ವಚನ ನಿರ್ವಚನ: ಮನೆಯವರಿಗೆಲ್ಲಾ ಲಿಂಗನಿಷ್ಠೆ ಕಲ್ಪಿಸುವ ಶರಣ ಧರ್ಮ

ಗುಳೇದಗುಡ್ಡ:

ಬಸವ ಕೇಂದ್ರದ ವತಿಯಿಂದ ಶನಿವಾರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶರಣ ದಂಪತಿ ಬಸವಯ್ಯ ಹಾಗೂ ಸುವರ್ಣ ಸಾಲಿಮಠ ಅವರ ಮನೆಯಲ್ಲಿ ನಡೆಯಿತು.

ವಚನ ಚಿಂತನೆಗಾಗಿ ಆಯ್ದುಕೊಂಡ ವಚನ ಕಾಡಸಿದ್ಧೇಶ್ವರ ಅಪ್ಪಗಳವರದು ಹೀಗಿದೆ-

ಗಂಡಗೊಂದು ಲಿಂಗ, ಹೆಂಡತಿಗೊಂದು ಲಿಂಗ,

ಮಕ್ಕಳಿಗೊಂದು ಲಿಂಗ, ಸ್ನೇಹಿತರಿಗೊಂದು

ಗೆಳೆಯರಿಗೊಂದು ಲಿಂಗ,

ಇಂತೀ ನಾಲ್ವರಿಗೆ ನಾಲ್ಕು ಲಿಂಗವಾದರೆ

ಭವಮಾಲೆ ಹರಿಯದು,

ಇಂತೀ ನಾಲ್ವರಿಗೆ ಒಂದೇ ಲಿಂಗವಾದರೆ

ಭವಮಾಲೆ ಹಿಂಗುವುದು ನೋಡಾ

ಕಾಡನೊಳಗಾದ ಶಂಕರಪ್ರಿಯ

ಚೆನ್ನಕದಂಬಲಿಂಗ ನಿರ್ಮಾಯ ಪ್ರಭುವೆ

ವಚನದ ಚಿಂತನೆಗೆ ತೊಡಗಿದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಶ್ರೀಕಾಂತ ಗಡೇದ ವಚನ ಕರ್ತೃ ಕಾಡಸಿದ್ಧೇಶ್ವರರ ಕುರಿತು ಮಾತನಾಡಿ, ಬಸವೋತ್ತರ ಯುಗದ ಕಾಡಸಿದ್ಧೇಶ್ವರ ಕಾಲದ ಬಗ್ಗೆ ನಿರ್ದಿಷ್ಟ ನಿರ್ಧಾರವಿಲ್ಲದಿದ್ದರೂ ಹದಿನೆಂಟನೆಯ ಶತಮಾನದ ಪೂರ್ವರ್ಧದಲ್ಲಿದ್ದರೆಂದು ಒಪ್ಪಲಾಗಿದೆ.

ಇವರು ‘ವೀರಶೈವ ಷಟ್ಸ್ಥಲ’ಎಂಬ ಕೃತಿ ರಚಿಸಿದ್ದು ಇದರಲ್ಲಿ 500 ವಚನಗಳು ಕಾಡನೊಳಗಾದ ಶಂಕರಪ್ರಿಯ ಚೆನ್ನಕದಂಬಲಿಂಗ ನಿರ್ಮಾಯ ಪ್ರಭುವೆ ಎಂಬ ಅಂಕಿತದಲ್ಲಿ ದೊರೆಯುತ್ತವೆ. ವಚನಗಳಲ್ಲಿ ತಾತ್ವಿಕ ವಿಚಾರಗಳೇ ಪ್ರಮುಖವೆನಿಸಿವೆ.

