ಲಿಂಗಾಯತಕ್ಕೆ ಸವಾಲಾಗಿ ವೀರಶೈವ ಬೆಳೆಸಿದ ಪಂಚಾಚಾರ್ಯರು

ಕಲಬುರ್ಗಿ ಹುತಾತ್ಮರಾಗಿ 10 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಬಸವ ಮೀಡಿಯಾದಲ್ಲಿ ಪ್ರಕಟವಾಗುತ್ತಿರುವ ವಿಶೇಷ ಲೇಖನ.

ಧಾರವಾಡ

(ಬಸವಣ್ಣ ಸೃಷ್ಟಿಸಿದ ಅವೈದಿಕ ಲಿಂಗಾಯತ ಧರ್ಮದೊಳಗೆ ವೀರಶೈವರು ಸೇರಿಕೊಂಡರು. ಶರಣತತ್ವಕ್ಕೆ ಬಾಗಿದರೂ ತಮ್ಮ ಸಾಂಪ್ರದಾಯಿಕ ಆಚರಣೆಗಳಿಗೆ ಅಂಟಿಕೊಂಡು ಪಂಚಾಚಾರ್ಯ ಪೀಠಗಳನ್ನು ಕಟ್ಟಿ, ತಮ್ಮನ್ನು ಲಿಂಗಿ ಬ್ರಾಹ್ಮಣರೆಂದು ಕರೆದುಕೊಂಡು ಲಿಂಗಾಯತರಲ್ಲಿ ವೈದಿಕತೆ ಬಿತ್ತಿದರು.

ಈ ಬೆಳವಣಿಗೆಗಳನ್ನು ದಾಖಲಿಸಿದ ಡಾ ಎಂ ಎಂ ಕಲಬುರ್ಗಿಯವರ ಮಹತ್ವದ ಸಂಶೋಧನೆಯನ್ನು ಮಾರ್ಗ ಸಂಪುಟಗಳ ವಿವಿಧ ಲೇಖನಗಳಿಂದ ಆಯ್ದುಕೊಂಡು ಸರಳ ಕನ್ನಡದಲ್ಲಿ ವಿವರಿಸಲಾಗಿದೆ.)

ಬಸವ ತತ್ವಕ್ಕೆ ವೈದಿಕತೆ ಬೆರಕೆ

ಪ್ರಾಚೀನ ಕರ್ನಾಟಕದಲ್ಲಿ ಕಾಳಾಮುಖ, ಪಾಶುಪತ, ಮಹಾವ್ರತಿ, ಶುದ್ಧ ಶೈವ ಎಂಬ ಆಗಮ ಶೈವ ಪಂಥಗಳ ಅನುಯಾಯಿಗಳಿದ್ದರು. ಅವರು ಪ್ರಧಾನವಾಗಿ ಸ್ಥಾವರ ಲಿಂಗ ಪೂಜಿಸುತ್ತಿದ್ದರು. (ಶಾಸನ, ಕಾವ್ಯಗಳಲ್ಲಿ ಈ ನಾಲ್ಕು ಪ್ರಮುಖ ಶೈವ ಪಂಥಗಳು ಬೇರೆ ಹೆಸರುಗಳಿಂದಲೂ ಕಾಣಿಸಿಕೊಳ್ಳುತ್ತವೆ.)

ಅವರಲ್ಲಿ ಸೈದ್ಧಾಂತಿಕವಾಗಿ ಬಲಿಷ್ಠವಾಗಿದ್ದವರು ಶುದ್ಧ ಶೈವ ಬ್ರಾಹ್ಮಣರು. ಆಂಧ್ರದಲ್ಲಿ ಆರಾಧ್ಯರೆಂದು ಪ್ರಸಿದ್ದರಾಗಿ, ಹೋಮ, ವರ್ಣ, ಜಾತಿ, ಮಡಿ, ಗೋತ್ರಗಳಲ್ಲಿ ಮುಳುಗಿದ್ದರು.

