“ಯಾವುದೇ ಬ್ಯಾನರ್ ನಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಅಥವಾ ಜಾಗತಿಕ ಲಿಂಗಾಯತ ಮಹಾಸಭಾದ ಹೆಸರುಗಳು ಇರುವುದಿಲ್ಲ. ಇದು ಇಡೀ ಲಿಂಗಾಯತ ಸಮುದಾಯದ ಕಾರ್ಯಕ್ರಮ.”
ಧಾರವಾಡ
ಈ ವರ್ಷ ರಾಜ್ಯಾದ್ಯಂತ ನಡೆಯಲಿರುವ ಲಿಂಗಾಯತ ಧರ್ಮ ಜಾಗೃತಿ ಅಭಿಯಾನದ ರೂಪರೇಷೆಯನ್ನು ತಯಾರಿಸಲು ಜಂಟಿ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿದೆ.
ಈ ಸಮಿತಿಯ ಮಹತ್ವದ ಸಭೆ ಧಾರವಾಡದಲ್ಲಿ ಫೆಬ್ರವರಿ 19 ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ.
ಪೂಜ್ಯ ಬಸವಲಿಂಗ ಪಟ್ಟದ್ದೇವರು, ಪೂಜ್ಯ ತೋಂಟದ ಸಿದ್ಧರಾಮ ಶ್ರೀಗಳು, ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಪೂಜ್ಯ ಶಿವಾನಂದ ಶ್ರೀಗಳು, ಜಂಟಿ ಸಮಿತಿಯಲ್ಲಿದ್ದಾರೆ. ಮೈಸೂರಿನ ಶರತಚಂದ್ರ ಸ್ವಾಮೀಜಿಯವರನ್ನೂ ಜಂಟಿ ಸಮಿತಿಯಲ್ಲಿ ನೇಮಿಸಲಾಗಿದೆಯೆಂದು ತಿಳಿದುಬಂದಿದೆ.
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಸಂಘಟನೆಯ ಪರವಾಗಿ ಐದು ಪದಾಧಿಕಾರಿಗಳನ್ನು ಜಂಟಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದಾರೆ: ಜಿ ಬಿ ಪಾಟೀಲ, ಬೆಂಗಳೂರು, ಬಸವರಾಜ ಧನ್ನೂರ, ಬೀದರ, ಬಸವರಾಜ ರೊಟ್ಟಿ, ಬೆಳಗಾವಿ, ಎಮ್ ವಿ ಗೊಂಗಡಶೆಟ್ಟಿ, ಧಾರವಾಡ ಮತ್ತು ಮಹಾದೇವಪ್ಪ, ಮೈಸೂರು.

ಈ ಬೆಳವಣಿಗೆಗಳ ಬಗ್ಗೆ ಸಂಬಂಧಿಸಿದ ಕೆಲವರ ಜೊತೆ ಮಾತನಾಡಿದಾಗ ನಮಗೆ ಸಿಕ್ಕಿರುವ ಮಾಹಿತಿ:
1) ಫೆಬ್ರವರಿ 19ರ ಸಭೆಯಲ್ಲಿ ಮುಖ್ಯವಾದ ನಿರ್ದಾರಗಳನ್ನು ತೆಗೆದುಕೊಳ್ಳಲಾಗುವುದು. ಮಕ್ಕಳ ಪರೀಕ್ಷೆ, ಮಳೆ ಮುಂತದ ಅಂಶಗಳನ್ನು ಪರಿಗಣಿಸಿ ವಿವಿಧ ಜಿಲ್ಲೆಗೆಳಲ್ಲಿ ಅಭಿಯಾನದ ದಿನಾಂಕಗಳನ್ನು ಸೂಚಿಸಲಾಗುವುದು.
