ಬೆಳಗಾವಿ :
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಲಿಂಗಾಯತ ಮಹಿಳಾ ಸಮಾಜದಿಂದ ಮಹಾಶರಣೆ, ವೀರವಿರಾಗಿಣಿ ಅಕ್ಕಮಹಾದೇವಿ ಅವರ ವಚನಗಳ ಕಂಠಪಾಠ ಸ್ಪರ್ಧೆ ನಡೆಯಿತು.

ನಾಗನೂರ ರುದ್ರಾಕ್ಷಿಮಠದ ಶ್ರೀ ಸಿದ್ಧರಾಮೇಶ್ವರ ಶಾಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ನಿರ್ಣಾಯಕರಾಗಿ ಸ್ಪರ್ಧೆ ನಡೆಸಿಕೊಟ್ಟರು.
ಸ್ಪರ್ಧೆಯಲ್ಲಿ 97 ವಚನ ಹೇಳಿದ ಲಾವಣ್ಯ ಅಂಗಡಿ ಪ್ರಥಮ ಸ್ಥಾನ ಪಡೆದುಕೊಂಡರು. 63 ವಚನ ಹೇಳಿದ ನಿರ್ಮಲಾ ಕುಂದಗೋಳ ದ್ವಿತೀಯ, ಹಾಗೂ 60 ವಚನ ಹೇಳಿದ ಬಸಮ್ಮ ಮಠದ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಅಕ್ಕಮಹಾದೇವಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು.

ಮಹಿಳಾ ಸಮಾಜದ ರಕ್ಷಾ ದೇಗಿನಹಾಳ ಸ್ವಾಗತಿಸಿದರು. ಸುಜಾತಾ ಮತ್ತಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷರಾದ ಮದುಮತಿ ಹಿರೇಮಠ, ಸಂಸ್ಥಾಪಕ ಅಧ್ಯಕ್ಷರಾದ ಶೈಲಜಾ ಭಿಂಗೆ, ಜೈಶೀಲಾ ಬ್ಯಾಕೂಡ ವೇದಿಕೆಯ ಮೇಲಿದ್ದರು.

ಸಂಚಾರಿ ಗುರುಬಸವ ಬಳಗದ ಸಂಚಾಲಕ ಮಹಾಂತೇಶ ತೋರಣಗಟ್ಟಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಿ. ಎಂ. ಬೂದಿಹಾಳ ಅವರ ನೇತೃತ್ವದಲ್ಲಿ ಮಹಾಸಭಾದ ಪದಾಧಿಕಾರಿಗಳು ಸ್ಪರ್ಧಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.
