ವಚನ ಸಂಸ್ಕೃತಿ ಉಳಿಸಿದ ಬಸವತತ್ವದ ಮಹಾ ದಂಡನಾಯಕ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಬಸವ ತತ್ವ ಕ್ರಿಯೇ ಮತ್ತು ಜ್ಞಾನಗಳ ಸಮನ್ವಯವಾಗಿದೆ. ನಡೆ-ನುಡಿ ಒಂದಾಗಿದ್ದು, ವಿಚಾರ ಪ್ರಧಾನಕ್ಕಿಂತ ಆಚಾರ ಪ್ರಧಾನ ತತ್ವವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಹೇಳಿದರು.

ಅವರು ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಹರಳಯ್ಯನವರ ಗವಿಯಲ್ಲಿ ಜರುಗಿದ ಶರಣು ಶರಣಾರ್ಥಿ ಸಮಾವೇಶ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.

ಬಸವ ತತ್ವವನ್ನು ನಿರಂತರವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಪೂಜ್ಯ ಚನ್ನಬಸವ ಪಟ್ಟದ್ದೇವರು ಲಿಂಗಾಯತ ಸಂಸ್ಕೃತಿ, ವಚನ ಸಂಸ್ಕೃತಿ ಉಳಿಸಿಕೊಂಡ ಬಸವತತ್ವದ ಮಹಾ ದಂಡನಾಯಕರು.

ಬಸವ ತತ್ವ ಕಾಯಕ ಜೀವಿಗಳ ಚಳುವಳಿ, ಸ್ತೀಯರನ್ನು ಪಾರಮಾರ್ಥಿಕವಾಗಿ, ಪ್ರಾಪಂಚಿಕವಾಗಿ ಸಮರ್ಥಳನ್ನಾಗಿ ಮಾಡಿ ಸ್ತ್ರೀ ಗೌರವ ಎತ್ತಿ ಹಿಡಿದ ಶರಣ ತತ್ವವನ್ನು ಅಕ್ಷರಶಃ ಪಾಲಿಸಿದ ಪೂಜ್ಯರು ಶರಣ ಸಂಸ್ಕೃತಿ-ಶರಣತತ್ವದ ಪ್ರಸ್ತುತತೆ, ವೈಚಾರಿಕ ಪ್ರಖರತೆ ಜನರಿಗೆ ಮನದಟ್ಟು ಮಾಡಿಕೊಡುವುದರ ಮೂಲಕ ಜನರಲ್ಲಿ ಪರಸ್ಪರ ಸೌಹಾರ್ಧ ಭಾವವನ್ನು ಮೂಡಿಸಿದರು ಎಂದರು.

ಸಂಡೂರಿನ ಪ್ರಭುದೇವ ಸಂಸ್ಥಾನ ಮಠದ ಪೂಜ್ಯ ಪ್ರಭು ಸ್ವಾಮಿಗಳು ಉದ್ಘಾಟಿಸಿ ಮಾತನಾಡಿ, ಶರಣು ಶರಣಾರ್ಥಿ ಲಿಂಗಾಯತ ಧರ್ಮದ ತತ್ವ ಮೂಲ ಬೇರಾಗಿದೆ. ತಳ ಸಮುದಾಯದವರನ್ನು ಶರಣನ್ನಾಗಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಶರಣರು ಕಾಯಕಕ್ಕೆ ಮಹತ್ವ ನೀಡಿದರು. ಬಸವಣ್ಣನವರೇ ಧರ್ಮಗುರು, ವಚನ ಸಾಹಿತ್ಯವೇ ಧರ್ಮ ಗ್ರಂಥವಾಗಿದೆ. ನೂತನ ಅನುಭವ ಮಂಟಪ ಸ್ಥಾಪಿಸುವುದರ ಮೂಲಕ ಚೆನ್ನಬಸವಪಟ್ಟದ್ದೇವರು ಕಲ್ಯಾಣದ ಬೆಳಕಾಗಿದ್ದಾರೆ ಎಂದು ನುಡಿದರು.

ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ದಿವ್ಯ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿ, ಕನ್ನಡ ಉಳಿದರೆ ಮಾತ್ರ ವಚನ ಸಾಹಿತ್ಯ ಉಳಿಯುತ್ತದೆ ಎಂದು ತಿಳಿದು ಪೂಜ್ಯ ಚನ್ನಬಸವಪಟ್ಟದ್ದೇವರು ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸಿ ಕನ್ನಡದ ಕಾವಲುಗಾರರಾಗಿ ಕೆಲಸ ಮಾಡಿದ್ದಾರೆ. ಎಲ್ಲಡೆ ಸದಾ ಕನ್ನಡತನವನ್ನು ಮೂಡಿಸುತ್ತಾ ಎಲ್ಲರಿಗೂ ಕನ್ನಡವನ್ನು ಕಲಿಸುತ್ತಲೇ ವಚನ ಸಾಹಿತ್ಯ ಜನಮನಕ್ಕೆ ತಲುಪಿಸಿದರ. ಮಠದ ಸಂಪ್ರದಾಯವನ್ನು ಮುರಿದು ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಸಿ ಬಸವತತತ್ವ ಸಾರಿದ ಮಹಾನ ಚೇತನ ಎಂದರು.

ಕೆಪಿಸಿಸಿ ಸದಸ್ಯ ಬಾಬುರಾವ ತುಂಬಾ ೨೦೨೫ ರ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಹುಮನಾಬಾದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರೆ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಸುರೇಶ ಸೀಗಿ, ಹುಮನಾಬಾದ ಮಾಣಿಕಪ್ರಭು ವಾಯುವಿಹಾರಿ ಸಂಘದ ಅಧ್ಯಕ್ಷ ಶರಣಪ್ಪಾ ಪಾಟೀಲ, ಎನ್‌ಎಸ್‌ಎಸ್‌ಕೆ ನಿರ್ದೇಶಕ ಶಿವಬಸಪ್ಪ ಚನ್ನಮಲ್ಲೆ, ಹುಲಸೂರು ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ, ಅನಿತಾ ಇಸ್ಲಾಪೂರೆ, ವಿಮಲಾಬಾಯಿ ವಾಘ್ಮಾರೆ ಉಪಸ್ಥಿತರಿದ್ದರು. ಹರಳಯ್ಯ ಸಮಾಜದ ಸಂದೀಪ ಜಾಧವ ಧ್ವಜಾರೋಹಣಗೈದರೆ, ರೇವಣಪ್ಪಾ ಪಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು. ಡಾ. ಮೀನಾಕ್ಷಿ ಬಿರಾದಾರ ಸ್ವಾಗತಿಸಿದರೆ, ಸಂಗಮೇಶ ತೊಗರಖೇಡೆ ನಿರೂಪಿಸಿದರು.

Share This Article
Leave a comment

Leave a Reply

Your email address will not be published. Required fields are marked *