ಪ್ರತ್ಯೇಕ ಧರ್ಮಕ್ಕೆ ಭಿಕ್ಷೆ ಬೇಡುತ್ತಿಲ್ಲ, ಅದು ನಮ್ಮ ಹಕ್ಕು: ನ್ಯಾಯವಾದಿ ಆರ್. ವಿರುಪಾಕ್ಷ

ಕೊಳ್ಳೇಗಾಲ

ಲಿಂಗಾಯತ ಪ್ರತ್ಯೇಕ ಧರ್ಮವಾದರೆ ನಮ್ಮ ಸಮಾಜ ಮುಂದುವರೆಯುತ್ತದೆ. ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್ಖರಂತೆ ಮೀಸಲಾತಿಯಿಂದ ಹಿಡಿದು ಹಲವಾರು ಸವಲತ್ತುಗಳನ್ನು ಪಡೆದು ನಮ್ಮ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಚಾಮರಾಜನಗರ ಜಿಲ್ಲಾ ಘಟಕದ ಕಾನೂನು ಸಲಹೆಗಾರ ಆರ್ ವಿರುಪಾಕ್ಷರವರು ಹೇಳಿದರು.

ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಧರ್ಮ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲಾ ಧರ್ಮಗಳಿಗೂ ಒಬ್ಬ ಧರ್ಮ ಗುರುವಿರುತ್ತಾರೆ ಮತ್ತು ಒಂದು ಪವಿತ್ರ ಗ್ರಂಥವಿರುತ್ತದೆ. ನಮ್ಮ ಧರ್ಮ ಗುರು ಬಸವಣ್ಣ, ನಮ್ಮ ಪವಿತ್ರ ಗ್ರಂಥ ವಚನಗಳು. ನಾವು ಪ್ರತ್ಯೇಕ ಧರ್ಮಕ್ಕೆ ಭಿಕ್ಷೆ ಬೇಡುತ್ತಿಲ್ಲ, ಅದು ನಮ್ಮ ಸಂವಿಧಾನಾತ್ಮಕ ಹಕ್ಕು, ಎಂದು ಹೇಳಿದರು.

ಲಿಂಗಾಯತರು ಸಿಖ್ಖರನ್ನು ನೋಡಿ ನೋಡಿ ಕಲಿಯಬೇಕು. ಸಿಖ್ಖರು ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ – ಹೀಗೆ ಎಲ್ಲಾ ಪಕ್ಷದಲ್ಲಿದ್ದಾರೆ. ತಮ್ಮ ಸಾಮರ್ಥ್ಯ ಬಳಸಿಕೊಂಡು ಭಾರತದ ಪ್ರಧಾನಿಯೂ ಆಗಿದ್ದಾರೆ, ರಾಜ್ಯದ ಮುಖ್ಯಮಂತ್ರಿಗಳೂ ಆಗಿದ್ದಾರೆ. ಭಿಕ್ಷೆ ಬೇಡುವ ಅಥವಾ ಲಾಟರಿ ಟಿಕೆಟ್ ತೆಗೆದುಕೊಳ್ಳುವ ಒಬ್ಬ ಸಿಖ್ಖರನ್ನು ತೋರಿಸಿ ಎಂದು ಸವಾಲು ಹಾಕಿದರು.

ಯಾವ ಪಕ್ಷದಲ್ಲಿದ್ದರೂ ಧರ್ಮದ ವಿಚಾರ ಬಂದಾಗ ಸಿಖ್ಖರು ಒಂದಾಗಿ ನಿಲ್ಲುತ್ತಾರೆ. 1983ರಲ್ಲಿ ಭಯೋತ್ಪಾದಕ ಬಿಂದ್ರೆನ್ವಾಲೆ ವಿರುದ್ಧ ಆಪರೇಷನ್ ಬ್ಲೂ ಸ್ಟಾರ್ ನಡೆದಾಗ ಎಲ್ಲಾ ಸಿಕ್ಕರೂ ಒಂದಾಗಿ ಅದನ್ನು ವಿರೋದಿಸಿದರು, ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜನರಿಗೆ ಲಿಂಗಾಯತ ಧರ್ಮದ ಹಲವಾರು ವಿಚಾರಗಳನ್ನು ತಿಳಿಸಿ ಮುಂದಿನ ಜನಗಣತಿಯಲ್ಲಿ ಧರ್ಮ ಅಂಕಣದಲ್ಲಿ ‘ಲಿಂಗಾಯಿತ’ ಎಂದು ಬರೆಸಿ ಎಂದು ಜನರಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭದ ಜಿಲ್ಲಾ ಗೌರವ ಅಧ್ಯಕ್ಷರಾದ ಮುಡುಗುಂಡ ಶ್ರೀಕಂಠ ಸ್ವಾಮಿ ಶ್ರೀಗಳು, ಕೊಳ್ಳೇಗಾಲ ತಾಲೂಕು ಘಟಕದ ಗೌರವಾಧ್ಯಕ್ಷರಾದ ಕಾಮಗೆರೆ ಮುಮ್ಮಡಿ ಶಾಂತಮಲ್ಲಿಕಾರ್ಜುನ ಶ್ರೀಗಳು, ಮರಿಯಾಲ ಮಠದ ಇಮ್ಮಡಿ ಮುರುಗರಾಜೇಂದ್ರ ಸ್ವಾಮಿಗಳು, ಕುಂತೂರು ಮಠದ ಶಿವಪ್ರಭುಸ್ವಾಮಿಗಳು, ವಂಡರ ಬಾಳು ಮಠದ ಪ್ರಸನ್ನ ಮಲ್ಲಿಕಾರ್ಜುನ ಶ್ರೀಗಳು, ಚಿಕ್ಕಂದ ವಾಡಿ ಮಠದ ಬಾಲ ಷಡಕ್ಷರಿ ಶ್ರೀಗಳು, ಚಿಲಕವಾಡಿ ಮಠದ ಇಮ್ಮಡಿ ಗುರುಲಿಂಗ ಶ್ರೀಗಳು, ತೇರಂಬಳ್ಳಿ ಮಠದ ಲಿಂಗರಾಜ ಸ್ವಾಮಿ ಶ್ರೀಗಳು, ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ರವರು, ಜಿಲ್ಲಾ ಉಪಾಧ್ಯಕ್ಷರಾದ ಸುಂದರಪ್ಪ ಅವರು ಹಾಗೂ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತೇರಂಬಳ್ಳಿ, ಉತ್ತಂಬಳ್ಳಿ, ಗೊಬ್ಬಳಿಪುರ ಗ್ರಾಮದ ಜನರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share This Article
3 Comments
  • ಉತ್ತಮ ಬೆಳವಣಿಗೆ. ಲಿಂಗಾಯತರು ಜಾಗೃತಿಯಾಗುವುದು ಬಹಳ ಮುಖ್ಯ

    • ಖಂಡಿತ ಈ ತರಹ ಖಡಕ್ಕಾಗಿ ಮಾತಾಡುವಂತ ನಾಯಕರು ಮತ್ತು ಕಶನೂನು ತಿಳಿದವರು ಮುಂದೆ ಬರಬಱಕು

Leave a Reply

Your email address will not be published. Required fields are marked *

ಉಪಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಜಾಮರಾಜನಗರ ಜಿಲ್ಲೆ