ಲಿಂಗಾಯತ ಪೂರ್ಣ ಅವೈದಿಕ, ವೀರಶೈವ ಅರ್ಧ ವೈದಿಕ: ನಿಡುಮಾಮಿಡಿ ಶ್ರೀ

ಕೂಡಲಸಂಗಮ

ವೀರಶೈವ-ಲಿಂಗಾಯತ ಸಿದ್ದಾಂತ ಒಂದೇ ಇದ್ದರೂ ಭಿನ್ನತೆಗೆ ಕಾರಣ ಲಿಂಗಾಯತ ಪೂರ್ಣ ಅವೈದಿಕ, ಪೂರ್ಣ ತಾಂತ್ರಿಕವಾಗಿದೆ, ವೀರಶೈವ ಅರ್ಧ ವೈದಿಕ, ಅರ್ಧ ತಾಂತ್ರಿಕವಾಗಿದೆ. ಬಸವಣ್ಣನ ಕಾಲದಲ್ಲಿಯೇ ವೈದಿಕ, ಅವೈದಿಕ ಸೈದ್ಧಾಂತಿಕ ಭಿನ್ನಾಭಿಪ್ರಾಯ ಆರಂಭವಾಯಿತು, ಎಂದು ಗೂಳೂರು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಆಚಾರ್ಯ ಪರಂಪರೆಯವರು ವೈದಿಕ ಸಿದ್ದಾಂತದಲ್ಲಿ ಸಿದ್ದರಾಮರನ್ನು ಬಸವಣ್ಣನಿಗೆ ಪರ್ಯಾಯವಾಗಿ ತಂದರು. ಶರಣರು ಅವೈದಿಕ ಸಿದ್ದಾಂತದಲ್ಲಿ ಬಸವಣ್ಣನ ನಾಯಕತ್ವದಲ್ಲಿ ಲಿಂಗಾಯತ ವಿಚಾರಧಾರೆ ಬೆಳೆಸಿದರು. ಬ್ರಾಹ್ಮಣ, ಜಂಗಮ ಅನ್ನುವುದು ತತ್ವ, ಜಾತಿ ಅಲ್ಲ. ಅನ್ಯಜಾತಿಯವರಲ್ಲಿ ಸಾಧನಾ ಪಥ ಕಡಿಮೆಯಾದ ಪರಿಣಾಮ ತತ್ವ, ಜಾತಿಯಾಯಿತು.

ಹುಟ್ಟಿನಿಂದ ಯಾರು ಶ್ರೇಷ್ಠ, ಕನಿಷ್ಠವಲ್ಲ, ಸಂಸ್ಕಾರ, ಅಧ್ಯಯನದಿಂದ ಶ್ರೇಷ್ಠ, ಕನಿಷ್ಠರಾಗಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆಗೆ ಬ್ರಾಹ್ಮಣರು, ಜಂಗಮರು ಕೊಡುಗೆ ಕೊಟ್ಟಿದ್ದಾರೆ. ಧರ್ಮ, ಸಮಾಜವನ್ನು ದ್ವೇಷ, ನಿಂದನೆ ಮಾಡದೇ ವಿಮರ್ಶೆ ಮಾಡಬೇಕು ಎಂದರು.

ಸೋಮವಾರ ಕೂಡಲಸಂಗಮದ ಸಂಗಮೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ನಡೆದ ಗುರುವಂದನಾ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಧರ್ಮ, ಸಮಾಜವನ್ನು ರಾಜಕಾರಣಿಗಳ ಕೈಯಲ್ಲಿ ಕೊಡಬಾರದು, ಮತಕ್ಕಾಗಿ ಕೆಲವು ರಾಜಕಾರಣಿಗಳು ಧರ್ಮ, ಸಮಾಜ ಒಡೆಯುವ ಕಾರ್ಯ ಮಾಡುವರು. ಲಿಂಗಾಯತ, ವೀರಶೈವ ಒಂದುಗೂಡಿ ನಡೆಯಬೇಕೆ ಅಥವಾ ಭಿನ್ನವಾಗಿ ಇರಬೇಕಾ ಎಂಬುದರ ಕುರಿತು ವಿವಿಧ ಸಮಾಜದ ಮುಖಂಡರು ಭವಿಷ್ಯದ ಮುಂದಾಲೋಚನೆ ಇಟ್ಟುಕೊಂಡು ಚರ್ಚೆ, ಚಿಂತನೆ ಮಾಡಿ ಅಂತಿಮ ತೀರ್ಮಾನ ಮಾಡಬೇಕು. ದ್ವೇಷ, ಅಸೂಹೆ, ಪ್ರತಿಕಾರಗಳಿಗೆ ಅವಕಾಶ ಇರಬಾರದು ಎಂದರು.

ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ. ಪಾಟೀಲ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಂಗಮರೇ ಸ್ವಾಮೀಜಿಗಳಾಗಬೇಕು ಎಂಬ ನಿಯಮವಿಲ್ಲ, ಅರ್ಹತೆ ಇದ್ದವರು ಜಂಗಮರಾಗಬಹುದು. ಜನ ಮೆಚ್ಚುವದಕ್ಕಿಂತ ಮನ ಮೆಚ್ಚವಂತಹ ಕಾರ್ಯಗಳನ್ನು ಮಾಡಬೇಕು. ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ವೈಚಾರಿಕ ಸ್ವಾಮೀಜಿಯಾಗಿದ್ದು, ದಲಿತರು, ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಿದ್ದಾರೆ. ಮಾನವ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಬಾಗಲಕೋಟೆ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ರಾಜಕೀಯ ನಿರಂತರವಲ್ಲ, ಗುರುಪೀಠ ಪರಂಪರೆ ನಿರಂತರ. ಹಂಡೆ ವಜೀರ ಸಮಾಜ ಗೂಳೂರು ನಿಡುಮಾಮಿಡಿ ಮಠಕ್ಕೂ ಅವಿನಾಭವ ಸಂಬಂಧ ಇದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಹಡಲಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಶರಣು ಪಾಟೀಲ, ಶಿಕ್ಷಕ ರಮೇಶ ಲಿಂಗದಳ್ಳಿ, ಕೂಡಲಸಂಗಮ ಗ್ರಾಮ ಪಂಚಾಯತ ಪಿಡಿಒ ಹಣಮಂತ ವಕ್ರ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಬಸವರಾಜ ಗೌಡರ ಅವರಿಗೆ ಶ್ರೀಗಳು ಸನ್ಮಾನಿಸಿ, ಸತ್ಕರಿಸಿದರು.

ಸಮಾರಂಭದಲ್ಲಿ ಮುಖಂಡರಾದ ಎಲ್.ಎಂ. ಪಾಟೀಲ, ಜಿ.ಎನ್.ಪಾಟೀಲ, ನೀಲಪ್ಪಗೌಡ ಗೌಡರ, ಶೇಖಪ್ಪ ದೇಶಿ, ಶೇಖರಗೌಡ ಗೌಡರ, ಗಿರೀಶಗೌಡ ಪಾಟೀಲ, ಶಿವಸಂಗಯ್ಯ ಹಿರೇಮಠ, ಕುಮಾರ ಕಳ್ಳಿಮಠ ಮುಂತಾದವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *