ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ: ಸುಶೀಲಕುಮಾರ ಶಿಂಧೆ

ನಾನು ಶರಣ ಕಕ್ಕಯ್ಯನ ಸಮುದಾಯದವನು, ಲಿಂಗಾಯತ ಬಿಟ್ಟು ಎಲ್ಲಿಗೆ ಹೋಗಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ

ಕೂಡಲಸಂಗಮ :

ನಾನು ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎನ್ನುವವರೊಂದಿಗೆ ಇದ್ದೇನೆ. ನಾನು ಕಕ್ಕಯ್ಯ (ಶರಣ ಕಕ್ಕಯ್ಯ ಸಮುದಾಯ) ಆಗಿದ್ದು, ಲಿಂಗಾಯತ ಬಿಟ್ಟು ಎಲ್ಲಿಗೆ ಹೋಗಲಿ? ಈ ಮೊದಲು ಲಿಂಗ, ವಿಭೂತಿ ಧರಿಸುತ್ತಿದ್ದೆವು. ಈಗ ಅದು ಮಾಯವಾಗಿದೆ. ಮಾನವೀಯತೆ, ಸಮಾನತೆ ಸಾರುವ ಧರ್ಮದ ಅವಶ್ಯಕತೆ ಇದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ ಹೇಳಿದರು.

ಲಿಂಗಾಯತ ಧರ್ಮ ಸಂಸ್ಥಾಪನಾ ದಿನ ಅಂಗವಾಗಿ ಕೂಡಲಸಂಗಮದಲ್ಲಿ ನಡೆದಿರುವ ೩೯ನೇ ಶರಣ ಮೇಳವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥಗಳನ್ನು ಅಳಿಸಿ ಹಾಕಲು ಬಸವಣ್ಣನವರ ತತ್ವಗಳ ಪ್ರತಿಪಾದನೆಗೆ ಹೆಚ್ಚಿನ ಒತ್ತು ಸಿಗಬೇಕಿದೆ ಎಂದರು.

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂದು ದೇಶ ರಚನೆಯಾಗಿಲ್ಲ. ಬಸವೇಶ್ವರರ ಮಾರ್ಗದಲ್ಲಿ ಎಲ್ಲರೂ ಒಂದಾಗಿ ಸಾಗಬೇಕಿದೆ. ನಾನು ಸೊಲ್ಲಾಪುರದ ಸಿದ್ಧರಾಮೇಶ್ವರ ಕ್ಷೇತ್ರಕ್ಕೆ ಹೋಗುತ್ತೇನೆ. ಇಂದು ಬಸವಣ್ಣನವರ ಐಕ್ಯಸ್ಥಳಕ್ಕೆ ಬಂದು ಆಶೀರ್ವಾದ ಪಡೆದಿರುವುದು ಸಂತಸ ತಂದಿದೆ. ನನ್ನ ಬಹು ವರ್ಷಗಳ ಕನಸು ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರ ನಡೆಸಬಾರದು. ದೇಶದಲ್ಲಿರುವ ಎಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಇರುವ ಪ್ರತಿಯೊಬ್ಬರು ದೇಶದ ಪುತ್ರರು. ೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಅಂತರಜಾತಿ ವಿವಾಹ ಮಾಡುವ ಮೂಲಕ ಎಲ್ಲರೂ ಒಂದೇ ಎಂದು ಸಾರಿದ್ದರು. ಅವರ ಕನಸು ನನಸು ಮಾಡೋಣ ಎಂದರು.

ಇದೇ ವೇಳೆ ಲಿಂಗೈಕ್ಯ ಜಗದ್ಗುರು ಮಾತೆ ಮಹಾದೇವಿ ಅವರ ಸ್ಮರಣಾರ್ಥ ಬಸವಾತ್ಮಜೆ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಗೆ ನೀಡಲಾಯಿತು. ೫೦ ಸಾವಿರ ರೂ.ಗಳ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ರಾಜ್ಯಮಟ್ಟದ ಶರಣ ಕಾಯಕರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹಾಗೂ ಶರಣ ಜ್ಞಾನರತ್ನ ಪ್ರಶಸ್ತಿಯನ್ನು ಪತ್ರಕರ್ತ ರವಿ ಮೂಕಿ ಅವರಿಗೆ ನೀಡಿ ಗೌರವಿಸಲಾಯಿತು.

ಬಸವ ಧರ್ಮ ಪೀಠದ ಜಗದ್ಗುರು ಮಾತೆ ಗಂಗಾದೇವಿ ಸಾನಿಧ್ಯ ವಹಿಸಿದ್ದರು. ಸಚಿವ ಆರ್.ಬಿ. ತಿಮ್ಮಾಪುರ, ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಸಾಹಿತಿಗಳು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *