ಬೀದರ:
ಬಸವಾದಿ ಶರಣ ಒಕ್ಕಲಿಗ ಮುದ್ದಣ್ಣ ಒಕ್ಕಲುತನವನ್ನೇ ಶ್ರೇಷ್ಠ ಉದ್ಯೋಗವೆಂದು ನಂಬಿದ್ದರು. ಅವರು ವಚನದಲ್ಲಿ ಬದುಕಿನ ಸಾರ, ರೈತರಿಗೆ ಸಲಹೆ, ರೈತರಿಗೆ ಸಾಮರಸ್ಯ ಹೇಳಿ ಇಂದಿನ ರೈತರಿಗೆ ಮಾರ್ಗದರ್ಶಕರಾಗಿದ್ದಾರೆಂದು ಬೀದರನ ಕೃಷಿ ಇಲಾಖೆ ಜಂಟಿ ನಿರ್ದೇಶಕ ದೇವಿಕಾ ಆರ್. ಹೇಳಿದರು.
ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ನಡೆದ ಶರಣ ಸಂಗಮ ಹಾಗೂ ಶರಣ ಒಕ್ಕಲಿಗ ಮುದ್ದಣ್ಣನವರ ಸ್ಮರಣೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೃಷಿ ಜ್ಞಾನದ ಜೊತೆಗೆ ಶರಣರ ವಚನ ಸಾಹಿತ್ಯದ ಅಚ್ಚಗನ್ನಡದ ಬೇಸಾಯಗಾರ ಒಕ್ಕಲಿಗ ಮುದ್ದಣ. ಆಗಿನ ಕಾಲದಲ್ಲಿಯೇ ಭೂ ರಕ್ಷಣೆ, ಬೇಸಾಯ ಯಾವ ರೀತಿ ಮಾಡಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಅಲ್ಲದೇ ಮಣ್ಣಲ್ಲಿ ಮಣ್ಣಾಗಿ ದುಡಿದು ಪರಮ ಸತ್ಯವನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಸಾನಿಧ್ಯವನ್ನು ವಹಿಸಿಕೊಂಡಿದ್ದ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಧನ, ಕನಕ ಅಧಿಕಾರ ಅಂತಸ್ತು ಶಾಶ್ವತವಲ್ಲ. ಈ ಪ್ರಾಪಂಚಿಕ ವಿಷಯಗಳ ಗಳಿಕೆಯಿಂದ ದೊರೆಯುವ ಸುಖ ಶಾಶ್ವತವಲ್ಲ. ಆದರೆ ಪರಮಸತ್ಯದ ಸುಖ ಶಾಶ್ವತವಾದದ್ದು, ಅಂಗವೇ ಭೂಮಿಯಾಗಿ ಅಂಥ ಆತ್ಮಾನಂದ ಪಡೆಯುವುದಕ್ಕೆ ನಾವೆಲ್ಲರೂ ಭೌತಿಕ ಬದುಕಿನ ದೇಹಾರೋಗ್ಯ ಚಟುವಟಿಕೆಯ ಕೃಷಿಯ ಜೊತೆಗೆ ಆಧ್ಯಾತ್ಮಿಕ ಕೃಷಿ ಮಾಡಬೇಕು ಎಂದರು.
ಡಾ. ಶಿವಲಿಂಗ ಹೇಡೆ ಅನುಭಾವ ನೀಡಿ, ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ತಮ್ಮ ವಚನಗಳಲ್ಲಿ ಪ್ರಸ್ತಾಪಿಸುತ್ತ ಜಂಗಮ ದಾಸೋಹ ನಡೆಸುವುದು ಒಕ್ಕಲಿಗ ಮುದ್ದಣ್ಣನವರ ವೃತವಾಗಿತ್ತು.
ಜ್ಞಾನಕ್ಕೆ ತಕ್ಕ ಕ್ರಿಯೆ ಇಲ್ಲದಿದ್ದರೆ ಅವರ ಜೀವನ ವ್ಯರ್ಥವೆಂದು ಒಕ್ಕಲಿಗ ಮುದ್ದಣ್ಣನವರು ತಮ್ಮ ಕಾಯಕ ಮತ್ತು ಜೀವನದ ಮೂಲಕ ನಡೆದು ತೋರಿಸಿ ಕೊಟ್ಟಿದ್ದಾರೆ ಎಂದರು.
ಬಸವ ಸೇವಾ ಪ್ರತಿಷ್ಠಾನದ ರಾಚಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಾಲಹಳ್ಳಿಯ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ತೂಗಾಂವೆ ಧ್ವಜಾರೋಹಣಗೈದರು. ಅಕ್ಕಮಹಾದೇವಿ ಚಲನಚಿತ್ರದ ನಿರ್ದೇಶಕ ಬಿ.ಜೆ. ವಿಷ್ಣುಕಾಂತ, ಸಮೃದ್ಧಿ ಸೌಹಾರ್ದ ಸಹಕಾರ ಪತ್ತಿನ ಸಂಘದ ಉಪಾಧ್ಯಕ್ಷ ಶಿವಕುಮಾರ ಪಾಟೀಲ, ಬಸವಕಲ್ಯಾಣ ವಚನ ಸಮೂಹ ಸಂಸ್ಥೆಯ ಅಧ್ಯಕ್ಷ ವೀರಶೆಟ್ಟಿ ಮಲಶೆಟ್ಟಿ ಉಪಸ್ಥಿತರಿದ್ದರು.

ಕರಣ ಬಿರಾದಾರ ವಚನ ಪಠಣ ಮಾಡಿದರು.
ಆಕಾಶವಾಣಿ ಕಲಾವಿದರಾದ ದಿಲೀಪ ದೇಸಾಯಿ, ಸೂರ್ಯಕಾಂತ ಬಿರಾದಾರ, ಶರಣಪ್ಪ ಜಮಾದಾರ ವಚನ ಸಂಗೀತ ನಡೆಸಿಕೊಟ್ಟರು. ಸುಷ್ಮಾ ಪವಾಡಶೆಟ್ಟಿ ಸ್ವಾಗತಿಸಿದರೆ, ಬಸವರಾಜ ಬಿರಾದಾರ ನಿರೂಪಿಸಿದರು.
