ಲಿಂಗಾಯತ ಜಾತಿ ಅಲ್ಲ, ಅದೊಂದು ತತ್ವ, ಸಿದ್ಧಾಂತ, ಧರ್ಮ: ಬಸವ ಕುಮಾರ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಲಿಂಗಾಯತವನ್ನು ಜಾತಿಗೆ ಸೀಮಿತ ಮಾಡುವುದು ಅಪವಾದ

ಚಿತ್ರದುರ್ಗ

“ಲಿಂಗಾಯತ ಒಂದು ಜಾತಿ ಅಲ್ಲ. ಅದೊಂದು ಶರಣತತ್ವ. ಲಿಂಗಾಯತ ಜಾತಿಯಾಚೆಗಿನ ಸಿದ್ಧಾಂತ ಮತ್ತು ಅದೊಂದು ಧರ್ಮ. ಲಿಂಗಾಯತ ಪರಂಪರೆಯನ್ನು ಜಾತಿಗೆ ಸೀಮಿತ ಅಥವಾ ಸಿಲುಕಿಸುವ ಪ್ರಯತ್ನ ಮಾಡಿದರೆ ಅದು ಅಪವಾದವಾದೀತು.

ಲಿಂಗಾಯತ ತತ್ವವನ್ನು ಅನುಸರಿಸಿದಾಗ ಅದು ಧರ್ಮವಾಗುತ್ತದೆ. ಲಿಂಗಾಯತವನ್ನು ಜಾತಿಯಾಗಿ ಪ್ರತಿಬಿಂಬಿಸುವುದಕ್ಕಿಂತಲೂ ಧರ್ಮವಾಗಿ ಮುಂಚೂಣಿಗೆ ತರಬೇಕಿದೆ. ಈ ಗುರಿ ಈಡೇರಲು ಈಗ ಅಭಿಯಾನ ಶುರವಾಗಿದೆ,” ಎಂದು ಮುರುಘಾ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಪೂಜ್ಯ ಡಾ. ಬಸವಕುಮಾರ ಸ್ವಾಮೀಜಿ ಗುರುವಾರ ಹೇಳಿದರು.

ಅವರು ಇಲ್ಲಿ ನಡೆದ ಶಿವಶರಣ ಮಡಿವಾಳ ಮಾಚಿದೇವರ ಹಾಗೂ ಚಿತ್ರದುರ್ಗ ಬೃಹನ್ಮಠದ ೧೭ನೇ ಗುರುಗಳಾದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೧೫೧ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

“ಕೆಲ ಸಮುದಾಯಗಳು ಮೀಸಲಾತಿ ದೃಷ್ಟಿಯಿಂದ ಲಿಂಗಾಯತ ಅನ್ನುವ ಶಬ್ದ ಬಿಟ್ಟಿರಬಹುದು. ಆದರೆ ಇಡೀ ವಿಶ್ವದಲ್ಲಿ ನೂರಾರು ಕಾಯಕ ಸಮಾಜಗಳನ್ನು ಎತ್ತಿಕೊಂಡು ಬೆಳೆದ ಸಂಸ್ಕೃತಿ ಎಂದರೆ ಅದು ಲಿಂಗಾಯತ ಸಂಸ್ಕೃತಿ. ನಮ್ಮ ಮುರುಘೇಂದ್ರ ಸ್ವಾಮಿಗಳು ಹೇಳಿದಂತೆ ಕಾಯಕ ಸಮಾಜಗಳೆಲ್ಲ ಲಿಂಗಾಯತ ಪರಂಪರೆಯವರು ಎಂದು ಹೇಳಿದ್ದು.

ಮೀಸಲಾತಿಯಾಚೆಗಿನ ಸಮಸಮಾಜ ನಿರ್ಮಾಣವಾಗಬೇಕಿದೆ. ಸರ್ವರಿಗೂ ಸಮಬಾಳು ಸಮಪಾಲು, ನಮ್ಮ ನಡುವಿನ ಏರುಪೇರು, ತಾರತಮ್ಯ ಇರುವುದರಿಂದ ಮೀಸಲಾತಿಯ ಅಗತ್ಯವಿದೆ. ಎಲ್ಲರೂ ಸಮನಾಗಿ ಬೆಳೆಯುವ ತನಕ ಅದರ ಅಗತ್ಯವಿದೆ. ಮುಂಬರುವ ಶರಣಸಂಸ್ಕೃತಿ ಉತ್ಸವಕ್ಕೆ ಎಲ್ಲಾ ಸಮಾಜದವರು ಬಂದು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು,” ಎಂದು ಶ್ರೀಗಳು ಕೋರಿಕೊಂಡರು.

ಕಾಯಕ ಸಮಾಜಗಳೆಲ್ಲ ಲಿಂಗಾಯತ ಪರಂಪರೆಯವರು

ಶಿವಶರಣ ಮಡಿವಾಳ ಮಾಚಿದೇವರ ಬಗ್ಗೆ ಮಾತನಾಡುತ್ತಾ ಬಸವಾದಿ ಶರಣ ಪರಂಪರೆಯಲ್ಲಿ ಭೌತಿಕತೆಯ ಜತೆಗೆ ಬೌದ್ಧಿಕ ಬಟ್ಟೆಯ (ದಾರಿ) ತೋರಿದ ಮಹಾಚೇತನ ಮಾಚಿದೇವರು.

ಅದೇ ರೀತಿ ಶೂನ್ಯಪೀಠದ ಮುರುಘಾ ಗುರುಪರಂಪರೆಯಲ್ಲಿ ತ್ರಿವಿಧ ದಾಸೋಹತತ್ವ ಆಚರಿಸುವ ಮೂಲಕ ನಾಡಿಗೆ ಬೆಳಕಾಗಿ ಹೋದವರು ಜಯದೇವರು. ಅವರ ೧೫೧ನೇ ಜಯಂತಿ ಸುಸಂದರ್ಭಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಪರಂಪರೆಯ ಜತೆಗೆ ರಾಷ್ಟಪ್ರೇಮವನ್ನು ಇಟ್ಟುಕೊಂಡಿದ್ದ ಜಯದೇವ ಶ್ರೀಗಳು ಮತ್ತು ಮಠದ ಪರಂಪರೆ ಪ್ರಾಚೀನತೆ, ಭದ್ರತೆಯನ್ನು ಅಭಿಮಾನದಿಂದ ರಾಮಪ್ಪ ಅವರು ಸ್ಮರಿಸಿಕೊಂಡರು.

ಬಾಲಗಂಗಾಧರ ತಿಲಕರು, ಮಹಾತ್ಮಗಾಂಧೀಜಿ, ಮುಮ್ಮಡಿ ಕೃಷ್ಣರಾಜ ಒಡೆಯರು ಹಾಗೆಯೇ ವಚನಪಿತಾಮಹ ಫ.ಗು.ಹಳಕಟ್ಟಿ, ಜಿ.ಎಸ್. ಶಿವರುದ್ರಪ್ಪ, ಎಸ್.ನಿಜಲಿಂಗಪ್ಪ ಮತ್ತಿತರ ಅವರ ಕಾಲದ ಮಹಾನುಭಾವರೊಂದಿಗೆ ನಿಕಟ ಸಂಬಂಧ ಹೊಂದಿ ಸ್ವಾತಂತ್ರ‍್ಯಪೂರ್ವ ನಂತರದ ವಿದ್ಯಮಾನಕ್ಕೆ ಜಯದೇವ ಜಗದ್ಗುರುಗಳು ನಿದರ್ಶನರಾಗಿದ್ದರು.

ಒಂದು ಮಠದ ಆಶ್ರಯದಲ್ಲಿದ್ದುಕೊಂಡು ಬೆಳೆದ ವಿದ್ಯಾರ್ಥಿ ಮುಂದೆ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಹಾಗೆಯೇ ರಾಷ್ಟ್ರಕವಿಯಾಗುತ್ತಾರೆ. ಹೀಗೆ ನಾನಾಕ್ಷೇತ್ರಗಳಲ್ಲಿ ಉನ್ನತಸ್ಥಾನ ಪಡೆಯುತ್ತಾರೆಂದರೆ ಗುರುಗಳ ದೂರದೃಷ್ಟಿ ಎಷ್ಟಿತ್ತೆಂಬುದು ಗೊತ್ತಾಗುತ್ತದೆ.

125 ವರ್ಷಗಳ ಹಿಂದೆ ಅವರು ಕಟ್ಟಿದ ವಿದ್ಯಾರ್ಥಿನಿಲಯದ ಕಟ್ಟಡಗಳು ಈಗಲೂ ತನ್ನ ಸುಸ್ಥಿರತೆಯನ್ನು ಕಾಪಾಡಿಕೊಂಡು ಈಗಲೂ ನಮ್ಮ ಮುಂದಿವೆ. ಅವರು ಯಾವುದೇ ಬೀಳುವ ಹಾಳಾಗುವ ಕಟ್ಟಡ ಅಥವಾ ಕೆಲಸಗಳನ್ನು ನಿರ್ವಹಿಸಿಲ್ಲ. ಶಾಶ್ವತವಾದ ಯೋಜನೆಗಳೇ ಆಗಿವೆ. ಅವರ ತನು ಮನ ಭಾವ ಶುದ್ಧವಾದ ತ್ರಿಕಾಲ ಪೂಜಾನುಷ್ಠಾನದ ಫಲವಾಗಿ ಅವರು ಅಂದುಕೊಂಡ ಸಂಕಲ್ಪಗಳು ಸಹಜವಾಗಿ ಈಡೇರುತ್ತಿದ್ದವು, ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರದುರ್ಗ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಿ.ರಾಮಪ್ಪ ಮಾತನಾಡಿದರು.

ನಮ್ಮ ವೃತ್ತಿಯ ಮಾಚಿದೇವರು ಬಸವಣ್ಣನವರ ಮತ್ತು ಶರಣರ ವಿಚಾರತತ್ವಕ್ಕೆ ಸಂಬಂಧಿಸಿದಂತೆ ವೀರ ಧೀರ ಶೂರನಾಗಿ ಚ್ಯುತಿ ಬಂದಾಗ ಹೋರಾಡುವ ಪ್ರವೃತ್ತಿ ಅವರಲ್ಲಿತ್ತು. ಶರಣರ ಬಟ್ಟೆಯ ಮಡಿ ಮಾಡಿಕೊಡುವುದರ ಜತೆಗೆ ಮನದ ಮಲಿನವನ್ನು ತೆಗೆಯುವ ಕಾಯಕ ಮಾಡುತ್ತಿದ್ದರು.

ಅಲಕ್ಷಿತ, ಶೋಷಿತ, ಅಲ್ಪಸಂಖ್ಯಾತ ಸಮುದಾಯಕ್ಕೆ ಚಿತ್ರದುರ್ಗ ಶ್ರೀ ಬೃಹನ್ಮಠವು ಬೆನ್ನೆಲುಬಾಗಿ ನಿಂತು ಕಾಯಕ ಜೀವಿಗಳಿಗೆ ಒಬ್ಬ ಧಾರ್ಮಿಕ ಮುಖಂಡರನ್ನು ನೀಡಿ ಆಯಾ ಸಮಾಜಗಳ ಶ್ರೇಯಸ್ಸಿಗೆ ಕಾರಣವಾಗಿರುವುದು ನಮ್ಮ ಭಾಗ್ಯ. ಮುರುಘಾಮಠವು ನಮಗೆ ಬೆಳಕನ್ನು ನೀಡಿದೆ ಎಂದರೆ ತಪ್ಪಿಲ್ಲ.

ಹಿಂದುಳಿದ ಬಡ ಸಮಾಜಕ್ಕೆ ಗುರುವನ್ನು ನೀಡಿ ಮಠ ಕಟ್ಟಿಕೊಳ್ಳಲು ಜಮೀನು ನೀಡಿ ನಮ್ಮ ಬೆಳವಣಿಗೆಗೆ ಕಾರಣವಾಗಿರುವ ಬೃಹನ್ಮಠಕ್ಕೆ ಎಂದೆಂದಿಗೂ ಚಿರಋಣಿಯಾಗಿರುತ್ತೇವೆ. ಚಿಕ್ಕವನಿದ್ದಾಗಿನಿಂದಲೂ ಮುರುಘಾಮಠದ ಸಂಪರ್ಕದಲ್ಲಿದ್ದೇನೆ, ಎಂದು ಹೇಳಿದರು.

ಶ್ರೀಮಠದ ಸಾಧಕ ಶ್ರೀಗಳಾದ ಮುರುಘೇಂದ್ರ ಸ್ವಾಮೀಜಿ ಹಾಗೂ ಎಸ್.ಜೆ.ಎಂ. ಕಾನೂನು ಕಾಲೇಜಿನ ಉಪನ್ಯಾಸಕಿ ಅಂಬಿಕಾ ಅವರು ಸಭೆಯ ವಿಷಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಯಲ್ಲಪ್ಪ, ರಂಗಸ್ವಾಮಿ, ಪ್ರಕಾಶ್, ಮಂಜುನಾಥ್, ವೆಂಕಟೇಶ್, ಶ್ರೀನಿವಾಸ್, ರಮೇಶ್ ಮತ್ತಿತರರು ಭಾಗವಹಿಸಿದ್ದರು.

ಉಮೇಶ್ ಪತ್ತಾರ್ ಮಾಚಿದೇವರ ಹಾಗೂ ಜಯದೇವ ಶ್ರೀಗಳ ಕುರಿತು ಗೀತೆಗಳನ್ನು ಹಾಡಿದರು. ಶಿಕ್ಷಕ ನಾಗರಾಜ್ ಸ್ವಾಗತಿಸಿದರು. ನಿರ್ಮಲ ಕಾರ್ಯಕ್ರಮ ನಿರೂಪಿಸಿ ನಂತರ ಶರಣುಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
2 Comments
  • ಸರಿಯಾದ ವಿಶ್ಲೇಷಣೆ. ಲಿಂಗಾಯತ ಧರ್ಮ ಮಾನ್ಯತೆಗೆ ಹೋರಾಟ ಮುಂದು ವರೆಸಬೇಕು ಸಿಖ, ಬೌದ್ಧ, ಜೈನ ತರ ಮಾನ್ಯತೆ ಕೇಳಬೇಕು ಹಿಂದೂ ಧರ್ಮದ ವಿರೋಧಿ ಆಗಬಾರದು ಎಲ್ಲ ಶಿವೋಪಾಸಕರು ಒಂದಾಗಬೇಕು. ವೀರಶೈವ ಮಠಗಳನ್ನು ಜ್ಯೋತೆಗೆ ಸೇರಿಸಿ ಮುನ್ನಡೆಯಬೇಕು ಸ್ಥಾವರ ಲಿಂಗ್ ಇಷ್ಟ ಲಿಂಗ ಬೇರೆ ಬೇರೆ ಅಲ್ಲ. ಇಷ್ಟ ಲಿಂಗ್ ಸ್ಥಾವರ ಲಿಂಗದ ಪ್ರತಿ ರೂಪ ಆತ್ಮ ಜ್ಯೋತೆಗೆ ಶಿವನ ಪೂಜೆ ಸಮಾನತೆ ಕೇವಲ ಪ್ರವಚನ ಕ್ಕೆ ಸೀಮಿತ ವಗಬಾರದು

  • ಇಷ್ಟ ಲಿಂಗ ಬೇರೆ ಸ್ಥಾವರಲಿಂಗವೆ ಬೇರೆ. ಗುರುಬಸಪ್ಪ ನವರ ವಿಚಾರದಲ್ಲಿ ತಪ್ಪು ತಿಳುವಳಿಕೆ ಹೊಂದಿದ್ದಾರೆ

Leave a Reply

Your email address will not be published. Required fields are marked *