ತಿ. ನರಸೀಪುರ
ವೀರಶೈವ ಲಿಂಗಾಯತ ಸಮಾಜವನ್ನು ಯಾವುದೇ ಕುತಂತ್ರದಿಂದಲೂ ಒಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯಂದ್ರ ಹೇಳಿದರು.
ಪಟ್ಟಣದ ವಿವೇಕಾನಂದ ನಗರದಲ್ಲಿ ನವೀಕರಿಸಲಾಗಿರುವ ಆಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ನವೀಕರಣಗೊಂಡಿರುವ ಸಭಾ ಭವನ ಉದ್ಘಾಟಿಸಿ ಮಾತನಾಡಿದರು.
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಣದ ಕೈಗಳು ಷಡ್ಯಂತ್ರದಿಂದ ಸಮಾಜವನ್ನು ಒಡೆಯಲು ಯತ್ನಿಸಿರುವುದನ್ನೂ ನಾವೆಲ್ಲರೂ ಕಂಡಿದ್ದೇವೆ. ಆದರೆ ಬಲಿಷ್ಠ ವೀರಶೈವ ಸಮಾಜವನ್ನು ಒಡೆಯಬೇಕೆಂಬ ಯಾವ ದುಷ್ಟ ಶಕ್ತಿಗಳ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು.
ಲಿಂಗಾಯತ ಸಮಾಜ ಶಿಕ್ಷಣ ಕ್ರಾಂತಿಯನ್ನೇ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಿದೆ. ಮಠ ಮಾನ್ಯಗಳು ಕೇವಲ ಲಿಂಗಾಯತ ಸಮಾಜಕ್ಕೆ ಸೀಮಿತವಾಗಿಲ್ಲ. ಆಶ್ರಯ ಹುಡುಕಿ ಬರುವವವರ ಯಾವುದೇ ಧರ್ಮ, ಜಾತಿ, ಕುಲವನ್ನು ಪ್ರಶ್ನಿಸದೇ ಅವರಿಗೆ ಆಶ್ರಯ ದೊರಕಿಸಿಕೊಟ್ಟಿದೆ, ಎಂದರು.

ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ. ಈಶ್ವರ ಖಂಡ್ರೆ ಮಾತನಾಡಿ, ಇಂದು ಕರ್ನಾಟಕ ಐಟಿ, ಬಿಟಿ ರಾಜ್ಯವಾಗಿ ಪ್ರಖ್ಯಾತಿ ಪಡೆಯುವುದರ ಹಿಂದೆ ವೀರಶೈವ ಲಿಂಗಾಯತ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ಎಲ್ಲ ಜಾತಿ, ಜನಾಂಗದವರಿಗೂ ಉಚಿತವಾಗಿ ಆಶ್ರಯ, ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಶಿಕ್ಷಣ ನೀಡುವ ಮೂಲಕ ಜ್ಞಾನಾಧಾರಿತ ಸಮಾಜದ ನಿರ್ಮಾಣಕ್ಕೆ ನಮ್ಮ ಮಠಮಾನ್ಯಗಳು ಕೊಡುಗೆ ನೀಡಿವೆ ಎಂದು ವಿವರಿಸಿದರು.
ಹಾನಗಲ್ ಕುಮಾರೇಶ್ವರರು ಅಖಿಲ ಭಾರತ ವೀರಶೈವ ಮಹಾಸಭಾ ಕಟ್ಟಿ ಬೆಳೆಸಿದರು. ಶತಾಯುಷಿ ಲೋಕನಾಯಕ ಭೀಮಣ್ಣ ಖಂಡ್ರೆ ಅವರು ಅಧ್ಯಕ್ಷರಾಗಿದ್ದಾಗ ಸಂಘಟನೆ ಬಲಪಡಿಸಿದರು, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ತುಮಕೂರು ಸಿದ್ದಗಂಗಾಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರು ಲಿಂಗಾಯತ ಬೇರೆ ಅಲ್ಲ, ವೀರಶೈವ ಬೇರೆ ಅಲ್ಲ ನಾವಿಬ್ಬರೂ ಒಂದೇ, ನಮ್ಮ ಸಮುದಾಯದ ಒಗ್ಗಟ್ಟು ಒಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಮಹಾಸಭಾ ಅದೇ ಹಾದಿಯಲ್ಲಿ ನಡೆಯುತ್ತಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಬಸವಣ್ಣನವರದ್ದು ಉದಾತ್ತವಾದ ವ್ಯಕ್ತಿತ್ವ ಎನಗಿಂತ ಕಿರಿಯರಿಲ್ಲ ಎಂದು ಹೇಳುತ್ತಾರೆ. ಸಮುದಾಯವನ್ನು ಪ್ರತಿನಿಧಿಸುವ ಬುದ್ಧ, ಬಸವ, ಅಂಬೇಡ್ಕರರ ಸಮುದಾಯಗಳು ಒಟ್ಟಿಗೆ ಕುಳಿತು ಶಾಂತಿ ಸಂದೇಶವನ್ನು ಸಾರಬೇಕು.
ಬಸವಣ್ಣನವರ ಸಮ ಸಮಾಜದ ಪರಿಕಲ್ಪನೆಯನ್ನು ನಾವೆಲ್ಲಾ ಅಭ್ಯಸಿಸಿ ನೈತಿಕತೆಯಿಂದ ಕೂಡಿರುವ ಯುವ ಶಕ್ತಿಯನ್ನು ಕಟ್ಟುವುದು ಇವತ್ತಿನ ಸಂಧರ್ಭದಲ್ಲಿ ಅನಿವಾರ್ಯ ಮತ್ತು ಅವಶ್ಯಕತೆಯಾಗಿದೆ, ಆಮೂಲಕ ಬಸವ ಕಂಡಂತಹ ಸುಖೀರಾಜ್ಯದ ಸ್ಥಾಪನೆ ಮಾಡುವಂತಹ ಕೆಲಸ ಮಾಡಬೇಕಿದೆ, ಎಂದು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಿದ್ದಗಂಗ ಮಠದ ಕಿರಿಯ ಶ್ರೀಗಳು, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಹಲವಾರ ಮುಡುಕನ ಪುರ ಮಠದ ಷಡಕ್ಷರ ದೇಶೀಕೇಂದ್ರ ಸ್ವಾಮಿ, ಮಾಡ್ರ ಹಳ್ಳಿ ಪಟ್ಟದ ಶಾಂತ ಮಲ್ಲಿಕಾರ್ಜುನ ಸ್ವಾಮಿ,
ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಅಶ್ವಿನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