2) ಮಠಾಧೀಶರ ಒಕ್ಕೂಟ ಮತ್ತು ಜಾಗತಿಕ ಮಹಾಸಭಾ ಈ ಕೆಲಸ ಶುರು ಮಾಡಿದೆಯಷ್ಟೇ. ಅಭಿಯಾನ ಈ ಎರಡು ಸಂಘಟನೆಗಳಿಗೆ ಸೀಮಿತವಾಗದೆ ಎಲ್ಲಾ ಬಸವ ತತ್ವದ ಸಂಸ್ಥೆ ಸಂಘಟನೆಗಳನ್ನು ಮುಕ್ತವಾಗಿ ಪಾಲ್ಗೊಳ್ಳುವಂತೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. “ಯಾವುದೇ ವೇದಿಕೆ ಅಥವಾ ಬ್ಯಾನರ್ ಗಳಲ್ಲಿ ಒಕ್ಕೂಟದ ಅಥವಾ ಜಾಗತಿಕ ಮಹಾಸಭಾದ ಹೆಸರುಗಳು ಇರುವುದಿಲ್ಲ. ಇದು ಇಡೀ ಲಿಂಗಾಯತ ಸಮುದಾಯದ ಕಾರ್ಯಕ್ರಮ,” ಎಂದು ಒಬ್ಬರು ಹೇಳಿದರು.
3) ಅಭಿಯಾನ ‘ಮತ್ತೆ ಕಲ್ಯಾಣ’ದ ಮಾದರಿಯಲ್ಲಿ ನಡೆಯುವುದು. ‘ಮತ್ತೆ ಕಲ್ಯಾಣ’ದಲ್ಲಿ ನಡೆದ ಚಟುವಟಿಕೆಗಳ ಅನುಭವದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲಾಗುವುದು. ‘ಅದೇ ರೀತಿಯ ಕಾರ್ಯಕ್ರಮವನ್ನು ವಿಸ್ತಾರವಾಗಿ ಎಲ್ಲಾ ಜಿಲ್ಲೆಗಳಲ್ಲಿ ಬೇರೆ ಬೇರೆ ಸಂಘಟನೆಗಳ ಸಹಯೋಗದಲ್ಲಿ ನಡೆಸಲಾಗುವುದು. ಇದರಲ್ಲಿ ಸಾಣೇಹಳ್ಳಿ ಶ್ರೀಗಳ ಮಾರ್ಗದರ್ಶನ ಮುಖ್ಯವಾಗುತ್ತದೆ,’ ಎಂದು ಇನ್ನೊಬ್ಬರು ಹೇಳಿದರು.
ಅಭಿಯಾನ ‘ಮತ್ತೆ ಕಲ್ಯಾಣ’ದ ಮಾದರಿಯಲ್ಲಿ ನಡೆಯುವುದು. ‘ಮತ್ತೆ ಕಲ್ಯಾಣ’ದಲ್ಲಿ ನಡೆದ ಚಟುವಟಿಕೆಗಳ ಅನುಭವದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲಾಗುವುದು.
4) ಜಿಲ್ಲಾ ಮಟ್ಟದಲ್ಲಿ ಆಯ್ದ ವ್ಯಕ್ತಿಗಳಿಗೆ ಜವಾಬ್ದಾರಿ ನೀಡಲಾಗುವುದು. ಅವರು ಆಯಾ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಸಂಘಟನೆಗಳನ್ನು ಸೇರಿಸಿಕೊಂಡು ಅಭಿಯಾನ ನಡೆಸುವಂತೆ ನೋಡಿಕೊಳ್ಳಲಾಗುವುದು.
“ಅಭಿಯಾನವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆದರೆ ಕೆಲಸವನ್ನು ಯಾರೊಬ್ಬರ ಮೇಲೂ ಹಾಕದೆ ಸ್ವಪ್ರತಿಷ್ಠೆಯನ್ನು ಬಿಟ್ಟು ಪ್ರತಿಯೊಬ್ಬರೂ ಕೈ ಜೋಡಿಸಿದರೆ ಮಾತ್ರ ಇದು ಯಶಸ್ವೀಯಾಗಲು ಸಾಧ್ಯ,” ಎಂದು ಒಬ್ಬರು ಪ್ರಮುಖರು ಹೇಳಿದರು.