ಬಸವಣ್ಣನವರ ಪ್ರಭಾವದಿಂದ ಈ ಶೈವ ಪಂಥಗಳು ಶರಣ ಚಳುವಳಿಯಲ್ಲಿ ಕರಗಿಹೋದವು. ಆದರೆ ಒಳಬಂದರೂ ಶುದ್ಧ ಶೈವರು ತಮ್ಮ ವೈದಿಕ ತತ್ವಗಳನ್ನು ಬಿಡದೆ ಪ್ರತ್ಯೇಕವಾಗಿ ಉಳಿದುಕೊಂಡರು.

ಬಸವ ತತ್ವಕ್ಕೆ ವೈದಿಕತೆ ಬೆರೆಸಿ ಅರ್ಧ ಲಿಂಗಾಯತ, ಅರ್ಧ ಬ್ರಾಹ್ಮಣರಾದರು. ತಮ್ಮ ಮಿಶ್ರಧರ್ಮವನ್ನು ಶರಣ ಸಮಾಜದ ಮೇಲೆ ಹೇರಲು ನಿರಂತರವಾಗಿ ಪ್ರಯತ್ನಿಸಿದರು.

ಇತರ ಶರಣರನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಜಂಗಮ ಜಾತಿ ಸೃಷ್ಟಿಸಿ ಗುರುಗಳಾದರು. ಸಂಸ್ಕೃತ ಪೋಷಿಸಿ, ಹೋಮ, ಹವನ, ವೇದ ಘೋಷಗಳಂತಹ ವೈದಿಕ ಆಚರಣೆಗಳನ್ನು ರೂಢಿಗೆ ತಂದರು.

ತಮ್ಮ ಮಿಶ್ರ ಧರ್ಮವನ್ನು ವೀರಶೈವವೆಂದು ಕರೆದು, ಲಿಂಗಾಯತ ಧರ್ಮಕ್ಕೆ ಸವಾಲಾಗಿ ಬೆಳೆಸಿದರು. ಅದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲು ಪಂಚಾಚಾರ್ಯ ಮಠಗಳನ್ನು ಕಟ್ಟಿದರು.

ವಿರಕ್ತರಿಗೆ ಸವಾಲಾಗಿ ಬಂದ ಪಂಚಾಚಾರ್ಯ ಮಠಗಳು

ಬಸವಣ್ಣನವರ ಕಾಲದಲ್ಲಿಯೇ ಅವರ ಅನೇಕ ತತ್ವಗಳನ್ನು ವಿರೋಧಿಸಿದ್ದ ಆಂಧ್ರದ ಆರಾಧ್ಯರು ಕಲ್ಯಾಣ ಕ್ರಾಂತಿಯ ನಂತರ ಲಿಂಗಾಯತ ಧರ್ಮ ಬೆಳೆಯಲು ಬಿಡದೆ ಅಡಚಣೆಯಾಗಿ ನಿಂತರು.

ಕ್ಷೀಣಿಸುತ್ತಿದ್ದ ಶರಣ ಧರ್ಮಕ್ಕೆ ಮತ್ತೆ ಜೀವ ಬಂದಿದ್ದು 16ನೆ ಶತಮಾನದಲ್ಲಿ. ಸಿದ್ದಲಿಂಗ ಯತಿಗಳು ಮತ್ತವರ 700 ವಿರಕ್ತ ಶಿಷ್ಯರು ನಿರಂತರವಾಗಿ ಸಂಚರಿಸಿ ಬಸವ ತತ್ವವನ್ನು ಪ್ರಚಾರ ಮಾಡಿದರು.

ಕ್ರಿ.ಶ.1570ರಲ್ಲಿ ಸಿದ್ದಲಿಂಗ ಯತಿಗಳು ಕಾಲವಾದ ಮೇಲೆ ಚಿತ್ರದುರ್ಗ, ಹರಪನಹಳ್ಳಿ ಮತ್ತು ಇಸಳೂರಿನಲ್ಲಿ ಮೂರು ಲಿಂಗಾಯತ ಮಠಗಳು ಅವರ ಶಿಷ್ಯವರ್ಗದಿಂದ ಸೃಷ್ಟಿಯಾದವು.

ವಿರಕ್ತರ ಈ ಸಂಘಟನೆ ಆರಾಧ್ಯರಿಗೆ ಸವಾಲಾಗಿ ಬಂದಿತು. ಜಾತಿ ಜಂಗಮರಾಗಿ ಗುರು ಸ್ಥಾನದಲ್ಲಿ ಅವರು ಕುಳಿತ್ತಿದ್ದರೆ, ಸಿದ್ದಲಿಂಗ ಯತಿಗಳು ಬಂದಿದ್ದು ಸಾಮಾನ್ಯ ಬಣಜಿಗ ಕುಟುಂಬದಿಂದ.

ಚುರುಕಾಗುತ್ತಿದ್ದ ಲಿಂಗಾಯತ ಧರ್ಮದಿಂದ ತಮ್ಮ ಮಿಶ್ರ ವೀರಶೈವ ಧರ್ಮವನ್ನು ಉಳಿಸಿಕೊಳ್ಳಲು ಮೊದಲು ಚತುರಾಚಾರ್ಯರನ್ನು ನಂತರ ಪಂಚಾಚಾರ್ಯರನ್ನು ಸೃಷ್ಟಿಸಿದರು.

ವಿರಕ್ತರು ಲಿಂಗಾಯತ ಮಠಗಳನ್ನು ಕಟ್ಟಿದ ಕಾಲದಲ್ಲಿಯೇ (17ನೇ ಶತಮಾನದ ಕೊನೆ) ಶ್ರೀಶೈಲ, ಉಜ್ಜನಿ, ಕೇದಾರ, ಬಾಳೆಹೊನ್ನೂರು, ಕಾಶಿಗಳಲ್ಲಿ ಪಂಚಾಚಾರ್ಯ ಮಠಗಳು ತಲೆಯೆತ್ತಿದವು.

ಸ್ಥಾವರ ಲಿಂಗದಿಂದ ‘ಉದ್ಭವಿಸಿದ’ ಪಂಚಾಚಾರ್ಯರು

ಬಸವಣ್ಣನವರ ಪ್ರಭಾವಕ್ಕೆ ಸಿಲುಕಿ ಕಾಳಾಮುಖ, ಪಾಶುಪತ, ಮಹಾವ್ರತ, ಶುದ್ಧ ಶೈವ ಪಂಥಗಳು ಶರಣ ಚಳುವಳಿಯಲ್ಲಿ ಲೀನವಾದರೂ ಅವುಗಳ ನೂರಾರು ಮಠಗಳು ಕ್ಷೀಣವಾಗಿ ಬದುಕುಳಿದಿದ್ದವು.

ಹಾಗೆಯೆ ನಾಥ ಪಂಥದ ಪ್ರಮುಖ ಗುರು ಸಿದ್ಧರಾಮರು ಬಸವಣ್ಣನವರ ಜೊತೆ ಕೈಜೋಡಿಸಿದ್ದರೂ ಅವರ ಹಿರಿಯರಾಗಿದ್ದ ರೇವಣಸಿದ್ಧರ ಭಕ್ತರು ಪ್ರತ್ಯೇಕವಾಗಿ ಉಳಿದುಕೊಂಡಿದ್ದರು.

ಈ ಪಂಥಗಳ ಮಠಗಳನ್ನು ವಶಪಡಿಸಿಕೊಂಡು ಆರಾಧ್ಯರು ಬಾಳೆಹೊನ್ನೂರು, ಕೇದಾರ. ಉಜ್ಜನಿ, ಶ್ರೀಶೈಲಗಳಲ್ಲಿ ಚತುರಾಚಾರ್ಯ ಮಠಗಳನ್ನು ಕಟ್ಟಿ ಬಸವ ಧರ್ಮಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಸಿದರು.

