ಸಾಣೇಹಳ್ಳಿ ಶ್ರೀಗಳು ರಚಿಸಿರುವ ‘ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ’

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿರುವ ‘ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಏಕವ್ಯಕ್ತಿ ರಂಗಪ್ರಯೋಗವಾಗಿರುವ ಈ ನಾಟಕ ಬಸವಣ್ಣನವರ ಸಹೋದರಿ ನಾಗಲಾಂಬಿಕೆ ಅವರ ಭವ್ಯ ವ್ಯಕ್ತಿತ್ವ ಮತ್ತು ಶರಣರ ಚರಿತ್ರೆಯಲ್ಲಿ ಅವರಿಗಿರುವ ಮಹತ್ವ ಸ್ಥಾನದ ಮೇಲೆ ಬೆಳಕು ಚೆಲ್ಲುತ್ತದೆ.

ನಾಗಲಾಂಬಿಕೆ ಬಾಲ್ಯದಿಂದಲೂ ಬಸವಣ್ಣನವರ ಬೆಂಗಾವಲಾಗಿ ನಿಂತು ಎಲೆಮರೆಯ ಕಾಯಿಯಂತೆ ಅವರ ವ್ಯಕ್ತಿತ್ವ ಬೆಳವಣಿಗೆಗೆ ಕಾರಣಳಾದವರು. ಹುಟ್ಟಿನಿಂದ ಅಂತ್ಯದವರೆಗೂ ಸಹೋದರನ ಎಲ್ಲಾ ಆಗು-ಹೋಗುಗಳನ್ನು ನೋಡಿಕೊಂಡವರು.

ಬಸವಣ್ಣನವರನ್ನು ಬೆಳೆಸುತ್ತಾ ತಾನು ಬೆಳೆದ ಅಪರೂಪದ ಚೇತನ ನಾಗಲಾಂಬಿಕೆ. ಅನುಭವ ಮಂಟಪದ ಆಧಾರಸ್ಥಂಭ ಗುರು ಬಸವಣ್ಣನವರಾದರೆ ಮಹಾಮನೆಯ ಮಹಾ ಬೆಳಕು ‘ಗುರುಮಾತೆ’ ನಾಗಲಾಂಬಿಕೆ. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯದ ಸಂರಕ್ಷಣೆಗಾಗಿ ಪ್ರಾಣವನ್ನೇ ಪಣವಾಗಿಟ್ಟವರು.

ಅದಕ್ಕಾಗಿ ಕತ್ತಿ ಹಿಡಿದು ಹೋರಾಡಲೂ ಹಿಂಜರಿದವರಲ್ಲ. ಶರಣರಿಗೆ ಪ್ರೇರಣೆ ನೀಡುತ್ತಲೇ ವಚನ ಸಾಹಿತ್ಯದ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ದುರ್ಗಮ ಕಾಡು ಮೇಡುಗಳನ್ನು ಸುತ್ತುತ್ತಾ ಕೊನೆಗೆ ತರೀಕೆರೆ ಬಳಿಯ ಎಣ್ಣೆಹೊಳೆಯಲ್ಲಿ ಲಿಂಗೈಕ್ಯರಾದರು.

ಅಕ್ಕನಾಗಲಾಂಬಿಕೆ ಪಾತ್ರ ಅಭಿನಯ ಮಾಡುತ್ತಿರುವ ಶ್ರೀಮತಿ ಮಂಜುಳಾ ಬದಾಮಿ ಅವರು ಮೂಲತಃ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯವರು. ಇವರು ನೀನಾಸಂ ರಂಗ ಶಿಕ್ಷಣ ಪದವೀಧರರು. ನೀನಾಸಂ ತಿರುಗಾಟದಲ್ಲಿ ಕಲಾವಿದೆಯಾಗಿ ಅಭಿನಯಿಸಿದವರು. ಇವರು ಕಳೆದ 32 ವರ್ಷಗಳಿಂದ ನಿರಂತರವಾಗಿ ನಟನೆ, ನಿರ್ದೇಶನ, ವಸ್ತ್ರವಿನ್ಯಾಸ, ಪ್ರಸಾಧನ ವಿಭಾಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಶ್ರೀ ಶಿವಕುಮಾರ ಕಲಾಸಂಘದಿಂದ ದೇಶದಲ್ಲೆಲ್ಲಾ ಸಂಚರಿಸಿ ವಿಭಿನ್ನ ಬಗೆಯ ಪಾತ್ರ ಹಾಗೂ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಚಲನಚಿತ್ರ, ಕಿರುತೆರೆಯ ಧಾರಾವಾಹಿಗಳಲ್ಲು ಇವರು ನಟಿಸಿದ್ದಾರೆ. ಚಿತ್ರದುರ್ಗ ಜಿಲ್ಲಾ ರಾಜ್ಯೋತ್ಸವ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಅಲ್ಲದೇ ಅನೇಕ ಪ್ರತಿಷ್ಠಿತ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಇವರ ಅಭಿನಯದ ವಸುಂಧರೆ ನಾಟಕ 44 ಪ್ರದರ್ಶನಗಳನ್ನು ಕಂಡಿದೆ. ಇವರು ಇತ್ತೀಚಿಗೆ ಶಶಿಕಾಂತ ಯಡಹಳ್ಳಿ ಅವರು ರಚಿಸಿದ ಸೀತಾಂತರಾಳ ಏಕವ್ಯಕ್ತಿ ರಂಗಪ್ರದರ್ಶನ ದೇಶಾದ್ಯಂತ 126 ಪ್ರದರ್ಶನಗಳನ್ನು ನೀಡಿದ್ದು ಇವರ ಪ್ರತಿಭೆಗೆ ಸಂದ ಮತ್ತೊಂದು ಮೈಲಿಗಲ್ಲು.

ಈ ವಿಶಿಷ್ಟ ಪ್ರಯೋಗವನ್ನು ಅವರ ಪತಿ ವೈ.ಡಿ. ಬದಾಮಿ ನಿರ್ದೇಶಿಸಿದ್ದಾರೆ.

ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕ

ಗ್ರಾಮರಂಗ ಸಾಂಸ್ಕೃತಿಕ ಟ್ರಸ್ಟ್, ಸಾಣೇಹಳ್ಳಿ, ಇವರ ಕಾಣಿಕೆ,
ರಚನೆ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಅಭಿನಯ: ಮಂಜುಳಾ ಬದಾಮಿ, ಸಾಣೇಹಳ್ಳಿ
ಪರಿಕಲ್ಪನೆ-ವಿನ್ಯಾಸ-ನಿರ್ದೇಶನ: ವೈ.ಡಿ. ಬದಾಮಿ, ಸಾಣೇಹಳ್ಳಿ
ಸಂಗೀತ ಸಂಯೋಜನೆ, ಹಿನ್ನೆಲೆ ಹಾಡು: ಸಿದ್ದರಾಮ ಕೇಸಾಪುರ, ಬೆಂಗಳೂರು

Share This Article
Leave a comment

Leave a Reply

Your email address will not be published. Required fields are marked *