ಮಾನವಿ
ತಾಲೂಕಿನ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಜಾತಿ ಗಣತಿಯಲ್ಲಿ ‘ಲಿಂಗಾಯತ’ ಎಂದು ಬರೆಸಲು ನಿರ್ಣಯಿಸಲಾಯಿತು.
ಶನಿವಾರ ಸುಶಾಂತ್ ಕಂಫರ್ಟ್ನಲ್ಲಿ ನಡೆದ ಸಭೆಯಲ್ಲಿ ಮಾನವಿ ಹಾಗೂ ಸಿರವಾರ ತಾಲೂಕಿನ ಜನರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಬರೆಸಬೇಕಾದ ವಿಷಯಗಳ ಕುರಿತಂತೆ, ಹಾಗೂ ಸಂಘದ ಸಂಘಟನೆ ಹಾಗೂ ನೂತನ ಅಧ್ಯಕ್ಷರ ಆಯ್ಕೆಯ ಕುರಿತಂತೆ ಸಭೆ ನಡೆಯಿತು.

ಈ ಸಂದರ್ಭದಲ್ಲಿ ರಾಯಚೂರಿನ ಮಲ್ಕಪ್ಪ ಪಾಟೀಲ, ಎನ್. ಉದಯಕುಮಾರ ಮಾತನಾಡಿ, ಮೂಲ ಬಸವಣ್ಣನ ಅನುಯಾಯಿಗಳಾದ ಬಣಜಿಗರು ಬಸವತತ್ವಕ್ಕೆ ಬದ್ಧರಾಗಿರಬೇಕು. ಇದೇ ತಿಂಗಳು 22ರಿಂದ ಆರಂಭವಾದ ಸಾಮಾಜಿಕ ಹಾಗೂ ಶೈಕ್ಷಣಿಕ (ಜಾತಿ) ಸಮೀಕ್ಷೆಯಲ್ಲಿ, ಎಲ್ಲರೂ ಒಟ್ಟಾಗಿ ಧರ್ಮದ ಕಾಲಂ ನಲ್ಲಿ ಇತರೆ ಎಂದು ಇರುವಲ್ಲಿ ‘ಲಿಂಗಾಯತ’ ಎಂದೇ ಬರೆಸಬೇಕು. ಜಾತಿ ಕಾಲಂ ನಲ್ಲಿ ‘ಬಣಜಿಗ’ ಎಂದು ಬರೆಸೋಣ ಎಂದು ಹೇಳಿದರು.
ಚುಕ್ಕಿ ಸೂಗಪ್ಪ ಮಾತನಾಡಿ ನಮ್ಮ ಮುಂದಿನ ಪೀಳಿಗೆಯ ದೃಷ್ಟಿಯಿಂದ ಎಲ್ಲರೂ ಲಿಂಗಾಯತ ಎಂದು ಬರೆಸಬೇಕು ಎಂದರು.
ಸಭೆಯು ನಿರೀಕ್ಷೆಗೂ ಮೀರಿ ಸ್ಪಂದಿಸಿತು. ಬಸವತತ್ವಕ್ಕೆ ಬದ್ಧರಾಗಿ ಬಾಳೋಣ ಲಿಂಗಾಯತ ಧರ್ಮ ಎಂದೇ ಬರೆಸೋಣ ಎಂಬ ಸಂಕಲ್ಪದೊಂದಿಗೆ, ಸಭೆ ಮುಕ್ತಾಯಗೊಂಡಿತು.