೧೭ನೇ ಶತಮಾನದಲ್ಲಿ ಕೆಳದಿ ಅರಸರ ನೆರವಿನಿಂದ ಕಾಶಿಯ ನಾಥ ಪಂಥದ ಮಠವೊಂದನ್ನು ಸೇರಿಸಿಕೊಂಡು ಚತುರಾಚಾರ್ಯರನ್ನು ಪಂಚಾಚಾರ್ಯರನ್ನಾಗಿ ಪರಿವರ್ತಿಸಿದರು.

ಒಳ ಬಂದ ಪಂಥಗಳ ಪ್ರಮುಖರು ಸ್ಥಾವರಲಿಂಗದಿಂದ ಉದ್ಭವಿಸಿದ ಪಂಚಾಚಾರ್ಯರೆಂದು ಹಬ್ಬಿಸಿ, ಅವರಿಗೆ ಹೊಸ ರೂಪ ನೀಡಿದರು. ಉದಾ: ರೇವಣಸಿದ್ಧರು ರೇಣುಕಾರಾಧ್ಯರಾದರು.

ಪಂಚಾಚಾರ್ಯ ಪರಂಪರೆಗೆ ಹೊಸದಾಗಿ ಸೇರಿಸಿಕೊಂಡ ಮಠಗಳಲ್ಲಿ ಜಾತಿಜಂಗಮರನ್ನು ಆಚಾರ್ಯರಾಗಿ ಕೂರಿಸಿ, ವ್ಯವಸ್ಥಿತವಾಗಿ ಶರಣರಲ್ಲಿ ವೀರಶೈವ ತತ್ವ ಬಿತ್ತಲು ಶುರುಮಾಡಿದರು.

ರಂಭಾಪುರಿಯನ್ನು ವಶಪಡಿಸಿಕೊಂಡ ಪಂಚಾಚಾರ್ಯರು

ರಂಭಾಪುರಿ ಪೀಠ ಮೂಲತಃ ನಾಥ ಪಂಥಕ್ಕೆ ಸೇರಿತ್ತು. 16ನೇ ಶತಮಾನಲ್ಲಿ ಪೀಠಕ್ಕೆ ಬಂದ ಚನ್ನ ಬಸವೇಶ್ವರರು ಬಸವ ಭಕ್ತರು. ಅವರ ನಂತರ ಈ ಪೀಠ ಪಂಚಾಚಾರ್ಯ ಪರಂಪರೆಗೆ ಸೇರಿಕೊಂಡಿತು.

ಇದನ್ನು ಸೇರಿಸಿಕೊಳ್ಳಲು ಆರಾಧ್ಯರು ಮತ್ತೊಬ್ಬ ನಾಥ ಗುರು ರೇವಣಸಿದ್ಧರನ್ನು ಬಳಸಿಕೊಂಡರು. ರೇವಣಸಿದ್ಧರು ಬಸವಣ್ಣನ ಸಮಕಾಲೀನರಾಗಿದ್ದರೂ ಶರಣ ಚಳುವಳಿ ಸೇರದೆ ಪ್ರತ್ಯೇಕವಾಗಿದ್ದರು.

ಆದರೆ 16ನೇ ಶತಮಾನದ ವೀರಶೈವ ಪುರಾಣಗಳಲ್ಲಿ ಅವರು ರೇಣುಕಾಚಾರ್ಯರಾಗಿ ಬದಲಾದರು. ಇಷ್ಟಲಿಂಗ ಹಿಡಿದು, ಸ್ಥಾವರ ಲಿಂಗದಿಂದ ಉದ್ಭವಿಸಿ ರಂಭಾಪುರಿ ಪೀಠದ ಆಚಾರ್ಯರಾದರು.

ವೀರಶೈವರ ಗ್ರಂಥ ಸಿದ್ಧಾಂತ ಶಿಖಾಮಣಿಯಲ್ಲಿ ಅವರು ಶರಣರ ಸಿದ್ದಾಂತವನ್ನು ಅಗಸ್ತ್ಯಮುನಿಗೆ ಬೋಧಿಸಿದರು ಎಂದು ಬಿಂಬಿಸಲಾಯಿತು. 12ನೇ ಶತಮಾನದಲ್ಲಿ ಬದುಕಿದ್ದ ಅವರ ಕಾಲ ಕೃತಯುಗಕ್ಕೆ ಬದಲಾಯಿತು.

ಪ್ರಮುಖ ನಾಥ ಗುರುವಾಗಿದ್ದ ರೇವಣಸಿದ್ಧರಿಗೆ ಅಪಾರ ಭಕ್ತರಿದ್ದರು. ಅವರ ಹೊಸ ಸ್ವರೂಪ, ಪುರಾಣಗಳ ಪ್ರಭಾವದಿಂದ ಅವರಲ್ಲಿ ಅನೇಕರು ಪಂಚಾಚಾರ್ಯರ ವ್ಯವಸ್ಥೆಯೊಳಗೆ ಬಂದರು.

ಮೂಲ ಪೀಠದ ಚನ್ನಬಸವೇಶ್ವರರು ತಮ್ಮ ಕೃತಿಗಳಲ್ಲಿ ನಾಥ ಪಂಥದ ಮುಕ್ತಿ ಮುನಿನಾಥರನ್ನು ತಮ್ಮ ಪುರಾತನರೆಂದು ಸ್ಮರಿಸುತ್ತಾರೆ. ತಪ್ಪಿಯೂ ರೇವಣಸಿದ್ಧರ ಹೆಸರನ್ನು ಎಲ್ಲಿಯೂ ಹೇಳಿಲ್ಲ.

ಪಂಚಾಚಾರ್ಯರಲ್ಲಿ ಶ್ರೇಷ್ಠರು ಯಾರು?

ಪಂಚಾಚಾರ್ಯ ಮಠಗಳನ್ನು ಸೃಷ್ಟಿಸಿದ್ದು ಶ್ರೀಶೈಲದ ಪೀಠದ ಪಂಡಿತಾರಾಧ್ಯರ ಭಕ್ತರಾಗಿದ್ದ ಆರಾಧ್ಯರು. ಎಲ್ಲಾ ಪೀಠಗಳು ಅವರ ಲಿಂಗಾಯತ-ವೈದಿಕ ಮಿಶ್ರ ಸಿದ್ದಾಂತವನ್ನು ಅನುಸರಿಸಿದವು.

ಮೂಲ ಆಚಾರ್ಯರ ಹೆಸರಿನಲ್ಲೇ ಆರಾಧ್ಯರ ಪ್ರಭಾವ ಕಾಣಿಸುತ್ತದೆ: ವಿಶ್ವಾರಾಧ್ಯ (ಕಾಶಿ), ರೇಣುಕಾರಾಧ್ಯ (ಬಾಳೆಹೊನ್ನೂರು), ಮರುಳಾರಾಧ್ಯ (ಉಜ್ಜನಿ), ಏಕೋರಾಮಾರಾಧ್ಯ (ಕೇದಾರ).

ಆದರೆ ಕೆಳದಿ ಅರಸರ ಕಾಲದಲ್ಲಿ ರಾಜಾಶ್ರಯದಿಂದ ಬಾಳೆಹೊನ್ನೂರಿನ ಪೀಠ ಬಲಿಷ್ಠವಾಯಿತು. ಅಲ್ಲಿ ಅನೇಕ ವೀರಶೈವ ಕೃತಿಗಳು ರಚನೆಯಾಗಿ ಪಂಚಾಚಾರ್ಯ ಪರಂಪರೆ ಸಬಲಗೊಂಡಿತು.

ಒಂದು ಮನಸ್ತಾಪದಿಂದ ಕೆಳದಿ ರಾಜರ ಕೃಪೆ ಇವರಿಂದ ಕಾಶಿ ಪೀಠಕ್ಕೆ ಕೆಡೆ ತಿರುಗಿದ್ದರಿಂದ ಅದರ ವರ್ಚಸ್ಸು ಹೆಚ್ಚಿತು. ಲಿಂಗಾಯತ ವಟುಗಳು ಶಿಕ್ಷಣಕ್ಕೆ ಕಾಶಿಗೆ ಹೋಗುವ ಅಭ್ಯಾಸವೂ ಬೆಳೆಯಿತು.

ಅಲ್ಲಿ ಅವರು ಕನ್ನಡಕ್ಕಿಂತ ಸಂಸ್ಕೃತ, ವಚನಗಳಿಗಿಂತ ವೈದಿಕ ಕೃತಿಗಳನ್ನು ಕಲಿತರು. ಅಲ್ಲಿಂದ ಹಿಂದಿರುಗಿ ಇಲ್ಲಿನ ಮಠಗಳಲ್ಲಿ, ಪಾಠ ಶಾಲೆಗಳಲ್ಲಿ ತಾವು ಕಲಿತಿದ್ದ ವೈದಿಕತೆಯನ್ನೇ ಕಲಿಸಿದರು.

ಉಜ್ಜನಿ ಪೀಠ ಕೆಲವು ಬಸವ ಪೂರ್ವ ಶೈವ ಪಂಥಗಳನ್ನು ಒಳಮಾಡಿಕೊಂಡರೂ, ರಾಜಾಶ್ರಯ ಕೊರತೆಯಿಂದ ಸೊರಗಿತು. ಕೇದಾರ ಪೀಠ ದೂರವಾಗಿದ್ದರಿಂದ ಬೆಳೆಯಲಾಗಲಿಲ್ಲ.

ಪಂಚಾಚಾರ್ಯರದು ವೈದಿಕ, ಜಾತೀಯತೆಯ ಸಂಪ್ರದಾಯ

ವೈದಿಕರಿಂದ ಸೃಷ್ಟಿಯಾದ ಪಂಚಾಚಾರ್ಯರು ತಮ್ಮ ಸಿದ್ಧಾಂತಕ್ಕೆ ನಿಷ್ಠರಾಗಿಯೇ ಉಳಿದರು. ಶಾಸನ, ಗ್ರಂಥಗಳಲ್ಲಿ ತಮ್ಮನ್ನು ಬ್ರಾಹ್ಮಣ, ಶಿವ ದ್ವಿಜ, ಲಿಂಗಿ ಬ್ರಾಹ್ಮಣರೆಂದು ಕರೆದುಕೊಳ್ಳುತ್ತಿದ್ದರು.

ಅವರಲ್ಲಿ ಮೊದಲು ಭಾರದ್ವಾಜ, ಕಶ್ಯಪ, ಆತ್ರೇಯಗಳಂತಹ ಬ್ರಾಹ್ಮಣ ಗೋತ್ರಗಳೇ ಕಾಣಿಸುತ್ತಿದ್ದವು. ನಂತರ ಅವು ನಂದಿ, ಭೃಂಗಿ, ವೀರ ಮುಂತಾದ ಗೋತ್ರಗಳಿಗೆ ಬದಲಾದವು.

ಪಂಚಾಚಾರ್ಯರ ಪೂರ್ವಜರದು ಜಾತಿಭೇದದ ಸಂಪ್ರದಾಯ. ಲಿಂಗಸಗೂರಿನ ಕರಡಿಕಲ್ಲು ಗ್ರಾಮದಲ್ಲಿ ಸಿಕ್ಕ ಬಸವಣ್ಣನವರಿಗಿಂತ ಸ್ವಲ್ಪ ಹಳೆಯ ಶಾಸನ ಇವರ ಜಾತೀಯತೆಗೆ ಸಾಕ್ಷಿ.

ಇದರಲ್ಲಿ ಸೂಕ್ಷ್ಮ ಶಿವನೆಂಬ ಶುದ್ಧ ಶೈವ ಆಚಾರ್ಯ ಅಂತ್ಯಜರ ಮದುವೆ ಮೆರವಣಿಗೆ ಗ್ರಾಮದ ಅಂಗಡಿ ಬೀದಿಯೊಳಗೆ ಬಂದರೆ ೧೨ ಗದ್ಯಾಣ ದಂಡ ವಿಧಿಸಬೇಕೆಂದು ಅಪ್ಪಣೆ ಮಾಡುತ್ತಾನೆ.

