ಲಿಂಗವಶದಿಂದ ಬಂದ ನಡೆಗಳು
ಲಿಂಗವಶದಿಂದ ಬಂದ ನುಡಿಗಳು
ಲಿಂಗವಂತರು ತಾವು ಅಂಜಲದೇಕೆ ಲಿಂಗವಿರಿಸಿದಂತಿಪ್ಪುದಲ್ಲದೆ
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ.
ಸಮ ಸಮಾಜ ಕಟ್ಟಲು ಹೊರಟ ಬಸವಣ್ಣ ಕ್ರೂರವಾದ ಪ್ರತಿರೋಧ ಎದುರಿಸಬೇಕಾಯಿತು. ಅವರಂತೆ ಹೋರಾಟದ ಬದುಕು ನಡೆಸಲು ಯತ್ನಿಸುವ ಎಲ್ಲರಿಗೂ ಈ ವಚನ ಧೈರ್ಯ ತುಂಬುತ್ತದೆ.
ಲಿಂಗಾಯತ ಧರ್ಮದಲ್ಲಿ ಪ್ರತಿಯೊಬ್ಬರೂ ಜ್ಞಾನಿ ಅಥವಾ ‘ಗುರು’ವಾಗಿ, ಅದನ್ನುಕಾರ್ಯಕ್ಕೆ ತಂದು ‘ಲಿಂಗ’ವಾಗಿ, ನಂತರ ‘ಜಂಗಮ’ ಅಥವಾ ಸಮಾಜಮುಖಿಯಾಗಿ ಬದುಕಲು ಅವಕಾಶವಿದೆ.
ಈ ಹಾದಿ ತುಳಿಯುವರ ಅಂತರಂಗ ಲಿಂಗಮಯವಾಗಿ, ಅವರ ನಡೆ, ನುಡಿಗಳಲ್ಲಿಯೂ ಅದು ಪ್ರಕಟವಾಗುತ್ತದೆ. ಅಂತರಂಗ, ಬಹಿರಂಗ ಎರಡರಲ್ಲಿಯೂ ಅವರು ಶುದ್ಧವಾಗಿರುತ್ತಾರೆ.
ಆತ್ಮ ಅಥವಾ ಲಿಂಗಸಾಕ್ಷಿಯಿಂದ ಬದುಕುವ ಅವರಿಗೆ ಯಾರ ಭಯವೂ ಕಾಡುವುದಿಲ್ಲ. ಬಿಜ್ಜಳನಿಗೆ ಬಸವಣ್ಣ ಅಂಜದೇ ಇದ್ದುದು, ಬ್ರಿಟಿಷರಿಗೆ ಗಾಂಧಿ ಅಂಜದೇ ಇದ್ದುದ್ದು ಇದೇ ಕಾರಣಕ್ಕಾಗಿ.
ನಿರ್ಭೀತ ವ್ಯಕ್ತಿತ್ವ ಹೊಂದುವುದು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಇಂತಹ ಅರಿವಿನ ಪ್ರಜೆಗಳು ಎತ್ತಿಹಿಡಿಯುವ ವಿಚಾರ, ಆಚಾರ, ವಾಕ್ ಸ್ವಾತಂತ್ರ್ಯದ ಅಡಿಪಾಯದ ಮೇಲೆ ಪ್ರಜಾಪ್ರಭುತ್ವ ನಿಂತಿದೆ.
(‘ಲಿಂಗವಂತರು ತಾವು ಅಂಜಲೇಕೆ ‘ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩.)