ಬೀದರ:
ಶರಣ ಒಕ್ಕಲಿಗ ಮುದ್ದಣ್ಣ ಅವರಿಂದ ಎಲ್ಲರೂ ಸತ್ಯ ಶುದ್ಧ ಕಾಯಕ ಹಾಗೂ ಪರಮಾತ್ಮ ಸಾಧನೆಯ ಪ್ರೇರಣೆ ಪಡೆಯಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನುಡಿದರು.
ನಗರದ ಬಸವಗಿರಿಯ ಅಕ್ಕನ ಐಕ್ಯ ಮಂಟಪದಲ್ಲಿ ಸೋಮವಾರ ನಡೆದ ಒಕ್ಕಲಿಗ ಮುದ್ದಣ್ಣ ಜಯಂತಿ, ಎಳ್ಳ ಅಮಾವಾಸ್ಯೆ ಸಂಭ್ರಮ ಹಾಗೂ ಲಿಂಗಾಯತ ಮಹಾಮಠದ 2025ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಒಕ್ಕಲಿಗ ಮುದ್ದಣ್ಣ 12ನೇ ಶತಮಾನದ ಕಾಯಕ ಯೋಗಿ ಆಗಿದ್ದರು ಎಂದು ಹೇಳಿದರು.
ಭೂಮಿಯ ಗುಣ ಬೆಳೆ ಬೆಳೆಯುವುದು. ಬೀಜ ಬಿತ್ತಿದರೆ ಉತ್ಕೃಷ್ಟ ಫಸಲು ಬೆಳೆಯುತ್ತದೆ. ಇಲ್ಲದಿದ್ದರೆ ಕಳೆ ಬೆಳೆಯುತ್ತದೆ. ಹಾಗೆಯೇ ಲಿಂಗವೆಂಬ ಭೂಮಿಯಲ್ಲಿ ಲಿಂಗ ಗುಣಗಳನ್ನು ಬಿತ್ತಿದರೆ ಉತ್ತಮ ವ್ಯಕ್ತಿತ್ವ ಮೈಗೂಡುತ್ತದೆ. ಇಲ್ಲವಾದರೆ ಕೆಟ್ಟ ವಿಷಯಗಳತ್ತ ಗಮನ ಹರಿಯುತ್ತದೆ. ಕಾರಣ, ಶರಣ ಸಂಗದಲ್ಲಿದ್ದು ಶರಣರಾಗಬೇಕು ಎಂದು ಒಕ್ಕಲಿಗ ಮುದ್ದಣ್ಣನವರ ವಚನ ಉದಾಹರಿಸಿ ಬಣ್ಣಿಸಿದರು.
ಸಾಹಿತಿ ರಮೇಶ ಮಠಪತಿ ಮಾತನಾಡಿ, ಪ್ರತಿ ವರ್ಷದಂತೆ ಈ ಸಲವೂ ಲಿಂಗಾಯತ ಮಹಾಮಠದಿಂದ 2025ನೇ ಸಾಲಿನ ಕಿಂಗ್‍ಸೈಜ್‍ನ ಬಹು ಆಕರ್ಷಕ ದಿನದರ್ಶಿಕೆ ಹೊರ ತರಲಾಗಿದೆ. ಶರಣರ ಜಯಂತಿ, ಸರ್ಕಾರಿ ರಜೆ, ಪರಿಮಿತ ರಜೆ ಸೇರಿದಂತೆ ಮಹತ್ವಪೂರ್ಣ ಮಾಹಿತಿಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಈ ಬಾರಿ ವಿಶೇಷವಾಗಿ ಅನ್ನಪೂರ್ಣ ಅಕ್ಕನವರ ಸವಿನೆನಪಿನ ಸಂಚಿಕೆಯಾಗಿ ದಿನದರ್ಶಿಕೆ ರೂಪಿಸಲಾಗಿದೆ. ದಿನದರ್ಶಿಕೆ ಶರಣ ಸಂಕುಲದ ಮನೆ, ಮನೆಗಳಲ್ಲಿ ರಾರಾಜಿಸಲಿ. 2025ನೇ ವರ್ಷ ಪರ್ಯಂತ ಉತ್ತಮೋತ್ತಮ ಕಾರ್ಯ ಮಾಡಲು ಸ್ಫೂರ್ತಿ ನೀಡುವಂತಾಗಲಿ ಎಂದು ಹೇಳಿದರು.
ಪ್ರಮುಖರಾದ ಆರ್.ಕೆ. ಪಾಟೀಲ, ಮಾರುತಿ ಪಾಟೀಲ, ಚನ್ನಬಸವ ಹಂಗರಗಿ, ರಾಜಕುಮಾರ ಪಾಟೀಲ, ಅಶೋಕ ಎಲಿ, ಸಿ.ಎಸ್. ಗಣಾಚಾರಿ, ಪ್ರಕಾಶ ಮಠಪತಿ, ರಾಜಕುಮಾರ ಶೀಲವಂತ, ಪರುಷಕಟ್ಟೆ ಚನ್ನಬಸವಣ್ಣ, ಡಾ. ವಿಶ್ವನಾಥ, ರಾಜು ಹುಲಸೂರೆ, ಶಿವಕುಮಾರ ಪಾಖಾಲ ಮತ್ತಿತರರು ಇದ್ದರು.
ಲಾವಣ್ಯ ಹಂಗರಗಿ ಸ್ವಾಗತಿಸಿದರು. ನೀಲಮ್ಮನ ಬಳಗದ ಸದಸ್ಯೆಯರು ಪ್ರಾರ್ಥನೆ ನಡೆಸಿಕೊಟ್ಟರು. ನಂತರ ಎಲ್ಲರೂ ಸೇರಿ ಎಳ್ಳ ಅಮಾವಾಸ್ಯೆಯ ಭಜ್ಜಿ, ಸಜ್ಜೆ ರೊಟ್ಟಿಯ ಪ್ರಸಾದ ಸವಿಯಲಾಯಿತು.