ಲಿಂಗಾಯತ ಧರ್ಮ ಹೋರಾಟದಲ್ಲಿ ಮಾತಾಜಿ ಪಾತ್ರ ಮರೆಯಲಾಗದ್ದು: ಗಿರಿಜಕ್ಕ ಧರ್ಮರಡ್ಡಿ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ:

ಇಂದು ನಾಡಿನಾದ್ಯಂತ ಬಸವಪರ ಸಂಘಟನೆಗಳು ತತ್ವ ಪಸರಿಸುವ ಕೆಲಸ ಮಾಡುತ್ತಿವೆ. ಅದರ ಪರಿಣಾಮ ಜನತೆಯಲ್ಲಿ ಲಿಂಗಾಯತದ ನಿಜತತ್ವಗಳ ಅರಿವಾಗುತ್ತಿದೆ. ಈ ಸಂಘಟನೆಗಳ ರೂವಾರಿ ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿಯವರಾಗಿದ್ದಾರೆಂದು ಬಸವತತ್ವ ಚಿಂತಕಿ ಗಿರಿಜಕ್ಕ ಧರ್ಮರಡ್ಡಿ ಅವರು ನುಡಿದರು.

 ಅವರು ಈಚೆಗೆ ನಡೆದ ಬಸವದಳ, ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ವೇದಿಕೆ ಸಂಯುಕ್ತಾಶ್ರಯದಲ್ಲಿ  ೧೬೮೯ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಪಾಂಡುರಂಗ ಈಶ್ವರಪ್ಪ ಕೂರಾ” ಇವರ ಹೆಸರಿನ ದತ್ತಿ ದಾನಿ ಪ್ರೊ. ಎಂ. ಬಸವರಾಜ ಅವರು ನೀಡಿದ ದತ್ತಿಯಿಂದ ನಡೆದ ‘ವಿಶ್ವ ಮಹಿಳಾ ದಿನಾಚರಣೆ’ ಅಂಗವಾಗಿ ಲಿಂಗೈಕ್ಯ ಪೂಜ್ಯ ಡಾ. ಮಾತೆ ಮಹಾದೇವಿ ಹಾಗೂ ನಿರ್ಭಿತರಾಣಿ ಅಬ್ಬಕ್ಕ ಅವರುಗಳ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾತಾಜಿಯವರು ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮದತ್ತ ಆಸಕ್ತಿ ಹೊಂದಿದ್ದರು. ಮುಂದೆ ಲಿಂಗಾನಂದ ಸ್ವಾಮೀಜಿಯವರ ಮಾರ್ಗದರ್ಶನ ದೊರೆತು, ಅವರಲ್ಲಿ ಸಮರ್ಥ ಗುರುವನ್ನು ಕಂಡುಕೊಂಡರು. ಅವರಿಂದ ಸನ್ಯಾಸತ್ವ ಸ್ವೀಕರಿಸಿದರು. ಆ ಮೂಲಕ ಲಿಂಗಾಯತ ಧರ್ಮಕ್ಕೆ ಜ್ಞಾನದ ಬೆಳ್ಳಿಚುಕ್ಕೆಯೊಂದು ದೊರೆತಂತಾಯಿತು.

ವಚನ ಸಾಹಿತ್ಯ ಆಳವಾಗಿ ಅಧ್ಯಯನಿಸಿದ್ದ ಮಾತಾಜಿ ತಮ್ಮ ಜ್ಞಾನಪೂರ್ಣ ಉಪನ್ಯಾಸಗಳಿಂದ ನಾಡಿನಾದ್ಯಂತ ಪ್ರಚಲಿತರಾದರು. ಅವರು ಬಸವ ಧರ್ಮಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಧರ್ಮ ಪ್ರಚಾರದ ಜೊತೆಗೆ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಗ್ರಂಥಗಳ ರಚನೆ ಅವರಿಂದ ನಡೆದು ಮಹತ್ವ ಪೂರ್ಣ ಪುಸ್ತಕಗಳು ಹೊರ ಬಂದವು.

ಧರ್ಮ ಚಿಂತಕರಾದ ಅವರು ವಚನ ಸಾಹಿತ್ಯ ಜನಸಾಮಾನ್ಯರಿಗೆ ಮುಟ್ಟಬೇಕೆಂಬ ಹಂಬಲದ ಪರಿಣಾಮ ಶುಭ ಕಾರ್ಯಗಳಲ್ಲಿ ಕಾಣಿಕೆಯಾಗಿ ಚಿಕ್ಕಚಿಕ್ಕ ವಚನ ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸಿ ಅವನ್ನು ಹಂಚುವಂತೆ ಭಕ್ತರಿಗೆ ಪ್ರೇರೇಪಿಸಿದರು. ಜೊತೆಗೆ ತಮ್ಮ ಹಾಗೂ ಲಿಂಗಾನಂದ ಮಹಾಸ್ವಾಮೀಜಿಯವರು ಸೇರಿದಂತೆ ಬಸವತತ್ವ ಪ್ರಚಾರಕರ ಉಪನ್ಯಾಸಗಳನ್ನು ಕೆಸೆಟ್‌ನಲ್ಲಿ ರೆಕಾರ್ಡ್ ಮಾಡಿಸಿ ಬಿಡುಗಡೆ ಮಾಡಿದರು. ಇವು ತುಂಬ ಜನಪ್ರಿಯವಾದವು.

ಮಾತಾಜಿಯವರು “ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ”ದ ನೇತೃತ್ವ ವಹಿಸಿದಾಗ ರಾಜ್ಯದ ಮೊದಲ ಮಹಿಳಾ ಜಗದ್ಗುರುವೆಂಬ ಗೌರವಕ್ಕೂ ಪಾತ್ರರಾದರು. ಇವರು ಬಹುತೇಕ ರಾಜ್ಯದ ಪ್ರದೇಶಗಳ ಜೊತೆಗೆ ಹೊರರಾಜ್ಯಗಳಲ್ಲೂ ಧರ್ಮ ಪ್ರಸಾರ ಮಾಡುವ ಮೂಲಕ ಲಿಂಗಾಯತ ಧರ್ಮಕ್ಕೆ ನವಚೈತನ್ಯ ನೀಡಿದರೆಂದರು.

ಮಾತಾಜಿ ೧೯ನೇ ವಯಸ್ಸಿನಿಂದ ಧರ್ಮ ಪ್ರಚಾರ ಆರಂಭಿಸಿ ತಮ್ಮ ಕೊನೆಯುಸಿರು ಇರುವವರೆಗೂ ಈ ಕಾರ್ಯ ನೆರವೇರಿಸಿದರು. ”ಲಿಂಗಾಯತ ಧರ್ಮ ಮಾನ್ಯತಾ ಹೋರಾಟ”ದಲ್ಲಿ ಅವರ ಪಾತ್ರ ಮರೆಯಲಾಗದ್ದು ಎಂದರು.

ನಂತರ “ನಿರ್ಭೀತರಾಣಿ ಅಬ್ಬಕ್ಕ”ರ ಕುರಿತು ಮತ್ತೋರ್ವ ಅತಿಥಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಪ್ರೊ. ಸುಧಾ ಹುಚ್ಚಣ್ಣವರ  ಮಾತನಾಡುತ್ತ, ಈ ನಾಡಿನಲ್ಲಿ ತಮ್ಮ ಶೂರತನ, ಸಮರ್ಥತತೆಯಿಂದ ಈ ನಾಡನ್ನು ಆಳಿ, ರಕ್ಷಿಸಿದ ಅನೇಕ ರಾಣಿಯರಿದ್ದಾರೆ, ಅವರಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಕೂಡಾ ಒಬ್ಬರಾಗಿದ್ದಾರೆ.

ಅಂದು ಉಳ್ಳಾಲ ಸಣ್ಣ ಪ್ರಾಂತವಾಗಿತ್ತು. ಆದರೆ ಮಂಗಳೂರು ಬಂದರು ದೊಡ್ಡ ವ್ಯಾಪಾರದ ಸ್ಥಳವಾಗಿತ್ತು. ಇಲ್ಲಿಂದ ಸಾಂಬರು ಪದಾರ್ಥಗಳು ಯುರೋಪಿಗೆ ಸಮುದ್ರದ ಮೂಲಕ ರಪ್ತಾಗಲು ದೊಡ್ಡ ಅನುಕೂಲವಿತ್ತು. ಇದರ ಮೇಲೆ ಪೋರ್ಚುಗೀಸರ ಕಣ್ಣು ಬಿತ್ತು. ಅವರು ಕಪ್ಪ ನೀಡುವಂತೆ ರಾಣಿ ಅಬ್ಬಕ್ಕರಿಗೆ ತಿಳಿಸಿದರು. ಆದರೆ ಅಬ್ಬಕ್ಕ ಮಾತ್ರ ತಾವು ಯಾವುದೇ ಕಪ್ಪ ನೀಡಲಾರೆನೆಂದು ಸವಾಲು ಹಾಕಿದರು. ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಮರಣ ಹೊಂದಿದರು.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬಸವಣ್ಣನವರು ಹಾಗೂ ಅಕ್ಕ ಮಹಾದೇವಿಯವರ ಬಗ್ಗೆ ಅಶ್ಲೀಲ ಪದ ಬಳಸಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿರುವ ರಮಾಕಾಂತ ಎಂ. ಎಂಬ ವಿಕೃತಮನಸ್ಸಿನವನ ವಿಚಾರಗಳನ್ನು ಖಂಡಿಸಲಾಯಿತು.

ಕಾರ್ಯಕ್ರಮ ವಚನ  ಪ್ರಾರ್ಥನೆಯೊಂದಿಗೆ ಆರಂಭವಾಯಿತು. ನಾಗರತ್ನ ಅಸುಂಡಿ ಹಾಗೂ ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು.  ರಾಮಣ್ಣ ಕಳ್ಳಿಮನಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತವನ್ನು ಸುಲೋಚನಾ ಐಹೊಳಿ ಮಾಡಿದರು. ಶರಣು ಸಮರ್ಪಣೆಯನ್ನು ಪ್ರಕಾಶ ಅಸುಂಡಿ ನೆರವೇರಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಬೂದಪ್ಪ ಅಂಗಡಿ ಹಾಗೂ ದತ್ತಿ ದಾನಿಗಳಾದ ಅರವಿಂದ ಕೂರಾ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಭೆಯಲ್ಲಿ ಬಸವದಳದ ಶರಣರು ಭಾಗಿಗಳಾಗಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *