ಬಸವ ಭೂಮಿಯಲ್ಲಿ ಮತ್ತೆ ಮಾರ್ದನಿಸಿದ ಸ್ವತಂತ್ರ ಧರ್ಮದ ಕೂಗು

ಬೀದರ

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಬೀದರ ವತಿಯಿಂದ ನಗರದ ಭೂಮರೆಡ್ಡಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಬಸವ ಸಂಸ್ಕೃತಿ ಅಭಿಯಾನ ಸಮಾರಂಭದಲ್ಲಿ ಸಹಸ್ರಾರು ಬಸವ ಭಕ್ತರ ಸಮ್ಮುಖದಲ್ಲಿ ಲಿಂಗಾಯತ ಧರ್ಮದ ಹೋರಾಟದ ಕೂಗು ಮತ್ತೆ ಮಾರ್ದನಿಸಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಚರು ಮಾತನಾಡಿ, ಇವತ್ತಿನ ಈ ಯಾತ್ರೆ ಲಿಂಗವಂತರಲ್ಲಿನ ಅಂಧಕಾರವನ್ನು ತೊಡೆದು ಹಾಕುವ ಯಾತ್ರೆಯಾಗಬೇಕು. ನಿಮ್ಮೆಲ್ಲರ ಮನೆಯಲ್ಲಿ ದೇವರ ಫೋಟೋ ನೋಡಿದ್ರೆ ಅದೊಂದು ಮ್ಯೂಸಿಯಂ ಆಗಿರುತ್ತದೆ, ತಾವೆಲ್ಲರೂ ಬಸವಣ್ಣನವರ ಭಾವಚಿತ್ರವನ್ನು ಹೊರತಾಗಿ ಯಾರ ಭಾವಚಿತ್ರವನ್ನು ಮನೆಯಲ್ಲಿ ಇಡಬಾರದು ಎಂದು ಲಿಂಗಾಯತರಿಗೆ ಏಕದೇವೋಪಾಸನೆಯ ಪಾಠ ಹೇಳಿದರು.

ಮುಂದುವರೆದು, ಮುಂದಿನ ಜಾತಿಗಣತಿ ವೇಳೆ ತಾವೆಲ್ಲರೂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕು. ಜಾತಿಯ ಕಾಲಂನಲ್ಲಿ ನಿಮ್ಮ ಉಪಜಾತಿಗಳನ್ನು ನಮೂದಿಸಬೇಕು. ಅಂದಾಗ ಮಾತ್ರ ನಮ್ಮ ನಿಜವಾದ ಜನಸಂಖ್ಯೆ ತಿಳಿಯುತ್ತದೆ.

ನೀವೆಲ್ಲರೂ ಇಂದಿನ ಕಾರ್ಯಕ್ರಮಕ್ಕೆ ಹಾಜರಾದಂತೆ ಬೆಂಗಳೂರಿನ ಸಮಾರೋಪಕ್ಕು ಹಾಜರಾಗಬೇಕು, ನಮ್ಮ ಸಂಖ್ಯೆಯನ್ನು ನೋಡಿ ಬೆಂಗಳೂರು ಬೆದರಬೇಕು.

ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗೆ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿದೆ ಆದರೆ ಕೇಂದ್ರ ಕೊಟ್ಟಿಲ್ಲ, ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಧರ್ಮದ ಮಾನ್ಯತೆಗಾಗಿ ಹೋರಾಡಬೇಕು ಎಂದು ಕರೆ ಕೊಟ್ಟರು.

ಮೊಟಗಿಯ ಪ್ರಭುಚನ್ನಬಸವ ಶ್ರೀಗಳು ಮಾತನಾಡಿ, ಕೆಲವರು 16 ವರ್ಷಕ್ಕೊಮ್ಮೆ ಸೇರಿ ವಿಶ್ವದಾಖಲೆ ಅಂತಿದ್ರು, ಆದರೆ ನಾವೂ ಬಸವ ಎಂದರೆ ಸಾಕು ನಿತ್ಯ ಕೋಟಿ, ಕೋಟಿ ಜನರು ಸೇರುತ್ತಾರೆ. ಎಲ್ಲ ಮಠಾಧೀಶರು ಒಗ್ಗೂಡಿ ಬಸವ ಸಂದೇಶವನ್ನು ವಿಶ್ವಕ್ಕೆ ಸಾರಲು ಹೊರಟಿದ್ದೇವೆ. ಬಸವಣ್ಣನ ನೆಲಕ್ಕೆ ಬಂದಿದಕ್ಕೆ ಹೃದಯ ತುಂಬಿ ಬರುತ್ತಿದೆ.

ಬಸವ ಸಂಸ್ಕೃತಿ ಅಭಿಯಾನ ಎನ್ನುವುದು ಎಂದೆಂದು ಮುಗಿಯದ ಸಂತಸದ ಅಭಿಯಾನ. ಬಸವ ಸಂಸ್ಕೃತಿ ಎನ್ನುವುದು ವಿಶ್ವ ಮಾನವತೆಯ ಸಂಸ್ಕೃತಿ ಎಂದು ಬಸವ ಸಂಸ್ಕೃತಿಯನ್ನು ಕೊಂಡಾಡಿದರು.

ಬೈಲೂರಿನ ನಿಜಗುಣಾನಂದ ಶ್ರೀಗಳು ಮಾತನಾಡಿ, ಬಸವಣ್ಣನವರು ಈ ಭೂಮಿಗೆ ಬರುವ ಪೂರ್ವದಲ್ಲಿ ಸಂಸ್ಕೃತಿ ಹೇಗಿತ್ತು ಅಂದರೆ, ಉಳ್ಳವ ನಡೆದುಕೊಂಡು ಹೋಗುವಾಗ ಸಮಾಜದ ಕೆಳಸ್ತರದ ವ್ಯಕ್ತಿ ನಮಸ್ಕಾರ ಹೇಳಿದರೆ, ದೌಲತ್ತಿನ ಧ್ವನಿ ಬರುತ್ತಿತ್ತು.

ಅಂತಹ ಸಮಯದಲ್ಲಿ ಮಾನವ ವ್ಯಕ್ತಿತ್ವಕ್ಕೆ ಘನತೆ ತರುವ ದೃಷ್ಟಿಯಿಂದ ಶರಣು ಶರಣಾರ್ಥಿ ಸಂಸ್ಕೃತಿಯನ್ನು ಅಪ್ಪ ಬಸವಣ್ಣನವರು ತಂದರು.

ಮನುಷ್ಯರನ್ನು ದೇವಾಲಯದ ಒಳಗೆ ಬಿಟ್ಟುಕೊಳ್ಳದ ಸಂಧರ್ಭದಲ್ಲಿ ದೇಹವೇ ದೇವಾಲಯ ಎಂಬ ಸಂಸ್ಕೃತಿಯನ್ನು ತಂದರು. ಹೆಣ್ಣು ಮಕ್ಕಳಿಗೆ ಧಾರ್ಮಿಕ ಸ್ವಾತಂತ್ರ್ಯ ಇಲ್ಲದಿದ್ದಾಗ ಕೊರಳಿಗೆ ಲಿಂಗ ಕೊಟ್ಟು ಗಂಡ ಸತ್ತಾಗ ನೀನು ವಿಧವೆ ಅಲ್ಲ, ಶರಣೆ ಎನ್ನುವ ಸಂಸ್ಕೃತಿಯನ್ನು ಬಸವಾದಿ ಶರಣರು ಸಮಾಜಕ್ಕೆ ನೀಡಿದರು. ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ.

ಬೀದರನಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಸಾವಿರ ವರ್ಷಗಳ ಹಿಂದೆ ಪ್ರಭುತ್ವಕ್ಕೆ ಸೆಡ್ಡು ಹೊಡೆದು ಪ್ರಜಾಪ್ರಭುತ್ವ ಸಂಸ್ಕೃತಿಯನ್ನು ತಂದಂತಹ ಸಂಸ್ಕೃತಿ ಇದು. ಈ ಬಸವ ಸಂಸ್ಕೃತಿಯ ಬೇರು ಅಡಗಿರುವುದು ಬೀದರ ನೆಲದಲ್ಲಿ, ಈ ಕಾರ್ಯಕ್ರಮ ಆ ಬೇರಿಗೆ ನೀರೆರೆಯುವ ಕಾರ್ಯಕ್ರಮ.

ನಮ್ಮದು ಸನಾತನ ಧರ್ಮದ ಪರಂಪರೆಯ ಸಂಸ್ಕೃತಿಯಲ್ಲ, ಮಾನವ ವ್ಯಕ್ತಿತ್ವಕ್ಕೆ ಘನತೆಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ. ಅಕ್ಟೋಬರ್ 5ರ ಕಾರ್ಯಕ್ರಮಕ್ಕೆ ನಾವೂ ಇವತ್ತೇ ವಿಭೂತಿ ವಿಳ್ಳೆದೆಲೆ ಕೊಡ್ತೀವಿ, ತಾವೆಲ್ಲರೂ ತಪ್ಪದೆ ಬೆಂಗಳೂರಿನಲ್ಲಿ ಹಾಜರಾಗಬೇಕು ಎಂದು ಬೆಂಗಳೂರಿನ ಕಾರ್ಯಕ್ರಮಕ್ಕೆ ಬೀದರ ಜನತೆಗೆ ಆಹ್ವಾನವನ್ನು ನೀಡಿದರು.

ಹುಲಸೂರು ಡಾ. ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ನಾವೆಲ್ಲರೂ ಲಿಂಗಾಯತರಾಗಬೇಕಾದರೆ ಸ್ಥಾವರನ್ನು ಬಿಟ್ಟು ಅಂಗೈ ಒಳಗಿನ ಲಿಂಗವನ್ನು ಪೂಜಿಸಬೇಕು. ನಮ್ಮ ಇಷ್ಟಲಿಂಗದ ಜನಕ ಬಸವಣ್ಣ ಎಂಬುದನ್ನ ಅರಿತು ಲಿಂಗಾಯತರು ನಡೆಯಬೇಕು.

ಗ್ರಾಮೀಣ ಭಾಗದ ಜನರು ಬಸವಣ್ಣನವರ ತತ್ವಗಳನ್ನು ಬಿಟ್ಟು ಮೂಢನಂಬಿಕೆಯ ದಾಸರಾಗುತ್ತಿದ್ದಾರೆ, ಆದ್ದರಿಂದ ಲಿಂವಂತರು ಜಾಗೃತರಾಗಿ ಬಸವಣ್ಣನೇ ಧರ್ಮಗುರು ಎಂದು ನಡೆಯಬೇಕು ಎಂದರು.

ಬಸವ ಸಂಸ್ಕೃತಿ ಅಭಿಯಾನ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಜಗತ್ತಿಗೆ ಶ್ರೇಷ್ಠ ಸಂಸ್ಕೃತಿಯನ್ನು ಕೊಟ್ಟಂತಹ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿರುವುದು ಹೆಮ್ಮೆಯ ವಿಷಯ. ದಯವಿಲ್ಲದ ಧರ್ಮ ಯಾವುದಯ್ಯ ಎಂದು ಹೇಳುತ್ತಾ ಸಕಲ ಜೀವಾತ್ಮರ ಲೇಸನ್ನು ಬಯಸಿದ ಬಸವ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಗದುಗಿನ ತೋಂಟದಾರ್ಯ ಶ್ರೀಗಳು, ಭಾಲ್ಕಿಯ ನಾಡೋಜ ಬಸವಲಿಂಗ ಪಟ್ಟದೇವರು, ಬಸವಧರ್ಮ ಪೀಠದ ಡಾ. ಗಂಗಾದೇವಿ ಮಾತಾಜಿ ಸೇರಿದಂತೆ ಅನೇಕ ಗಣ್ಯರು, ಅಭಿಯಾನ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
Leave a comment

Leave a Reply

Your email address will not be published. Required fields are marked *