ಹುಬ್ಬಳ್ಳಿ
ಲಿಂಗಾಯತ ಒಳಪಂಗಡಗಳ ಒಕ್ಕೂಟ ಸ್ಥಾಪಿಸಿರುವ ‘ಲಿಂಗಾಯತ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಹೋರಾಟ ವೇದಿಕೆ’ಯ ಉದ್ಘಾಟನೆ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಶನಿವಾರ ನೆರವೇರಿತು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಪೂಜ್ಯ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ‘12ನೇ ಶತಮಾನದಲ್ಲಿ ಹುಟ್ಟಿದ ಲಿಂಗಾಯತ ಧರ್ಮಕ್ಕೆ ಈಗ ಕಾನೂನು ಮಾನ್ಯತೆ ಸಿಗಬೇಕಿದೆ. ಲಿಂಗಾಯತ ಹಿಂದೂ ಧರ್ಮದ ವ್ಯಾಪ್ತಿಗೆ ಬರುವುದಿಲ್ಲ,’ ಎಂದು ಹೇಳಿದರು.

‘ಜಾತಿ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಉಪ ಪಂಗಡ ನಮೂದಿಸಬೇಕು. ಹಿಂದೂ ಲಿಂಗಾಯತ, ವೀರಶೈವ ಲಿಂಗಾಯತ ಎಂದು ಬರೆಸಬಾರದು. ನಮ್ಮ ಧರ್ಮ ಲಿಂಗಾಯತ, ಧರ್ಮಗುರು ಬಸವಣ್ಣ, ಲಾಂಛನ ಇಷ್ಟಲಿಂಗ, ಧರ್ಮ ನೀತಿ ಸಂಹಿತೆ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ. ಸಮಾಜದ ಹಿರಿಯರು ಇದನ್ನು ಯುವಜನರಿಗೆ ತಿಳಿಸಬೇಕು’ ಎಂದರು.

‘ಲಿಂಗಾಯತ ಎಂದು ಬರೆಸಿದರೆ ಸೌಲಭ್ಯಗಳು ಕಡಿಮೆಯಾಗಲಿವೆ ಎಂಬ ತಪ್ಪು ಕಲ್ಪನೆ ವಿರುದ್ಧ ಜಾಗೃತಿ ಮೂಡಿಸಲು ಸೆಪ್ಟೆಂಬರ್ 1ರಿಂದ ಬಸವ ಸಂಸ್ಕೃತಿ ಅಭಿಯಾನ ಆರಂಭಿಸುತ್ತೇವೆ. ಬೆಂಗಳೂರಿನಲ್ಲಿ ಅಕ್ಟೊಬರ್ 5ರಂದು ಅಭಿಯಾನ ಸಮಾರೋಪವಾಗಲಿದೆ’ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದಿದ್ದ ಪ್ರೊಫೆಸರ್ ಸಂಜಯ್ ಮಾಕಲ್ ಕಾನೂನು ಬದ್ಧವಾಗಿ ಸ್ವತಂತ್ರ ಸ್ಥಾನ ಪಡೆಯಲು ಲಿಂಗಾಯತ ಧರ್ಮ ಎಲ್ಲಾ ರೀತಿಯಲ್ಲೂ ಅರ್ಹವಾಗಿದೆ. ಆದರೆ ಅದಕ್ಕಾಗಿ ನಾವೆಲ್ಲ ಸಂಘಟಿತವಾಗಿ ಮತ್ತು ಕಾನೂನು ಬದ್ಧವಾಗಿ ಹೋರಾಟ ಮಾಡುವ ಅವಶ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಲ್ಲರೂ ಲಿಂಗಾಯತ ಎಂದು ಮಾತ್ರ ಬರಿಸಬೇಕು, ಜಾತಿಯಲ್ಲಿ ಉಪಪಂಗಡ ಬರೆಸಬೇಕು ಎನ್ನುವ ಠರಾವು ಪಾಸ್ ಮಾಡಲಾಯಿತು. ವಿಜಯಕುಮಾರ್ ಎಂ ಶೀಲವಂತರ್, ಅಧ್ಯಕ್ಷರು ರಾಜ್ಯ ಉಚ್ಚ ನ್ಯಾಯಾಲಯ ವಕೀಲರ ಸಂಘ, ಇವರಿಂದ ಈ ವಿಷಯ ಮಂಡನೆಯಾಗಿತ್ತು ಅದನ್ನು ಅಧ್ಯಕ್ಷರು ಚಿಂತಾಮಣಿ ಸಿಂದಗಿ ಅವರು ಅನುಮೋದಿಸಿದರು.

ಪೂಜ್ಯ ವಿರತೀಶನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಭಾಷಣ ಚಿಂತಾಮಣಿ ಸಿಂದಗಿ ಅವರು ಮಾಡಿದರು. ಮಹಾನಗರ ಸಭೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು. ಪ್ರಾಸ್ತಾವಿಕ ಭಾಷಣ ಡಿ ಸಿ ರಂಗಾರೆಡ್ಡಿ ಅವರಿಂದ, ಸ್ವಾಗತ ರವಿ ಕೊಡು ಒಕ್ಕಲಿಗ
ಅವರಿಂದ, ವಂದನಾರ್ಪಣೆ ಜಿ ಜಿ ದೇವನಗೌಡ್ರು ಅವರಿಂದ, ನಿರೂಪಣೆ ಡಾ. ಶಿವಯೋಗಪ್ಪ ಯಮ್ಮಿ ಅವರಿಂದ ವಚನಗಾಯನ ವೀಣಾ ಹಾಗೂ ಸಂಗಡಿಗರಿಂದ ನಡೆಯಿತು.

ಪ್ರತಿಜ್ಞಾವಿಧಿಯನ್ನು ಡಾಕ್ಟರ್ ಶಿವಯೋಗಪ್ಪ ಯಮ್ಮಿ ಬೋಧಿಸಿದರು,
ಪ್ರತಿಜ್ಞಾ ವಿಧಿ
ಒಬ್ಬ ಲಿಂಗಾಯತನಾಗಿ ನಾನು ನನ್ನ ಧರ್ಮಕ್ಕೆ ವಿಧೇಯನಾಗಿರುತ್ತೇನೆ.
ನಾನು ಲಿಂಗಾಯತ ಧರ್ಮದ ಎಲ್ಲ ಉಪವರ್ಗಗಳ ಕುರಿತು ಹೆಮ್ಮೆಯಿಂದಿರುತ್ತೇನೆ.
ನಮ್ಮ ಧರ್ಮಗುರು ಬಸವಣ್ಣ, ಧರ್ಮಗ್ರಂಥ ವಚನ ಸಾಹಿತ್ಯವೆಂದು ಒಪ್ಪಿಕೊಂಡಿದ್ದೇನೆ.
ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲಗಳು ನನ್ನ ಧರ್ಮ ಸಿದ್ಧಾಂತಗಳಾಗಿದ್ದು ಅವನ್ನು ಶ್ರದ್ಧೆಯಿಂದ ಪಾಲಿಸುತ್ತೇನೆ.
ನಮ್ಮ ಧರ್ಮ ತತ್ವದಂತೆ ಸತ್ಯ ಶುದ್ಧ ಕಾಯಕ ಮಾಡುತ್ತೇನೆ ಹಾಗೂ ನನ್ನ ಕೈಲಾದಷ್ಟು ದಾಸೋಹ ಸೇವೆ ಮಾಡುತ್ತೇನೆ.
ನಾನು ಕಲ್ಯಾಣದ ಕ್ರಾಂತಿಯ ಕಿಚ್ಚು, ಶರಣರ ಕಣ್ಣೀರು. ವಚನ ಸುಟ್ಟವರೊಂದಿಗೆ ಗುರುತಿಸಿಕೊಳ್ಳುವುದಿಲ್ಲ.
ನಾನು ಭಾರತ ದೇಶದ ಬಹಳಷ್ಟು ಸಂಪ್ರದಾಯ, ಪರಂಪರೆ, ನಂಬಿಕೆಗಳ ವಿರೋಧಿಯಾಗಿದ್ದರೂ, ಪ್ರತ್ಯೇಕತಾವಾದಿಯಾಗದೆ ಭಾರತದ ನಾಗರಿಕನಾಗಿರುತ್ತೇನೆ.
ನನ್ನ ಧರ್ಮ ತತ್ವಗಳಾದ ಸಮಾನತೆ, ಸಹಬಾಳ್ವೆ, ಬಂಧುತ್ವ ವಿಚಾರಗಳ ಕುರಿತು ಗೌರವ, ಶ್ರದ್ಧೆ ಹೊಂದಿದ್ದು ಅವುಗಳನ್ನು ಎಲ್ಲೆಡೆ ಪಾಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
🤔💐