ಜನವರಿ 17ರಂದು ಬಸವ ಮೀಡಿಯಾ ಲಿಂಗಾಯತ ಸಮಾಜದ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ ದಾಳಿಯನ್ನು ತಡೆಯಲು ರಾಜ್ಯದ ಮೂಲೆ ಮೂಲೆಗಳಲ್ಲಿ ಬಸವ ಭಕ್ತರ ಅಭಿಯಾನ ನಡೆಸಲು ಲಿಂಗಾಯತ ಮಠಾಧೀಶರ ಒಕ್ಕೊಟ ನಿರ್ಣಯ ತೆಗೆದುಕೊಂಡಿದೆ ಎಂದು ವರದಿ ಮಾಡಿತ್ತು.
ನಂತರ ಇದರ ಬಗ್ಗೆ ಬಸವ ಮೀಡಿಯಾದಲ್ಲಿ ಹಲವಾರು ದಿನಗಳು ನಡೆದ ಚರ್ಚೆಯಲ್ಲಿ ಮೂಡಿದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಮಠಾಧೀಶರಿಗೆ ತಲುಪಿಸಲಾಗಿತ್ತು.

ಮೈಸೂರು ಭಾಗದ ಯಾವ ಸ್ವಾಮೀಜೀಗಳು ಮತ್ತು ಮಠಾದೀಶರು ಈ ಕಾರ್ಯಕ್ರಮದಲ್ಲಿ ಬಾಗಿಯಾಗುತ್ತಾರೆ. ಈ ಒಕ್ಕೂಟದವರು ಅವರುಗಳ ಅಭಿಪ್ರಾಯ ಕೇಳಿರುವರೇ ಅಥವಾ ಮಾಹಿತಿ ತಿಳಿದಿರುವರೇ? ಈ ಒಕ್ಕೂಟವು ರಾಜ್ಯಾದ್ಯಂತ ಲಿಂಗಾಯತ ಧರ್ಮದ ವಿಚಾರವಾಗಿ ಸಂಘಟಿಸಲು ಹೊರಟಿರುವುದು ಸಂತೋಷದ ವಿಷಯವಾಗಿದೆ
ಈ ಜಂಟಿ ಸಮಿತಿಯಲ್ಲಿ ಇಡೀ ಕರ್ನಾಟಕ ಮತ್ತು ಮಹಾರಾಷ್ಟ್ರ,ತೆಲಂಗಾಣ, ಆಂಧ್ರಪ್ರದೇಶ,ತಮಿಳುನಾಡು ಮುಂತಾದ ಕಡೆ ಸಕ್ರಿಯ ಸ್ವಯಂ ಸೇವಕರನ್ನು ಹೊಂದಿರುವ ಲಿಂಗೈಕ್ಯ ಮಾತೆ ಮಹಾದೇವಿ ಅವರ ರಾಷ್ಟ್ರೀಯ ಬಸವ ದಳದ ಗಂಗಾ ಮಾತಾಜಿ ಅಥವಾ ಅವರು ಸೂಚಿಸುವ ಒಬ್ಬರನ್ನು ಕೋಆಪ್ಟ್ ಮಾಡಿಕೊಳ್ಳುವುದು ಉತ್ತಮ.
ಇದು ಅಂತಿಮ ಸಮಿತಿಯಲ್ಲ, ಹೆಸರು ಮತ್ತು ಕಾರ್ಯಕ್ರಮ ಸಂಯೋಜಿಸುವ ಬಗ್ಗೆ ಅಭಿಪ್ರಾಯ ಮತ್ತು ಅದರ ಬಗ್ಗೆ ಇರುವ ಸಾದಕ ಬಾದಕಗಳ ಬಗ್ಗೆ ಚರ್ಚಿಸಿ ಮುಂದಿನ ನಡೆ ಹಾಗು ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ಎಲ್ಲ ಸಂಘಟಣೆ ಗಳ ಪ್ರಮುಖರ ಸಭೆ ನಡೆಸಿ ,ಸಭೆಯ ತೀರ್ಮಾನದಂತೆ ಮುನ್ನಡೆಸುವ ಅಭಿಯಾನ. ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಅ.ಭಾ.ವಿ.ಮಹಾಸಭೆಯವರನ್ನು ಸಹ ಆಮಂತ್ರಿಸುವ ಅಭಲಾಶೆ ಮುಖಂಡರಲ್ಲಿದೆ.