ಮೂಲತಃ ಸಮಾಜ ಪರಿರ್ತನೆಗಾಗಿ ರಚಿಸಿದ ದಂಪತಿಗಳ ಧರ್ಮವಿದು. ಸಕಲ ಜೀವಾತ್ಮರಿಗೆ ಲೇಸ ಬಯಸಿದ ಹೊಸ ಧರ್ಮದಲ್ಲಿ ಇಷ್ಟಲಿಂಗ ನೀಡಿ, ದೇವರನ್ನು ತನ್ನಲ್ಲಿಯೇ ಕಾಣುವ ತಾನೇ ದೇವರಾಗುವ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ಈ ವಚನದಲ್ಲಿ ಇದೇ ಭಾವವಿದೆ. ಮನೆಯ ಸದಸ್ಯರು ನಾಲ್ಕು ಜನ ನಾಲ್ಕು ದಿಕ್ಕಾದರೆ ಗುರಿ ಸಾಧಿಸಲಾಗದು. ಗಂಡ ಕೊಂಬುದು ಪಾದೋದಕ ಪ್ರಸಾದ, ಹೆಂಡತಿ ಕೊಂಬುದು ಸುರೆ ಮಾಂಸವಾದರೆ ಅಲ್ಲಿ ದ್ವೈತ ಭಾವವುಳಿದು ಭವಭವಾಂತರದಲ್ಲಿ ತೊಳಲಬೇಕಾಗುತ್ತದೆ ಎಂದು ಹೇಳಿದರು.

ಪ್ರೊ. ಗಾಯತ್ರಿ ಕಲ್ಯಾಣಿ ಮಾತನಾಡಿ, ಸಂಸಾರ ಬಂಧನದಿಂದ ಪಾರಾಗುವುದು ಹೇಗೆ ಎಂಬ ವಿಚಾರ ಈ ವಚನದಲ್ಲಿ ಮೂಡಿದೆ. ನಮ್ಮ ಸಮಾಜಕ್ಕೆ ಅವಶ್ಯಕವಾದ ಈ ವಚನದಲ್ಲಿ ಸಂಸಾರ ಬಂಧನದಿಂದ ಪಾರಾಗುವುದು ಹೇಗೆ ಎಂಬುದನ್ನು ಶರಣ ಕಾಡಸಿದ್ಧೇಶ್ವರರು ಹೇಳಿದ್ದಾರೆ.  ಇದು ಮನೆಯ ಒಗ್ಗಟ್ಟಿನ ಪ್ರಶ್ನೆಯೂ ಆಗಿದೆ. ಎತ್ತು ಎರೆಗೆ, ಕೋಣ ಕೆರೆಗೆ ಎನ್ನುವಂತಾದರೆ ಅದು ಧಾರ್ಮಿಕ ಕ್ಷೇತ್ರವೇ ಇರಲಿ ಸಾಮಾಜಿಕ ಕ್ಷೇತ್ರವೇ ಇರಲಿ ಸಂಸಾರ ಸುಸೂತ್ರವಾಗಿ ನಡೆಯಲಾರದು.

ಈ ಸಂಸಾರ ನಮ್ಮ ದುಗ್ಗಳೆ –ದಾಸ ದಂಪತಿಗಳಂತೆ ಮಾರಯ್ಯ, ಲಕ್ಕಮ್ಮರಂತಾಗಬೇಕು.  ಹೀಗಾಗಬೇಕಾದರೆ ಧರಿಸಿದ ಲಿಂಗ ಎಲ್ಲರಿಗೂ ಇರಬೇಕು.  ಬೇರೆ ಬೇರೆ ಮನಸ್ಥಿತಿಯಾದರೆ ಸರಿ ಹೋಗುವುದಿಲ್ಲ. ಆಚಾರ ವಿಚಾರಗಳು ಬೇರೆಯಾಗಬಾರದೆಂದರೆ ಮನೆಯವರೆಲ್ಲ ಲಿಂಗನಿಷ್ಠೆಯನ್ನು ಹೊಂದಬೇಕು ಎಂದು ಅಭಿಪ್ರಾಯ ಪಟ್ಟರು. 

ಹಿರಿಯರು ವಚನಾನುಭವಿಗಳೂ ಆದ ಪ್ರೊ. ಸುರೇಶ ರಾಜನಾಳ ಮಾತನಾಡಿ, ಪ್ರತಿಯೊಬ್ಬರೂ ಲಿಂಗದಲ್ಲಿ ಬೆರೆದು ಭವಮಾಲೆಯನ್ನು ಹರಿದುಕೊಳ್ಳುವ ಪರಿಯನ್ನು ವಚನಕಾರರು ಇಲ್ಲಿ ಪ್ರತಿಪಾದಿಸಿದ್ದಾರೆ. ಕರಕಮಲದ ಮಧ್ಯೆ ಇರುವ ಲಿಂಗವು ಮನ ಸ್ಥಲಕ್ಕೆ, ಅಲ್ಲಿಂದ ಭಾವ ಸ್ಥಲಕ್ಕೆ ಸಾಗಿ ಅಲ್ಲಿಯೇ ಐಕ್ಯವಾಗಬೇಕಾಗುತ್ತದೆ. ಮಹಾಲಿಂಗದಲ್ಲಿ ಅಡಗಬೇಕಾಗುತ್ತದೆ. ಇದಕ್ಕಾಗಿ ಮನೆಯವರೆಲ್ಲರ ಆಚಾರ-ವಿಚಾರಗಳು ಒಂದೇ ಆಗಿರಬೇಕಾಗಿರುತ್ತದೆ.

ಮನೆಯ ಸದಸ್ಯರ ವಿಚಾರಗಳೆ ಬೇರೆಯಾಗಿ, ಭ್ರಾಂತಿಯಿಂದ ಬೇರೆ ಬೇರೆ ದೇವರನ್ನು ಹೊಂದಿ ಭ್ರಾಂತಿಗೊಳಗಾದಲ್ಲಿ ಹುಟ್ಟು-ಮರಣಗಳಿಂದ ಹೊರಗಾಗುವುದಿಲ್ಲ. ಲಿಂಗತತ್ವವನ್ನು ಅರಿತ ತಾನು ವಿಶ್ವಚೈತನ್ಯದ ಭಾಗವೇ ಆಗಿದ್ದೇನೆ ಎಂದು ನಂಬಿ ತನ್ನ ಇರುವಿಕೆಯನ್ನು, ತನ್ನ ಅರಿವಿನ ಕುರುಹಾದ ಇಷ್ಟಲಿಂಗದಲ್ಲಿಯೇ ಕಂಡು ಅದೇ ಮಾರ್ಗದಲ್ಲಿ ಚಲಿಸಬೇಕು. ಈ ಅರಿವು ತನ್ನೆಲ್ಲ ಸಂಸಾರಿಗರೂ ಪರಶಿವನ ಆ ಮೂಲಕ ತನ್ನದೇ ಭಾಗವಾಗಿರುವುದೆಂಬುದನ್ನು ಅರಿತರೆ ಅವರು ಜನನ ಮರಣಗಳಿಂದ ದೂರವಾಗುತ್ತಾರೆ. ಈ ಅರಿವು ಮೂಡದಿದ್ದರೆ ಅವರು ಭವಬಂಧನಕ್ಕೆ ಒಳಗಾಗುತ್ತಾರೆ ಎಂದು ಸ್ಪಷ್ಟಪಡಿಸಿದರು.

