ನಂಜನಗೂಡು:
ತಾಲ್ಲೂಕಿನ ಕುಸುವಿನಹಳ್ಳಿ ಗ್ರಾಮದ ಗುರುಪಾದಪ್ಪ ಮತ್ತು ಮೀನಾಕ್ಷಿ ಕುಟುಂಬ ವರ್ಗದವರು ತಾವು ಕಟ್ಟಿಸಿದ ಹೊಸಮನೆಯ ಗುರುಪ್ರವೇಶವನ್ನು ಲಿಂಗಾಯತ ಪರಂಪರೆಯಂತೆ ನಡೆಸಿದರು.
ವಿಶ್ವಬಸವಸೇನೆ ನೇತೃತ್ವದಲ್ಲಿ ತುಂಬ ಸರಳವಾಗಿ, ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮ ಗುಂಡ್ಲುಪೇಟೆ ತಾಲ್ಲೂಕಿನ ಮೂಡುಗೂರು ಮಠದ ಪೂಜ್ಯ ಇಮ್ಮಡಿ ಉದ್ಧಾನಸ್ವಾಮಿಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮದೊಂದಿಗೆ ನೇರವೇರಿತು. ಸ್ವಾಮಿಗಳು ಇಷ್ಟಲಿಂಗ ಶಿವಯೋಗವನ್ನು ಮಾಡಿ ಮತ್ತು ಮನೆಯವರಿಗೆಲ್ಲಾ ಇಷ್ಟಲಿಂಗ ಶಿವಯೋಗ ಮಾಡಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಬಂಧಿಕರು, ಗ್ರಾಮದ ಮುಖಂಡರು, ಬಸವ ಭಕ್ತರೊಡನೆ ಅನುಭಾವ ಹಂಚಿಕೊಂಡರು. ನೆರೆದಿದ್ದವರು ಕೇಳಿದ ಅನೇಕ ಪ್ರಶ್ನೆಗಳಿಗೆ ಸ್ವಾಮೀಜಿ ಉತ್ತರಿಸಿದರು.
ಶರಣರ ವಚನಗಳಲ್ಲಿನ ಸತ್ಯಶುದ್ಧ ಕಾಯಕ, ದಾಸೋಹ ಸಂದೇಶ ತಿಳಿಸಿದರು. ಲಿಂಗಾಯತ ಧರ್ಮಿಯರು ಇಷ್ಟಲಿಂಗ ಧಾರಣೆಯನ್ನು ಕಡ್ಡಾಯವಾಗಿ ಮಾಡಬೇಕೆಂದರು.
ಮನದ ಮೈಲಿಗೆಯನ್ನ ತೊಳೆಯಲು ಶರಣರು ವಚನಗಳು, ವಿಭೂತಿ, ರುದ್ರಾಕ್ಷಿ, ಇಷ್ಟಲಿಂಗವನ್ನು ನಮಗೆ ನೀಡಿದ್ದಾರೆ. ಸಾಮಾಜಿಕ, ಆಧ್ಯಾತ್ಮಿಕ, ಸಾಂಸಾರಿಕ ಅಭಿವೃದ್ಧಿಗೆ ಶರಣರ ಚಿಂತನೆ ಉತ್ತಮ ಮಾರ್ಗವಾಗಿದೆ ಎಂದರು.

ನಂತರ ಶರಣ ಚಿಂತಕರಾದ ಹಲ್ಲರೆ ಶಿವಬುದ್ದಿಯವರು ಮಾತನಾಡಿ, ಬಸವಣ್ಣನವರ ಚಿಂತನೆಯು ಬದುಕಿನ ಸಂತೋಷಕ್ಕೆ ತುಂಬ ಸಹಕಾರಿಯಾಗಿದೆ. ದೇವನೂರಿನ ಗುರುಮಲ್ಲೇಶ್ವರರು ಹೊಸ ಮನೆ ಕಾರ್ಯಕ್ರಮವನ್ನು ಮಾಡುತ್ತಿದ್ದ ಸರಳ ಕ್ರಮದ ಬಗ್ಗೆ ತಿಳಿಸಿದರು. ಶ್ರೀ ಗುರುಮಲ್ಲೇಶ್ವರರು ಗಜವೀರಪ್ಪನ ಗರ್ವಮುರಿದು ಶಿವದೀಕ್ಷೆ ನೀಡಿ ಸಪ್ಪೆ ವೀರಪ್ಪನಾಗಿ ಮಾಡಿದರು ಎಂದು ತಿಳಿಸಿದರು.
ಆದ್ದರಿಂದ ಗುರುಪ್ರವೇಶ ಎಂದರೆ ಗುರುಗಳನ್ನ ಕರೆದು ಜ್ಞಾನ ಪಡೆದು ಉತ್ತಮ ಬದುಕು ನಡೆಸುವುದಾಗಿದೆ. ಆದ್ದರಿಂದ ಇಂತಹ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳ ಮುಖಾಂತರ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಮನೆಯ ಕುಟುಂಬ ವರ್ಗದವರು, ಸಂಬಂಧಿಕರು, ಬಸವಭಕ್ತರು ಗ್ರಾಮದ ಬೀದಿಗಳ ಮುಖಾಂತರ ಬಸವಧ್ವಜ, ಶರಣರ ಭಾವಚಿತ್ರಗಳು, ವಚನ ಸಂಪುಟಗಳನ್ನ ತಲೆಮೇಲೆ ಹೊತ್ತು, ವಚನಗಳನ್ನು ಹೇಳುತ್ತಾ, ಶರಣರ ಹೆಸರಿಗೆ ಶರಣು ಶರಣಾರ್ಥಿ ಹೇಳುತ್ತಾ, ಶರಣರಿಗೆ ಜಯಕಾರ ಘೋಷಣೆ ಹಾಕುತ್ತಾ ಗ್ರಾಮದಲ್ಲಿ ಮೆರವಣಿಗೆ ಮಾಡಿ ಬಂದರು. ನಂತರ ನೂತನ ಮನೆಯ ಮುಂದೆ ಷಟ್ಸ್ಥಲ ಧ್ವಜಾರೋಹಣವನ್ನು ಮನೆಯ ಗುರುಗಳೊಡಣೆ ನೇರವೇರಿಸಿ ಶರಣರ ಕುರಿತು ಧ್ವಜಗೀತೆ ಹಾಡಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಕಸುವಿನಹಳ್ಳಿ ಗ್ರಾಮದ ಬಸವ ಭಕ್ತರಾದ ಗುರುಸ್ವಾಮಿಗಳು, ವೀರಪ್ಪಣ್ಣ, ಸಿದ್ದಗಂಗಾ ಪ್ರಿಂಟರ್ಸ್ ಮಹದೇವಸ್ವಾಮಿ ಅವರುಗಳು ಕೈಗೂಡಿಸಿದರು.

ವಿಶ್ವ ಬಸವಸೇನೆಯ ಅದ್ಯಕ್ಷರಾದ ಬಸವ ಯೋಗೇಶ್ ಮತ್ತು ಹಂಗಳಪುರ ಸುರೇಶಣ್ಣ, ಕಲ್ಪುರ ಮಹೇಶ್, ಹೊರಳವಾಡಿ ಮಹೇಶ್, ಮಡಹಳ್ಳಿ ಸಿ. ಮಹೇಶ್, ಆನಂದ, ಸಂಘಟನೆಯ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಚನ್ನಪ್ಪಣ್ಣ, ಅಶೋಕ್ ಮುದ್ದಹಳ್ಳಿ, ದೊಡ್ಡಹುಂಡಿಯ ಕುಮಾರಣ್ಣ, ಶಿಕ್ಷಕರಾದ ನಂದೀಶ್ವರ, ಹೆಮ್ಮಿಗೆ ಗಂಗಾಧರಪ್ಪ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಜರಿದ್ದರು.
ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರೊಬ್ಬರು ಸಂತಸಗೊಂಡು ಇಂಥ ಸರಳ, ಅರ್ಥಪೂರ್ಣ ಕಾರ್ಯಕ್ರಮವನ್ನು ಮುಂದಿನ ವರ್ಷ ಇದೇ ರೀತಿ ನಾವೂ ನಡೆಸುತ್ತೇವೆ ಎಂದು ಹೇಳಿದರು.

ಒಂದು ಒಳ್ಳೆಯ ರೂಢಿ ಪ್ರಾರಂಭಮಾಡಿದಕ್ಕೆ ತಮಗೆಲ್ಲ ಅಭಿನಂದನೆ. ಬಸವ ಪ್ರಜ್ಞೆ ಮೂಡಿಸಿ ಸರಳ ಭಾಷೆಎಲ್ಲಿ, ಸರಳ ರೀತಿಯಲ್ಲಿ ಗುರುಪ್ರವೇಶ. ಚೈತನ್ಯ ಗುರು, ಇತ್ಯಾದಿ ಎಲ್ಲ ಚಟುವಟಿಕೆ ನಡೆಸಿದ್ದಕ್ಕೆ ಹೃದಯತುಂಬಿ ಅಭಿನಂದನೆಗಳು. ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.
ಬಸವಯೋಗೀಶ್ ಮತ್ತು ಇನ್ನುಳಿದ ಶರಣರ ಈ ಕಾಯಕಕ್ಕೆ ಶರಣಾರ್ಥಿಗಳು.