ಈ ಸಮಿತಿಯಲ್ಲಿ ಮೈಸೂರಿನ ಪೂಜ್ಯ ಶರಶ್ಚಂದ್ರ ಸ್ವಾಮೀಜಿ, ಹಾಗು JLM ನ ಮಹಾದೇವಪ್ಪ ಇದ್ದಾರೆ.
ಪೂಜ್ಯರುಗಳನ್ನು ಹೊರತುಪಡಿಸಿದರೆ ಮೈಸೂರಿನಿಂದ ಮಹದೇವಪ್ಪ ಒಬ್ಬರೇ. ದಕ್ಷಿಣ ಕರ್ನಾಟಕದ ಇತರೆ ಭಾಗದಿಂದ ಒಬ್ಬೊಬ್ಬರನ್ನು ಸೇರಿಸುವುದು ಒಳಿತು. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಶ್ರಮವಹಿಸಬೇಕು.
ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಇದರ ಯಾವ ಸದಸ್ಯರನ್ನು ಸೇರಿಸಿಕೊಂಡಿದ್ದೀರಿ
ಶರಣ ಬಸವರಾಜ್ ರೊಟ್ಟಿ ಅವರು ಬಸವ ಧರ್ಮ ಪೀಠದ/ ರಾಷ್ಟ್ರೀಯ ಬಸವ ದಳದ ವತಿಯಿಂದ ಗಂಗಾ ಮಾತಾಜಿ ಅಥವಾ ಅವರು ಸೂಚಿಸುವ ಒಬ್ಬರನ್ನು ಸೇರಿಸಿಕೊಳ್ಳಲು ಪ್ರಯತ್ನ ಮಾಡಿದರೆ ಉತ್ತಮ. ಲಿಂಗಾಯತ ಧರ್ಮದ ಪರವಾಗಿ ಬಂಡೆಯಂತೆ ನಿಲ್ಲುವ ಗಣಾಚಾರಿಗಳ ಪಡೆ ರಾಷ್ಟ್ರೀಯ ಬಸವ ದಳದ ಸ್ವಯಂ ಸೇವಕರೂ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡೇ ಲಿಂಗಾಯತ ಧರ್ಮದ ಹೋರಾಟ ಮಾಡುವುದು ಸಮಂಜಸ.
ಸ್ವಾಗತಾರ್ಹ ಬೆಳವಣಿಗೆ. ಆದರೆ, ರಚಿಸಲಾಗಿದೆ ಎಂದು ಪ್ರಕಟಿಸಿರುವ ವರದಿಯಂತೆ ಸ್ವಾಮೀಜಿಗಳನ್ನು ಹೊರತು ಪಡಿಸಿದರೆ ಕೇವಲ ಜೆಎಲ್ಎಂ ನ ಪದಾಧಿಕಾರಿಗಳು ಮಾತ್ರ ಇದ್ದಾರೆ ಅದರಲ್ಲೂ ಹೆಚ್ಚಿನವರು ಉತ್ತರ ಕರ್ನಾಟಕದವರು. ದಕ್ಷಿಣ ಕರ್ನಾಟಕದಿಂದ ಕೇವಲ ಒಬ್ಬರು ಮಾತ್ರ ಇದ್ದಾರೆ. ಗುಂಪಿನಲ್ಲಿ ಇವರೂ ಒಬ್ಬರು ಇರಲಿ ಅನ್ನುವ ಕಾರಣಕ್ಕಿಂತ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮತ್ತು ಸಂಘಟನಾ ಶಕ್ತಿಯುಳ್ಳವರಿಗೂ ಸ್ಥಾನ ಕೊಡುವ ಬಗ್ಗೆ ಚಿಂತಿಸಬೇಕು. ಜೆಎಲ್ಎಂ ಹೊರತುಪಡಿಸಿ ಬೇರೆ ಸಂಘಟನೆಯವರನ್ನೂ ಸೇರಿಸಿಕೊಳ್ಳುವುದು ಒಳ್ಳೆಯದು. ಈಗಾಗಲೇ ಬಸವ/ಶರಣತತ್ವ ಪ್ರಚಾರದಲ್ಲಿ ದೊಡ್ಡಮಟ್ಟದಲ್ಲಿ ತೊಡಗಿಕೊಂಡಿರುವವರನ್ನು ಸೇರಿಸಿಕೊಳ್ಳುವುದು ಸರಿಯಾದ ಕ್ರಮ. ಈ ಗುಂಪಿನಲ್ಲಿ ಬಸವತತ್ವದಲ್ಲಿ ಶೈಕ್ಷಣಿಕ ಕೆಲಸ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡು ಬರಹ ಮತ್ತು ಕೃತಿಗಳ ರಚನೆಯಲ್ಲಿ ತೊಡಗಿಕೊಂಡಿರುವವರನ್ನೂ ಸೇರಿಸಿಕೊಳ್ಳುವುದು ಸೂಕ್ತ. ಈ ಅಭಿಯಾನ ಕರ್ನಾಟಕದಾದ್ಯಂತ ಸಂಚರಿಸಬೇಕಾಗಿರುವುದರಿಂದ ದಕ್ಷಿಣ ಕರ್ನಾಟಕದವರಿಗೂ ಹೆಚ್ಚಿನ ಪ್ರಾತಿನಿಧ್ಯ ಕೊಡುವುದು ಒಳ್ಳೆಯದು. ಈ ಅಭಿಯಾನದಲ್ಲಿ ಬಸವತತ್ವದಲ್ಲಿ ನಂಬಿಕೆಯಿರುವ ಲಿಂಗಾಯತೇತರರನ್ನು ಒಳಗೊಳ್ಳುವುದು ಸೂಕ್ತ. ಫೆಬ್ರವರಿ 19 ರ ಸಭೆಯಲ್ಲಿ ಜಿಲ್ಲಾವಾರು ಸಮಿತಿಗಳನ್ನೂ ರಚಿಸುವ ಬಗ್ಗೆ ಚರ್ಚೆಯಾಗಲಿ.
ಮೈಸೂರು ಭಾಗದಲ್ಲಿ ಕೆಲವು ರಾಷ್ಟ್ರೀಯ ಬಸವ ದಳದವರು ಉತ್ತಮ ಸಂಘಟನೆ. ಮಾಡುವ ಕಾರ್ಯಕರ್ತರು ಇದ್ದಾರೆ ಅವರನ್ನು ತೆಗೆದುಕೊಳ್ಳಬೇಕು.
ಏಪ್ರಿಲ್ ಕೊನೆ ವಾರ ಮತ್ತು ಮೇ ತಿಂಗಳಲ್ಲಿ ಈ ಕಾರ್ಯಕ್ರಮ ನಡೆಸುವುದು ಒಳ್ಳೆಯದು . ಹಾಗೂ ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡದವರನ್ನು ಈ ಕಾರ್ಯಕ್ರಮದ ಭಾಗವಾಗಿಸುವುದು ಒಳ್ಳೆಯದು. ಇಲ್ಲದೆ ಹೋದರೆ ಮತ್ತೆ ಕಲ್ಯಾಣ ಕೇವಲ ವಾಚಕ ಶಬ್ದವಾಗುತ್ತದೆ . ಇದು ಒಂದು ಹೊಸ ಪರಿವರ್ತನೆಗೆ ರಹಧಾರಿ ಆಗಬೇಕು.
ಏಪ್ರಿಲ್ ಕೊನೆ ವಾರ ಮತ್ತು ಮೇ ತಿಂಗಳಲ್ಲಿ ಈ ಕಾರ್ಯಕ್ರಮ ನಡೆಸುವುದು ಒಳ್ಳೆಯದು . ಹಾಗೂ ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡದವರನ್ನು ಈ ಕಾರ್ಯಕ್ರಮದ ಭಾಗವಾಗಿಸುವುದು ಒಳ್ಳೆಯದು. ಇಲ್ಲದೆ ಹೋದರೆ ಮತ್ತೆ ಕಲ್ಯಾಣ ಕೇವಲ ವಾಚಕ ಶಬ್ದವಾಗುತ್ತದೆ . ಇದು ಒಂದು ಹೊಸ ಪರಿವರ್ತನೆಗೆ ರಹಧಾರಿ ಆಗಬೇಕು.