ಕೊನೆಯಲ್ಲಿ ಸಮಾರೋಪಗೈದ ಮುರುಘೇಶ ಶೇಖಾ ವಚನ ವಿಶ್ಲೇಷಿಸಿ,  ಗಂಡ-ಹೆಂಡತಿ-ಮಕ್ಕಳು-ಗೆಳೆಯರಿಗೆ ಒಂದೊಂದು ದೇವರೆಂದರೆ ಅದು ಪ್ರತ್ಯೇಕತೆಯನ್ನು ಸೂಚಿಸುತ್ತದೆ. ಅಲ್ಲಿ ಲಿಂಗಭಾವವಿಲ್ಲ ಎಂಬುದನ್ನು ಮೇಲ್ನೋಟಕ್ಕೆ ಸೂಚಿಸುತ್ತದೆ.  ಜೊತೆಗೆ ಯಾವುದೇ ವ್ಯಕ್ತಿ (ಶರಣ) ಧರಿಸಿದ ಲಿಂಗ, ಅದು ಆತನ ಸರ್ವಾಂಗದಲ್ಲೆಲ್ಲ ವ್ಯಾಪಿಸಿರುತ್ತದೆ. ಪಂಚ ಜ್ಞಾನೇಂದ್ರಿಯಗಳಲ್ಲಿ ಕಣ್ಣು, ಮೂಗು, ಕಿವಿ ಇತ್ಯಾದಿಗಳಲ್ಲಿ ಆಚಾರಲಿಂಗ, ಗುರುಲಿಂಗ ಮುಂತಾಗಿ ಸ್ಥಾಪಿತಗೊಂಡಿವೆ. ಇಲ್ಲಿ ಏನಾದರೂ ವ್ಯತ್ಯಾಸವಾದರೆ ಬಂಡಿಯ ಹೊಡೆವ ಐವರು ಮಾನಸರು ಸಮವಿಲ್ಲದಂತಾಗಿ ಬಂಡಿ ಮುಗ್ಗರಿಸುವ ಹಾಗೆ ಸಹಜವಾಗಿ ಲಿಂಗಪಥದಿಂದ ದೂರವಾಗಿ ಭವ ಭವಕ್ಕೆ ಸಾಗುತ್ತಾರೆ.

ಹೀಗಾಗಬಾರದೆಂದರೆ ತಾನು ತನ್ನ ಮನೆಯವರೆಲ್ಲ ಒಂದೇ ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಒಂದೇ ರೀತಿಯಾದ ಲಿಂಗವನ್ನು ಶಾರೀರಿಕವಾಗಿ ಹಾಗೂ ಭಾವನಾತ್ಮಕವಾಗಿ ಧರಿಸಬೇಕು. ಈ ಲಿಂಗದ ನಡೆಯಿಂದ ಅಂಗ ಪಥದಿಂದ ದೂರವಾಗಿ ಲಿಂಗದ ನಡೆಯಲ್ಲಿ ಸಾಗಿ ಲಿಂಗದಲ್ಲಿ ಸಮರಸವಾಗುತ್ತಾರೆ. ಇದುವೇ ಭವಮಾಲೆಯನ್ನು ಪರಿಹರಿಸುವ ಲಿಂಗ ರೀತಿಯಾಗುತ್ತದೆ ಎಂಬುದು ಈ ವಚನದ ಮತಿತಾರ್ಥವೆಂದು ವಿವರಿಸಿದರು.  

ಜಯಶ್ರೀ ಬರಗುಂಡಿ ಹಾಗೂ ಸಂಗಡಿಗರ ಸಾಮೂಹಿಕ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ಶರಣರ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಬಸಯ್ಯ ಕಂಬಾಳಿಮಠ,  ನೇತ್ರಾವತಿ ರಕ್ಕಸಗಿ, ಕುಮಾರ ಅರುಟಗಿ, ರೇವಣಸಿದ್ಧೇಶ್ವರಮಠ, ಬಸವರಾಜ ಖಂಡಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಮೊದಲಾದವರು ಸೇರಿದಂತೆ ಬಸವ ಬಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರಾದ ಪ್ರೊ. ಮಹಾದೇವಯ್ಯ ನೀಲಕಂಠಮಠ, ಡಾ. ಗೀರಿಶ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಡಾ. ಶೈಲಾ ಬೆನಕನಾಳ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಸಿದ್ಧಲಿಂಗಪ್ಪ ಬರಗುಂಡಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದಗ ಸಿಂದಗಿ ಮುಂತಾದವರು ಗೂಗಲ್‍ ಮೀಟ್‍ ಮೂಲಕ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *