ಲಿಂಗಾಯತ ಧರ್ಮದ ವಿರುದ್ಧ ನಿಂತ ಲಿಂಗಾಯತ ಸ್ವಾಮಿಗಳು

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ನಿರ್ಭಯದಿಂದ ಪ್ರಶ್ನಿಸುವುದು, ಅನುಭವ ಮಂಟಪದ ಕಲಿಸಿದ ಮೊದಲ ಪಾಠ. ಇಂತಹ ಪರಂಪರೆಯನ್ನು ಮುರಿಯ ಹೊರಟಿರುವ ಸ್ವಾಮಿಗಳು ವಚನಗಳನ್ನು ಸ್ಪರ್ಶಿಸುವ ಯೋಗ್ಯತೆ ಸಹ ಹೊಂದಿಲ್ಲ.

ಇತ್ತೀಚೆಗೆ ಲಿಂಗಾಯತ ಧರ್ಮದ ವಿರುದ್ಧ ನಿಂತಿರುವ ಲಿಂಗಾಯತ ಸ್ವಾಮಿಗಳು ನಿರಂತರವಾಗಿ ಸುದ್ದಿಯಲ್ಲಿದ್ದಾರೆ.

ಇವರುಗಳು ವಚನ ದರ್ಶನ ಪುಸ್ತಕದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ಮಾಧ್ಯಮಗಳಲ್ಲಿ ಲಿಂಗಾಯತರು ಹಿಂದೂಗಳೇ ಎಂದು ಪದೇ ಪದೇ ಹೇಳುತ್ತಾರೆ, ಅನ್ಯ ಧರ್ಮಗಳ ಆಚರಣೆಗಳನ್ನು ಲಿಂಗಾಯತರು ಒಪ್ಪಿಕೊಳ್ಳುವಂತೆ ಮಾಡಲು ಶ್ರಮಿಸುತ್ತಾರೆ.

ಈ ಸ್ವಾಮಿಗಳ ನಡೆ, ನುಡಿ, ಉದ್ದೇಶ, ಪ್ರಭಾವಗಳನ್ನು ರವೀಂದ್ರ ಹೊನವಾಡ ಅವರ ಜೊತೆ ಸಂದರ್ಶನದಲ್ಲಿ ಚಿಂತಕಿ, ಹೋರಾಟಗಾರತಿ ಕೆ ನೀಲಾ ವಿಶ್ಲೇಷಿಸಿದ್ದಾರೆ.

1) ಲಿಂಗಾಯತ ಧರ್ಮದ ವಿರುದ್ಧ ಕೆಲವು ಲಿಂಗಾಯತ ಸ್ವಾಮಿಗಳು ನಿಂತಿದ್ದಾರಲ್ಲಾ…ಒಬ್ಬ ಧಾರ್ಮಿಕ ಗುರುವಿಗೆ ಸೂಕ್ತವಾದ ರೀತಿಯಲ್ಲಿ ಇವರು ನಡೆದುಕೊಳ್ಳುತ್ತಿದ್ದಾರಾ? ಇಂತವರನ್ನು ನಾವು ಗೌರವಿಸಬೇಕೇ?

ವಚನ ಚಳುವಳಿಯಲ್ಲಿ ಮಠ ಪೀಠಗಳ ಪರಂಪರೆಯಿಲ್ಲ. ಸ್ವಾಮಿಗಿರಿ, ಸನ್ಯಾಸತ್ವಕ್ಕೆ ಜಾಗವಿಲ್ಲ. ಅದರಲ್ಲಿಯೂ ಕಾವಿ ನೆರಳಿನಲ್ಲಿ ವಚನ ತತ್ವಗಳ ಆಶಯವನ್ನೇ ನಾಶ ಮಾಡುವ ವೈದಿಕತೆಯ ಬೆಂಬಲಿಗ ಸ್ವಾಮಿಗಳನ್ನು ಗೌರವಿಸುವ ಪ್ರಶ್ನೆಯಿಲ್ಲ.

ಅನೇಕ ಮಠ ಪೀಠಗಳು ತಮ್ಮ ಸೀಮಿತಿ ವ್ಯಾಪ್ತಿಯೊಳಗೂ ಇಂದು ವಚನ ಚಳುವಳಿಯ ತತ್ವವನ್ನು ಉಳಿಸಲು ದೃಢ ನಿಲುವು ತೆಗೆದುಕೊಂಡಿದ್ದಾರೆ.‌ ಅಂಥವರಲ್ಲಿ ಸಾಣೆಹಳ್ಳಿ ಸ್ವಾಮಿಗಳು, ಭಾಲ್ಕಿ ಹಿರೆಮಠದ ಅಪ್ಪಗಳು, ಪೀಠಾಧಿಪತಿಗಳ ಒಕ್ಕೂಟ ಮುಂತಾದವರು ಪ್ರಮುಖರು. ಅವರಿಗೆಲ್ಲ ನಾಡಿನ ಜನತೆಯು ಶರಣು ಶರಣಾರ್ಥಿ ಖಂಡಿತ ಹೇಳುವರು.

ನಮ್ಮ ನಾಡಿನ ಅನೇಕ ಮಠಗಳ ಸ್ವಾಮೀಜಿಗಳನ್ನು ತಮ್ಮ ಬಲೆಗೆ ಕೆಡವಿಕೊಳ್ಳಲು ವಿಶ್ವಹಿಂದೂ ಪರಿಷತ್ತಿನ ನ ನೇತೃತ್ವದಲ್ಲಿ ರಾಷ್ಟ್ರೀಯ ಸಂತ ಸಮಾವೇಶವನ್ನು ಕೆಲ ವರ್ಷಗಳ ಹಿಂದೆ ಜೇವರ್ಗಿಯಲ್ಲಿ ನಡೆಸಲಾಗಿತ್ತು. ಆ ಸಂತ ಸಮಾವೇಶಕ್ಕೆ ನಮ್ಮ ನಾಡಿನ ಒಬ್ಬಿಬ್ಬರು ಸ್ವಾಮಿಗಳನ್ನು ಬಿಟ್ಟರೆ ಮತ್ಯಾರು ಹೋಗಲಿಲ್ಲ. ತನ್ಮೂಲಕ ಬಸವಾದಿ-ಮಾದಾರ ಚನ್ನಯಾದಿ ಶರಣರ ತ್ಯಾಗ ಬಲಿದಾನದಿಂದ ಕಟ್ಟಿಕೊಟ್ಟ ಶರಣತತ್ವ ಲಿಂಗಾಯತ ತತ್ವವನ್ನು ಎತ್ತಿ‌ ಹಿಡಿದಿದ್ದು ಅತ್ಯಂತ ಹೆಮ್ಮೆಯ ಸಂಗತಿಯಾಗಿತ್ತು. ಅದೇ ಸಂದರ್ಭದಲ್ಲಿ ಜೇವರ್ಗಿಯಲ್ಲಿಯೇ ಶರಣ-ಸೂಫಿ-ಸಂತ ಸಮಾವೇಶ ನಡೆಸಿ ಬಹುತ್ವ ಸಂಸ್ಕೃತಿಯನ್ನು ಮುನ್ನೆಲೆಗೆ ತರಲಾಯಿತು.

ಇಂತಹ ಘಟನೆಗಳಿಂದ ಪಾಠ ಕಲಿಯದ ವೈದಿಕರು ಮತ್ತೇ ಮತ್ತೇ ವಚನಗಳ ತತ್ವದ ಮೇಲೆ ಧಾಳಿ ಮಾಡಲು ಜಾಲ ಹೆಣೆಯುತ್ತಲೇ ಇದ್ದಾರೆ. ಇಂತಹ ಕುಟಿಲ ಕುತಂತ್ರದ ಜಾಲಕ್ಕೆ ಬಿದ್ದವರು ವಚನಾನಂದಸ್ವಾಮಿ ಮತ್ತು ವಚನ ದರ್ಶನ ಪುಸ್ತಕ ಬಿಡುಗಡೆಗೆ ಓಡಾಡುತ್ತಿರುವ ಕುಂಕುಮಧಾರಿ ಸದಾಶಿವಾನಂದಸ್ವಾಮಿ. ಇವರಿಗೆಲ್ಲ ವಚನಗಳು ಪಚನವೇ ಆಗಿಲ್ಲ. ಆಳವಾದ ಅಧ್ಯಯನವೇ ಇಲ್ಲದೆ ವಚನಗಳನ್ನು ತಿರುಚುವ ದಾರಿಯಲ್ಲಿದ್ದಾರೆ.

ಇದು ಸಂಘ ಪರಿವಾರವನ್ನು ಮೆಚ್ಚಿಸುವ ಹಿಕಮತ್ತು ಆಗಿದೆ. ಮಾತ್ರವಲ್ಲ ವೈದಿಕ ಸಂಸ್ಕೃತಿಯ, ಆರ್ ಎಸ್ ಎಸ್, ಬಿಜೆಪಿಯ ಸಂತೋಷಜೀ, ಸಿ.ಟಿ. ರವಿ ಮುಂತಾದ ರಾಜಕಾರಣಿಗಳನ್ನು ಮೆಚ್ಚಿಸಲು ಬಸವಾದಿ ಶರಣರ ದ್ರೋಹದ ಕೃತ್ಯಕ್ಕೆ ಇಳಿದಿದ್ದಾರೆ. ಇದು ಶರಣರ ತ್ಯಾಗ ಬಲಿದಾನಕ್ಕೆ ಮಾಡುವ ಬಹುದೊಡ್ಡ ಅಪಮಾನವಾಗಿದೆ. ಏಳುನೂರ ಎಪ್ಪತ್ತು ಅಮರಗಣಂಗಳಿಗೆ ಸಮಾನತೆಯ ಹೆಬ್ಬಾಗಿಲು ತೆರೆದದ್ದು ಶರಣರು. ಇದರ ಬಗ್ಗೆ ಕಿಂಚಿತ್ತು ಅರಿವಿಲ್ಲ. ಈ ವೈದಿಕ ಹಿಂಬಾಲಕ ಸ್ವಾಮಿಗಳು ಯಾವ ಕಾರಣಕ್ಕೂ ಜನತೆಯ ಗೌರವಕ್ಕೆ ಅರ್ಹರಲ್ಲ.

2) ನಿಮ್ಮ ಅಭಿಪ್ರಾಯದಲ್ಲಿ ಈ ಸ್ವಾಮಿಗಳು ಈ ರೀತಿ ವರ್ತಿಸಲು ಕಾರಣವೇನು?

ಆಮಿಷಗಳಿಗೆ ಒಳಗಾಗಿ ಈ ರೀತಿ ವರ್ತಿಸಿರುವ ಸಾಧ್ಯತೆಗಳಿವೆ.

3) ಮಾಧ್ಯಮಗಳಲ್ಲಿ ಲಿಂಗಾಯತ ಧರ್ಮದ ವಿರುದ್ಧ ನಿಂತ ಲಿಂಗಾಯತ ಸ್ವಾಮಿಗಳಿಗೆ ಭಾರಿ ಪ್ರಚಾರ ಸಿಗುತ್ತಿದೆ. ಸಾಮಾನ್ಯ ಲಿಂಗಾಯತರ ಮೇಲೆ TVಯಲ್ಲಿ ಬರುತ್ತಿರುವ ಅವರ ಮಾತುಗಳ ಪರಿಣಾಮವೇನು?

ಮಾದ್ಯಮಗಳ ಮೇಲೆ ಬಿಜೆಪಿಯ ಹಿಡಿತವಿದೆ. ಗೋದಿ ಮೀಡಿಯಾಗಳಿವು. ಆರ್ ಎಸ್ ಎಸ್ ನ ಹಿಂದೂತ್ವದ ಅಜೆಂಡಾ ಜಾರಿ ಮಾಡಲು ದಕ್ಷಿಣ ಭಾರತದ ರಾಜ್ಯಗಳ ಅವೈದಿಕ ಸಮಾನತೆಯ ಪರಂಪರೆಗಳು ಅಡ್ಡಿಯಾಗಿವೆ. ಈ ಅಡ್ಡಿ ನಿವಾರಿಸಿಕೊಳ್ಳಲು, ವಚನ ತತ್ವಗಳನ್ನು ನಾಶ ಮಾಡಲು‌ ಮಾದ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬಹುತೇಕ ಲಿಂಗಾಯತ ಸಮುದಾಯಕ್ಕೆ ಇದರ ಅರಿವಿಲ್ಲ.

ಅರಿವು, ಜಾಗೃತಿ ಮೂಡಿಸಬೇಕಾದ ಬಸವಪ್ರಣೀತ ಸಂಘಟನೆಗಳು ತಮ್ಮ ಚಾರಿತ್ರಿಕ ಜವಾಬ್ದಾರಿ ನಿರ್ವಹಿಸಲು ಸಿದ್ದವಿಲ್ಲ. ಆದ್ದರಿಂದ ಟೀವಿಗಳಲ್ಲಿ ವೈದಿಕ ವರದಿಗಾರರು ಚೀರಾಡುವುದನ್ನೇ ಸತ್ಯವೆಂದು ನಂಬುವ ಸ್ಥಿತಿಯಲ್ಲಿ ಜನರಿದ್ದಾರೆ. ಇದನ್ನು ಬಲವಾದ ಐಕ್ಯತೆಯಿಂದ ಎದುರಿಸಲೇಬೇಕಿದೆ.

4) ಲಿಂಗಾಯತ ಧರ್ಮದಲ್ಲಿ ಸ್ವಾಮಿಗಳು ಹೇಳುವುದನ್ನೆಲ್ಲ ಒಪ್ಪಿಕೊಳ್ಳಬೇಕಾ? ಜನ ಅವರನ್ನು ಪ್ರಶ್ನಿಸಬಹುದೇ?

ಲಿಂಗಾಯತ ಮಾತ್ರವಲ್ಲ ಯಾವುದೇ ಸ್ವಾಮಿಗಳು ಹೇಳುವುದನ್ನೆಲ್ಲಾ ಯಾರೂ ಒಪ್ಪಿಕೊಳ್ಳಬೇಕಿಲ್ಲ. ಐನ್ ಸ್ಟಿನ್ ಪ್ರಕಾರ ಭೂಮಿಯ ಮೇಲಿನ ಅತಿ ದೊಡ್ಡ ಕಸವೆಂದರೆ ಪ್ರಶ್ನಿಸಲಾರದ ಮೆದುಳು. ಲಿಂಗಾಯತ ತತ್ವ ಹುಟ್ಟಿಕೊಂಡಿದ್ದೇ ಪುರೋಹಿತಶಾಹಿಗಳ ದಬ್ಬಾಳಿಕೆ, ಭಿನ್ನಭೇದ, ಒಡೆದಾಳುವ ಕ್ರೌರ್ಯವನ್ನು ಪ್ರಶ್ನಿಸಿಯೇ.
ಸ್ವತಃ ಬಸವಣ್ಣ “ಏನಯ್ಯಾ ವಿಪ್ರ, ತನಗೊಂದು ಬಟ್ಟೆ ಲೋಕಕ್ಕೊಂದು ಬಟ್ಟೆ?” ಎಂದು ಪ್ರಶ್ನಿಸುತ್ತಾರೆ.

ಇಡೀ ವಚನ ಚಳುವಳಿಯೇ ವರ್ಗ, ವರ್ಣ, ಲಿಂಗ ಮತ್ತು ಜಾತಿಯ ತಾರತಮ್ಯವನ್ನು ಹುಟ್ಟುಹಾಕಿದ ಪುರೋಹಿತಶಾಹಿಯನ್ನು ಪ್ರಶ್ನಿಸುತ್ತದೆ. ಶರಣರು ಯಾವ ಕಾರಣಕ್ಕೂ ಆಳುವವರು ಮತ್ತು ಪುರೋಹಿತಶಾಹಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿಲ್ಲ.

ಕಣ್ಣು ಕಿತ್ತು ಆನೆ ಕಾಲಿಗೆ ಕಟ್ಟಿ ಎಳೆಸಿದರೂ ಅತ್ಯಂತ ಧೈರ್ಯದಿಂದ ಶರಣತತ್ವ ನಿಷ್ಠರಾಗಿ ಪ್ರಾಣವನ್ನೇ ಸಮರ್ಪಿಸಿದ ಮಹೋನ್ನತ ಪರಂಪರೆ ಶರಣರದ್ದು. ಪ್ರಶ್ನೆಯೇ ಕೇಳದಿದ್ದರೆ ಗುಲಾಮ ಬಾಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಅನುಭವ ಮಂಟಪದ ಮೂಲಕ ಕಲಿಸಿದ ಮೊದಲ ಪಾಠವೇ ನಿರ್ಭಯದಿಂದ ಪ್ರಶ್ನಿಸುವುದಾಗಿದೆ. ಪ್ರಶ್ನಿಸುವ ಪರಂಪರೆಯನ್ನು ಮುರಿಯ ಹೊರಟಿರುವ ಸ್ವಾಮಿಗಳು ಎಂದಿಗೂ ವಚನಗಳನ್ನು ಸ್ಪರ್ಶಿಸುವ ಯೋಗ್ಯತೆ ಸಹ ಹೊಂದಿಲ್ಲ.

Share This Article
5 Comments
  • ನೇರ ದಿಟ್ಟ ನಿಲುವು ಹೊಂದಿರುವ ನೀಲಾ ಅಕ್ಕನವರ ಸಂದಶ೯ನ ಲೇಖನ ತುಂಬಾ ಚೆನ್ನಾಗಿದೆ 🙏🙏. ಸಂದಶ೯ನ ಲೇಖನ ಬರೆದು ಅಚ್ಚು ಕಟ್ಟಾಗಿಸಿದ ರವೀಂದ್ರ ಹೊನವಾಡ ಸರ್ ಗೇ ಮತ್ತು ನೀಲಾ ಅಕ್ಕನವರಿಗೆ ಶರಣು ಶರಣಾಥಿ೯ಗಳು 🙏🙏

    • ಲೀಲಾ ಅಕ್ಕನವರಿಗೂ ಹಾಗೂ ರವೀಂದ್ರ ಹೊನವಾಡ ಶರಣರಿಗೆ ಶರಣು ಶರಣಾರ್ಥಿ
      ಗಳು. ದಿಟ್ಟ ನೇರ ಹಾಗೂ ಸತ್ಯದ ನುಡಿಗಳನ್ನು ಅರ್ಥೈಸಿಕೊಳ್ಳುವ ಜನರ ಕೊರತೆ ಎದ್ದು ಕಾಣುತ್ತಿದೆ.ಈ ಅರ್ಥ ಪೂರ್ಣ ಸಂದರ್ಶನ ಇನ್ನೂ ಹೆಚ್ಚು ಹೆಚ್ಚು ಜನರಿಗೆ ತಲುಪುವಂತಾಗಬೇಕು. ಎಚ್ಚೆತ್ತು ಕೊಳ್ಳಬೇಕು

Leave a Reply

Your email address will not be published. Required fields are marked *