್ಯಕ್ಷರಾದ ಹನುಮೇಶ ಕಲ್ಮಂಗಿ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿವರಿಸಿದರು.

ಶರಣ ಬಸವರಾಜಪ್ಪ ಇಂಗಳದಾಳ ಲಿಂಗಾಯತ ಧರ್ಮದ ನಿಜಾಚರಣೆ, ಶಿವಾನುಭವ ಗೋಷ್ಠಿಯ ಅರ್ಥವತ್ತತೆಯ ಬಗ್ಗೆ ಮಾತನಾಡಿದರು.

ಶರಣ ಅಮರೇಶಪ್ಪ ಗಡೆಳ್ಳಿಯವರು ವಚನಗಳ ಮೂಲಕ ಲಿಂಗಾಯತರು ಎಲ್ಲ ಆಚರಣೆಗಳನ್ನು ಮಾಡಬೇಕೆಂದು ವಿವರಿಸಿದರು.

ಯಲಬುರ್ಗಾ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಅಂಬರೇಶಪ್ಪ ಬಳ್ಳಾರಿ, ಗಣಾಚಾರಿ ತತ್ವದ ಬಗ್ಗೆ ತಿಳಿಸುತ್ತಾ, ನಿಜಾಚರಣೆಯನ್ನು ಮಾಡಿಸುತ್ತಿದ್ದ ಲಿಂಗೈಕ್ಯ ಶರಣ ಕುರಕುಂದಿ ವೀರಭದ್ರಪ್ಪ ಅವರನ್ನು ನೆನೆದು ಭಾವುಕರಾದರು.

ಸಾನಿಧ್ಯವಹಿಸಿದ್ದ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು, ಗರ್ಭದಿಂದ ಹಿಡಿದು ಮಗುವಿನ ಹುಟ್ಟಿನಿಂದ, ಬೆಳವಣಿಗೆಯವರೆಗೂ ಆಗಬೇಕಾದ ಸಂಸ್ಕಾರಗಳ ಬಗ್ಗೆ ತಿಳಿಸಿದರು. ತಾಯಿ 8 ತಿಂಗಳ ಗರ್ಭಿಣಿಯಾದ ಸಂದರ್ಭದಲ್ಲಿ ಗರ್ಭ ಲಿಂಗದೀಕ್ಷೆ, ಮಗು ಹುಟ್ಟಿದ ನಂತರ ತೊಟ್ಟಿಲು ಕಾರ್ಯಕ್ರಮ, ಎಂಟು ವರ್ಷಕ್ಕೆ ಲಿಂಗದೀಕ್ಷೆಯನ್ನು ಮಾಡಿಸಿ ಮಕ್ಕಳಿಗೆ ಸಂಸ್ಕಾರ ನೀಡಿ ಅದರ ಬಗ್ಗೆ ಮಾಹಿತಿ ನೀಡಬೇಕೆಂದು ವಿವರಿಸಿದರು. ಹಳ್ಳಿ ಮನೆತನದ ಬಂಧುಗಳು ಈ ನಾಮಕರಣ ಕಾರ್ಯವನ್ನು ಅರ್ಥಪೂರ್ಣವಾಗಿ ಆಚರಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶರಣ ರುದ್ರಪ್ಪ ಹಳ್ಳಿಯವರು ನೆರವೇರಿಸಿದರು. ಅತಿಥಿಗಳಾಗಿ ಶರಣ ಹನುಮಂತಪ್ಪ ಗುಳೇದ ಗ್ರಾಮ ಪಂಚಾಯತಿ ಅಧ್ಯಕ್ಷರು ಸಾ. ಚಿಕ್ಕಬೊಮ್ಮನಾಳ, ರಾಷ್ಟ್ರೀಯ ಬಸವದಳ ವನಜಬಾವಿ ಅಧ್ಯಕ್ಷ ಶರಣ ದೇವಪ್ಪ ಕೋಳೂರು, ಶರಣ ರುದ್ರಯ್ಯ ಹಿರೇಮಠ, ಇಂಗಳದಾಳ ಮನೆತನದ ಹಿರಿಯ ಶರಣ ಶಿವಪ್ಪ ಇಂಗಳದಾಳ, ಶರಣ ಗವೀಶ ಸಸಿಮಠ, ಬಸವಪರ ಸಂಘಟನೆಗಳ ಮುಖಂಡರು, ಕೊಪ್ಪಳ ಯಲಬುರ್ಗಾ ಮತ್ತು ಕುಷ್ಟಗಿ ಸುತ್ತಮುತ್ತಲು ಗ್ರಾಮದ ಶರಣ ಶರಣೆಯರು, ಹಳ್ಳಿ ಹಾಗೂ ಇಂಗಳದಾಳ ಬಂಧುಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *