ಪಾಂಡವಪುರ :
ಪ್ರತ್ಯೇಕ ಸ್ವತಂತ್ರ ಧರ್ಮದ ಮಾನ್ಯತೆ ಸೇರಿದಂತೆ ಲಿಂಗಾಯತ ಧರ್ಮಿಯರಿಗೆ ಸಿಗಬೇಕಿರುವ ಸೌಲಭ್ಯಗಳ ಹೋರಾಟವನ್ನು ಜಾಗತಿಕ ಲಿಂಗಾಯತ ಮಹಾಸಭಾ ನಿರಂತರವಾಗಿ ಮಾಡಲಿದೆ ಎಂದು ಕೇಂದ್ರ ಸಮಿತಿ ಉಪಾಧ್ಯಕ್ಷ ಮಹದೇವಪ್ಪ ಎಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಪಾಂಡವಪುರ ತಾಲ್ಲೂಕಿನ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕದ 26 ಜಿಲ್ಲೆಗಳಲ್ಲಿ ಸಂಘಟನೆ ಬಲಪಡಿಸಲಾಗಿದೆ. ಪಾಂಡವಪುರ ತಾಲೂಕಿನಲ್ಲಿ ಘಟಕವನ್ನು ಪ್ರಾರಂಭಿಸಲು ಎಲ್ಲಾ ಮುಖಂಡರೊಂದಿಗೆ ಚರ್ಚಿಸಿ ಜನಜಾಗೃತಿ ಮೂಡಿಸಲಾಗಿದೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭೆ ಯಾವುದೇ ರಾಜಕೀಯ ಸಂಘಟನೆ ಅಲ್ಲ. 2018ರಿಂದ ಲಿಂಗಾಯತ ಧರ್ಮವನ್ನು ಅಲ್ಪಸಂಖ್ಯಾತ ವರ್ಗದ ಅಡಿಯಲ್ಲಿ ಸೇರ್ಪಡೆಗೊಳಿಸುವ ಹೋರಾಟಕ್ಕೆ ಉದಯವಾದ ಸಂಘಟನೆ ಸಮಾಜದ ಅಸ್ಮಿತೆ, ಸರಕಾರದ ಸೌಲಭ್ಯಗಳ ಜಾಗೃತಿ, ಶೈಕ್ಷಣಿಕ ಅನುಕೂಲಗಳ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಸಭೆಯಲ್ಲಿ ಎಲ್ಲ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಪಾಂಡವಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಬಳೆಹತ್ತಿಗುಪ್ಪೆ ಬಿ.ಎಸ್. ಕೈಲಾಶಮೂರ್ತಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ಶಿವಕುಮಾರ ಮಾತನಾಡಿ, ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಸಂಘಟನೆಯ ಉದ್ದೇಶ ತಲುಪಿಸಬೇಕು. ರೈತಪರ ಧ್ವನಿಯಾಗಿ ಬಸವ ತತ್ವ, ಸಮಾಜದ ಜಾಗೃತಿ ಪ್ರಚಾರವನ್ನು ತೀವ್ರಗೊಳಿಸಬೇಕು ಎಂದರು.
ಪಾಂಡವಪುರದಲ್ಲಿಯೂ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು 21 ಮಂದಿ ಪದಾಧಿಕಾರಿಗಳ ತಂಡ ರಚಿಸಿ ಸಮುದಾಯದ ಪರ ರಚನಾತ್ಮಕ ಕೆಲಸ ಮಾಡಲು ರೂಪುರೇಷೆ ಸಿದ್ದಪಡಿಸಲಾಗಿದೆ ಎಂದರು.
ನೂತನ ಅಧ್ಯಕ್ಷ ಕೈಲಾಶಮೂರ್ತಿ ಕೃತಜ್ಞತೆ ಸಲ್ಲಿಸಿ ಇದುವರೆಗೂ ಅನೇಕ ಸಂಘಟನೆಗಳಲ್ಲಿ ಇದ್ದರೂ ಅವಕಾಶ ಲಭಿಸಿರಲಿಲ್ಲ. ಆದರೆ ನಮ್ಮ ಲಿಂಗಾಯತ ಸಮಾಜ ನನಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಿ ಸಮಾಜದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಅವರು ಮಾತನಾಡಿ, ಜಿಲೆಯಾದ್ಯಂತ ಜಾಗತಿಕ ಲಿಂಗಾಯತ ಮಹಾಸಭಾ ಬಲಪಡಿಸುವಲ್ಲಿ ಜಿಲ್ಲಾಧ್ಯಕ್ಷ ಕಾಯಕಯೋಗಿ ಶಿವಕುಮಾರ ಅವರ ಪಾತ್ರ ಮಹತ್ತರವಾಗಿದೆ. ಮಂಡ್ಯದಲ್ಲಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನ ನಿರ್ಮಾಣ ಮಾಡಿ ಸ್ವಾಮೀಜಿಯವರ ಕಂಚಿನ ಪ್ರತಿಮೆಯ ಸ್ಥಾಪಿಸಿ ಇತಿಹಾಸ ನಿರ್ಮಾಣ ಮಾಡಿದ್ದಾರೆ.
ಬಸವಣ್ಣನವರ ‘ಇವನಾರವ ಇವನಾರವ ಎಂದೆನಿಸದೆ, ಇವ ನಮ್ಮವ ಇವ ನಮ್ಮವ ಎಂಬ ತತ್ವದಂತೆ ಎಲ್ಲಾ ಸಮುದಾಯವನ್ನು ಕಟ್ಟಿಕೊಂಡು ಶರಣ ಧರ್ಮದ ನೈಜ ಪರಿಪಾಲಕರಾಗಿ ಸಮಾಜ ಕಟ್ಟುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನೂತನ ಅಧ್ಯಕ್ಷರಿಗೆ ವಿಶ್ವಗುರು ಬಸವಣ್ಣನವರ ಬಾವುಟ ಹಾಗೂ ಸಿದ್ದಗಂಗಾ ಶ್ರೀಗಳ ಭಾವಚಿತ್ರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಶಿವರುದ್ರಸ್ವಾಮಿ, ಶಿವಲಿಂಗಪ್ಪ, ತೇಜಸ್, ಎಮ್. ಬೆಟ್ಟಹಳ್ಳಿ ಜಗದೀಶ, ಮಹಾದೇವಪ್ಪ, ಬಳೆತ್ತಿ ಕುಪ್ಪೆ ಸಿದ್ದರಾಜು, ಶಂಭುಲಿಂಗಪ್ಪ, ಲೋಕೇಶ, ಅಶೋಕ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
