ಬೆಂಗಳೂರು
‘ಲಿಂಗಾಯತ ಸಮುದಾಯದ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಈ ವಿಚಾರವನ್ನು ಆ ಸಮಾಜಕ್ಕೆ ಹಾಗೂ ಜನರಿಗೆ ಬಿಡುತ್ತೇವೆ. ಆ ಬಗ್ಗೆ ನಾವು ಚಿಂತಿಸುವುದಿಲ್ಲ,ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಧರ್ಮದ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಭಿನ್ನಮತವಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
“ನಾವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಮಾತ್ರ ಲಿಂಗಾಯತ ಸಮುದಾಯದವರ ಗುರುತು ಕೇಳುತ್ತಿದ್ದೇವೆ. ಅದರ ಹೊರತಾಗಿ ನಮ್ಮ ಮುಂದೆ ಬೇರೆ ಯಾವುದೇ ಆಲೋಚನೆಗಳಿಲ್ಲ, ನಾವು ಯಾರನ್ನೂ ವಿಭಜಿಸುವುದಿಲ್ಲ,” ಎಂದೂ ಅವರು ಸ್ಪಷ್ಟಪಡಿಸಿದರು.
ಈ ಮುಂಚೆ ಡಿ.ಕೆ. ಶಿವಕುಮಾರ್ ಲಿಂಗಾಯತ ಧರ್ಮದ ಹೋರಾಟವನ್ನು ಬೆಂಬಲಿಸಿದ ಸಿದ್ದರಾಮಯ್ಯ ಸರಕಾರದ ನಿಲುವನ್ನು ಟೀಕಿಸಿದ್ದರು.
2018ರ ಚುನಾವಣೆಯ ಫಲಿತಾಂಶದ ಬಂದ ನಂತರ ಲಕ್ಷ್ಮೇಶ್ವರದಲ್ಲಿ ನಡೆದ ರಂಭಾಪುರಿ ಶ್ರೀಗಳ “ದಸರಾ ದರ್ಬಾರ್”ನಲ್ಲಿ ಶಿವಕುಮಾರ್, ಭಾಗವಹಿಸಿದ್ದರು.
ಅಲ್ಲಿ ಲಿಂಗಾಯತ ಧರ್ಮದ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ದೊಡ್ಡ ಅಪರಾಧ ಮಾಡಿದೆ, ಸರ್ಕಾರದ ತಪ್ಪನ್ನು ಕ್ಷಮಿಸುವಂತೆ ಶಿವಕುಮಾರ್ ಜನಸಮೂಹಕ್ಕೆ ಮನವಿ ಮಾಡಿಕೊಂಡಿದ್ದರು.
ಶಿವಕುಮಾರ್ ಅವರ ಹೇಳಿಕೆಗೆ ಸಚಿವ ಎಂ ಬಿ ಪಾಟೀಲ್ ಅವರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಲಕ್ಷ್ಮೇಶ್ವರದಲ್ಲಿ ಶಿವಕುಮಾರ್ ಅವರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಪಾಟೀಲ್ ಲಿಂಗಾಯತ ಧರ್ಮದ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದರು.
“ಒಕ್ಕಲಿಗ ಹೃದಯಭಾಗದಲ್ಲಿ ಕಾಂಗ್ರೆಸ್‌ಗೆ ಮತಗಳು ಏಕೆ ಸಿಗಲಿಲ್ಲ ಎಂಬುದರ ಕುರಿತು ಶಿವಕುಮಾರ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಬೆಂಬಲ ಗಳಿಸಿದೆ ಎಂದು ಅವರು ವಿಶ್ಲೇಷಿಸಬೇಕು,” ಎಂದು ಪಾಟೀಲ್ ಹೇಳಿದ್ದರು.