“ದಿಲ್ಲಿಯ ಪಕ್ಷಗಳು ಅಪಾಯಕಾರಿ, ನಮ್ಮದೇ ಸ್ವಾಯತ್ತ, ಸ್ವತಂತ್ರ ಪಕ್ಷ ಸ್ಥಾಪನೆಯ ಅಗತ್ಯವಿದೆ’’ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
“ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷ ರಚನೆಗೆ ಕನಸು ಈಗ ಚಿಗುರೊಡೆದಿದೆ. ಮೊದಲು ಹಳ್ಳಿಗಳಿಗೆ ಹೋಗಿ ಕನ್ನಡದ ಶಕ್ತಿ ಬಗ್ಗೆ ಜಾಗೃತಿ ಮೂಡಿಸಬೇಕು. ವಿಷಯಾಧಾರಿತವಾಗಿ ಚಳವಳಿಯಾಗಬೇಕು. ಆಗ ಮಾತ್ರ ಪ್ರಾದೇಶಿಕ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಸಾಧ್ಯ,” ಎಂದು ಬಸವ ಸಮಿತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ನಾಡು -ನಮ್ಮ ಆಳ್ವಿಕೆ’ ಚಿಂತನಾ ಸಭೆಯಲ್ಲಿ ಮಾತನಾಡಿದರು.
ಸಾಹಿತಿಗಳು, ಕಲಾವಿದರು, ಪತ್ರಕರ್ತರು ಮತ್ತು ಟೆಕ್ಕಿಗಳು ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷ ರಚನೆ ಸಂಬಂಧ ಬೆಂಬಲ ಸೂಚಿಸಿದರು. ಪ್ರಾದೇಶಿಕ ಪಕ್ಷ ರಚನೆ ಕುರಿತು ಸಲಹೆ, ಸೂಚನೆಗಳನ್ನು ನೀಡಿದರು.
ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ‘‘ಕನ್ನಡ ಪರವಾಗಿರುವ ಬಳಗಕ್ಕೆ ಒಂದು ಮಾರ್ಗಸೂಚಿ ಸಿದ್ಧಪಡಿಸಬೇಕು. ಮುಂದಿನ ಚುನಾವಣೆಗೆ ಕನ್ನಡ ಪಕ್ಷ ತನ್ನ ಧ್ವಜ ಹಾರಿಸಬೇಕು. ಇದಕ್ಕಾಗಿ ಕನ್ನಡಿಗರು ಹೆಗಲಿಗೆ ಹೆಗಲು ಕೊಡಬೇಕು’’ ಎಂದರು.