ಕುಂಭಮೇಳದ ಗಲೀಜು ತೆಗೆಯಲು ವಿಧ್ಯಾರ್ಥಿಗಳ ಬಳಕೆಗೆ ಖಂಡನೆ

ಆಳಂದ

ನಾಸಿಕ್ ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಭಾಗವಹಿಸಿ ‘ಶ್ರಮದಾನ’ ಮಾಡಿದರೆ ಹೆಚ್ಚಿನ ಅಂಕ ನೀಡುವುದಾಗಿ ಪುಣೆಯ ಸಾವಿತ್ರಿ ಬಾಯಿ ವಿಶ್ವವಿದ್ಯಾಲಯ ನಿರ್ಣಯಿಸಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

“ದುಡಿದು ಕಲಿ” (Earn and Learn) ಎಂಬ ಅದ್ಭುತ ಯೋಜನೆಯನ್ನು ಜಗತ್ತಿಗೆ ನೀಡಿದ ಕರ್ಮವೀರರ ನಾಡಿನಲ್ಲಿ, ಇಂದು ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಕೂಲಿಕಾರ್ಮಿಕರಂತೆ ನಡೆಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ.

ನಮ್ಮ ಪ್ರಮುಖ ಪ್ರಶ್ನೆಗಳು

 1. ಶೈಕ್ಷಣಿಕ ತಾರತಮ್ಯ: ಮಂತ್ರಿಗಳ ಮತ್ತು ಶ್ರೀಮಂತರ ಮಕ್ಕಳು ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವಾಗ, ಬಹುಜನರ ಮತ್ತು ಬಡವರ ಮಕ್ಕಳು ಓದಬೇಕಾದ ವಿಶ್ವವಿದ್ಯಾಲಯಗಳಲ್ಲಿ ಗಲೀಜು ಸ್ವಚ್ಛಗೊಳಿಸುವ ಕೆಲಸಕ್ಕೆ ಅಂಕ ನೀಡುವುದು ಎಷ್ಟು ಸರಿ? ಇದು ಬಡ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಶೋಷಿಸುವ ತಂತ್ರವಲ್ಲವೇ?

 2. ಸಾವಿತ್ರಿಬಾಯಿ ಫುಲೆಯವರ ಆಶಯಕ್ಕೆ ಧಕ್ಕೆ: ಯಾವ ಮಹಾಮಾತೆ ಸಾವಿತ್ರಿಬಾಯಿ ಫುಲೆಯವರು ಅಕ್ಷರ ಕ್ರಾಂತಿಯ ಮೂಲಕ ಬಹುಜನರ ಬದುಕನ್ನು ಬೆಳಗಿದರೋ, ಇಂದು ಅವರದೇ ಹೆಸರಿನಲ್ಲಿರುವ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಮಜೂರಿ ಕೆಲಸ ಮಾಡಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ.

 3. ಶ್ರೀಮಂತ ಸಂಸ್ಥೆಗಳ ಮೌನವೇಕೆ?: ನಾಸಿಕ್‌ನಲ್ಲಿರುವ ಸಿಂಬಯೋಸಿಸ್, ಎಂ.ಐ.ಟಿ, ಸಂದೀಪ್ ಫೌಂಡೇಶನ್‌ನಂತಹ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶ್ರೀಮಂತ ವಿದ್ಯಾರ್ಥಿಗಳಿಗೆ ಈ ‘ಶ್ರಮದಾನ’ ಅನ್ವಯಿಸುವುದಿಲ್ಲವೇ? ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ಕಡುಬಡವರ ಮಕ್ಕಳು ಮಾತ್ರ ಈ ಕೆಲಸ ಮಾಡಬೇಕೆಂಬುದು ಯಾವ ನ್ಯಾಯ?

4. ‘ಶ್ರಮದಾನ’ ಎಂಬ ಪದದ ಹಿಂದಿನ ಕುತಂತ್ರ: ಶ್ರಮ ಎನ್ನುವುದು ದುಡಿಮೆ, ಅದನ್ನು ‘ದಾನ’ ಮಾಡಲು ಸಾಧ್ಯವಿಲ್ಲ. ಪೂಜೆ-ಪುನಸ್ಕಾರಗಳನ್ನು ‘ಕಾರ್ಯ’ ಎಂದು ಕರೆಯುವ ವ್ಯವಸ್ಥೆ, ಬಡವನ ದುಡಿಮೆಯನ್ನು ಮಾತ್ರ ‘ಶ್ರಮದಾನ’ ಎಂದು ವೈಭವೀಕರಿಸುತ್ತದೆ. ಇದು ಬಹುಜನರನ್ನು ಸ್ವಚ್ಛತೆ ಮತ್ತು ಹಮಾಲಿ ಕೆಲಸಗಳಲ್ಲೇ ಬಂಧಿಸಿಡುವ ಬ್ರಾಹ್ಮಣ್ಯದ ಆಲೋಚನೆಯಾಗಿದೆ.

ನಮ್ಮ ಆಗ್ರಹ:

1. ನಗರಗಳನ್ನು ಸ್ವಚ್ಛಗೊಳಿಸಲು ಮತ್ತು ಕುಂಭಮೇಳದ ವ್ಯವಸ್ಥೆಗಳನ್ನು ಮಾಡಲು ಸರ್ಕಾರಿ ಯಂತ್ರಾಂಗವಿದೆ. ಅಷ್ಟೊಂದು ಹಂಬಲವಿದ್ದರೆ ಕುಂಭಮೇಳದ ಸಾಧುಗಳಿಂದಲೇ ಶ್ರಮದಾನ ಮಾಡಿಸಿ. ಶಿಕ್ಷಣ ಸಂಸ್ಥೆಗಳ ಮಾಲೀಕರು ತಮ್ಮ ಕುಟುಂಬದವರನ್ನು ಕರೆತಂದು ಈ ಶ್ರಮದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲಿ.

2. “ವಿದ್ಯಾರ್ಥಿಗಳ ಕೈಗೆ ಪುಸ್ತಕ ನೀಡಬೇಕಾದ ವಿಶ್ವವಿದ್ಯಾಲಯಗಳು, ಅವರ ಕೈಗೆ ಪೊರಕೆ ನೀಡಿ ಅಂಕದ ಆಮಿಷವೊಡ್ಡುತ್ತಿರುವುದು ಪ್ರಜಾಪ್ರಭುತ್ವದ ಅಧಃಪತನ.

3. “ಶಿಕ್ಷಣದ ಗುಣಮಟ್ಟ ಕಾಪಾಡಲು ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲು ಈ ಕೂಡಲೇ ಈ ವಿವಾದಾತ್ಮಕ ನಿರ್ಧಾರವನ್ನು ಹಿಂಪಡೆಯಬೇಕು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *