‘ಬಸವಾದಿ ಶರಣರ ಕಾಯಕ ತತ್ವದಿಂದ ಯುವಕರ ಭವಿಷ್ಯ ಉಜ್ವಲ‘
ಔರಾದ :
ತಾಲೂಕಿನ ಲಾಧಾ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಭವ್ಯ ಮೂರ್ತಿ ಈಚೆಗೆ ಲೋಕಾರ್ಪಣೆಗೊಂಡಿತು.
ಲೋಕಾರ್ಪಣೆಗೊಳಿಸಿ ಶಾಸಕ ಪ್ರಭು ಚವ್ಹಾಣ ಮಾತನಾಡುತ್ತ, ಬಸವಣ್ಣನವರ ಆಶಯದಂತೆ ಜನಸೇವೆ ಮಾಡಲು ನಾನು ಸದಾ ಸಿದ್ಧನಿದ್ದೇನೆ. ಬಸವಣ್ಣನವರು ಜಗತ್ತಿಗೆ ಸಂಸತ್ತಿನ ಪರಿಕಲ್ಪನೆ ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರ ಸಮಾನತೆಯ ಚಿಂತನೆಗಳನ್ನು ವಿಶ್ವಮಟ್ಟದಲ್ಲಿ ಪಸರಿಸಬೇಕು ಎಂದರು.

ಲೋಕಸಭೆ ಸದಸ್ಯ ಸಾಗರ ಖಂಡ್ರೆ ಮಾತನಾಡಿ, ಬಸವಣ್ಣನವರ ವಚನಗಳ ತತ್ವಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು. ಯುವಕರು ಬಸವಣ್ಣನವರ ಕಾಯಕತತ್ವ ಅಳವಡಿಸಿಕೊಂಡು ಉಜ್ವಲ ಭವಿಷ್ಯ ಹೊಂದಬೇಕೆಂದರು.

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಮೂರ್ತಿಗಳು ಇತಿಹಾಸ ಹೇಳಿಕೊಡುತ್ತವೆ. ಬಸವಣ್ಣನವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಅವುಗಳು ಮಾಡುತ್ತವೆ. ಜಗತ್ತಿನಲ್ಲಿಯೇ ಶ್ರೇಷ್ಠ ಪರಂಪರೆಯ ಬಸವ ಧರ್ಮವನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಸಾಗಬೇಕೆಂದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಬಸವನಾಡು ವಿಶ್ವ ಪ್ರವಾಸಿ ತಾಣವಾಗಬೇಕೆಂದರು.

ಅಕ್ಕ ಗಂಗಾಂಬಿಕೆ ತಾಯಿ ಮಾತನಾಡುತ್ತ, ಬಸವಧರ್ಮದಂತೆ ಬದುಕು ರೂಪಿಸಿಕೊಳ್ಳಬೇಕು. ಇಲ್ಲಸಲ್ಲದ ಮಾತುಗಳಿಗೆ ಕಿವಿಗೊಡದೇ ಬಸವಾದಿ ಶರಣರ ಸಂದೇಶಗಳನ್ನು ಜನ ಪಾಲಿಸಬೇಕು ಎಂದರು.
ಹುಲಸೂರು ಮಠದ ಡಾ. ಶಿವಾನಂದ ಸ್ವಾಮೀಜಿ, ಸಾಯಿಗಾಂವ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿದರು.
ಗ್ರಾಮದಲ್ಲಿ ಬಸವ ಮೂರ್ತಿ ಅನಾವರಣ ನಿಮಿತ್ತ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. 201 ಮಹಿಳೆಯರು ತಲೆಯ ಮೇಲೆ ವಚನ ಸಾಹಿತ್ಯ ಹೊತ್ತು ನಡೆದು ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದ ನಂತರ ಭಾಗವಹಿಸಿದ ಭಕ್ತರಿಗೆ ಲಡ್ಡು, ಅಂಬಲಿ, ಚಪಾತಿ, ಪಲ್ಯ, ಅನ್ನ ಮತ್ತು ಸಾಂಬಾರು ಪ್ರಸಾದದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.
ತಹಶೀಲ್ದಾರ ಮಹೇಶ ಪಾಟೀಲ, ಜೆ.ಎಲ್ಎಂ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ಸಹಾಯಕ ನಿರ್ದೇಶಕ, ಶಿವಕುಮಾರ ಘಾಟೆ, ಅಲ್ಲಮಪ್ರಭು ನಾವದಗೇರೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಗೌರವ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಶಿವಕುಮಾರ ಘಾಟೆ, ಡಾ . ಸಂಜೀವಕುಮಾರ ಜುಮ್ಮಾ, ವಿಜಯಕುಮಾರ ಪಾಟೀಲ, ಮಹಾದೇವ ಮಿಠಾರೆ, ನಾಗಪ್ಪ ಮುಸ್ತಾಪೂರ, ಧನರಾಜ ಮುಸ್ತಾಪುರ, ಮಾರುತಿ ಗಾದಗೆ, ವೈಜನಾಥ ಸಜ್ಜನಶೆಟ್ಟಿ ಮತ್ತಿರರಿದ್ದರು.