ಅವರು ಬ್ರಾಹ್ಮಣರಂತೆ ಜುಟ್ಟು, ಮುಂಜಿ ಆಚರಣೆಗಳನ್ನು ಇಟ್ಟುಕೊಂಡು ತಮ್ಮ ಭಕ್ತರಲ್ಲಿ ಹೋಮ, ಹವನ, ವೇದ ಘೋಷ, ಜಾತಿ, ವರ್ಣಗಳನ್ನು ಪಾಲಿಸುವ ಸಂಪ್ರದಾಯ ಬೆಳಸಿದರು.

ಅವರ ವೈಭವದ ವೇಷ, ಆಚರಣೆಗಳಿಗೆ, ಸಂಸ್ಕೃತ ಸಿದ್ದಾಂತಕ್ಕೆ ಮಾರುಹೋಗಿ ಲಿಂಗಾಯತರು ಅವರ ಭಕ್ತರಾಗಿ ತಮ್ಮ ವಚನಗಳನ್ನು, ಶರಣ ಸಂಸ್ಕೃತಿಯನ್ನು ಉಪೇಕ್ಷಿಸತೊಡಗಿದರು.

ಬಸವಣ್ಣನವರ ಪುರಾತನರು ಎನ್ನುವ ಕಟ್ಟುಕತೆ

ಪಂಚಾಚಾರ್ಯರು ತಾವು ಬಸವಣ್ಣನವರಿಗಿಂತ ಪ್ರಾಚೀನರು ಹಾಗೂ ಶ್ರೇಷ್ಠರು ಎಂದು ಹೇಳಿಕೊಳ್ಳುತ್ತಾರೆ. ಇವರ ಪ್ರಕಾರ ಬಸವಣ್ಣ ವೀರಶೈವ ಧರ್ಮದ ಒಬ್ಬ ಪ್ರಸಾರಕ ಮಾತ್ರ.

ಆದರೆ 16ನೇ ಶತಮಾನವರೆಗೆ ಎಲ್ಲೂ ಇವರ ಉಲ್ಲೇಖವಿಲ್ಲ. ಈಗಿರುವ ಐವರಲ್ಲಿ ನಾಲ್ಕು ಆಚಾರ್ಯರು ವೀರಶೈವಾಮೃತ ಮಹಾಪುರಾಣದಲ್ಲಿ (ಕ್ರಿ. ಶ. 1530) ಮೊದಲ ಬಾರಿ ಕಾಣಿಸಿಕೊಳ್ಳುತ್ತಾರೆ.

ಇವರು ಸ್ಥಾವರ ಲಿಂಗದಿಂದ ಉದ್ಭವಿಸುವುದು ಚತುರಾಚಾರ್ಯ ಪುರಾಣದಲ್ಲಿ (ಕ್ರಿ ಶ 1698). 17ನೇ ಶತಮಾನದಲ್ಲಿ ಕಾಶಿ ಪೀಠವನ್ನು ಸೇರಿಸಿಕೊಂಡು ಚತುರಾಚಾರ್ಯರು ಪಂಚಾಚಾರ್ಯರಾಗುತ್ತಾರೆ.

ಈ ಪರಂಪರೆ ಪುರಾಣದ ಅಗಸ್ತ್ಯನಷ್ಟು ಪ್ರಾಚೀನದು ಎನ್ನುವ ಸಿದ್ಧಾಂತ ಶಿಖಾಮಣಿ ರಚನೆಯಾಗಿದ್ದು 16ನೇ ಶತಮಾನದಲ್ಲಿ. ಅದರ ಕರ್ತೃ ಶಿವಯೋಗಿ ಶಿವಾಚಾರ್ಯ ಒಬ್ಬ ಕಾಲ್ಪನಿಕ ವ್ಯಕ್ತಿ.

ಶರಣರ ವಚನಗಳು ಸೇರಿದಂತೆ 16ನೇ ಶತಮಾನದವರೆಗೆ ಬರುವ ಯಾವ ಕೃತಿಯಲ್ಲೂ ಸಿದ್ಧಾಂತ ಶಿಖಾಮಣಿ ಅಥವಾ ಶಿವಯೋಗಿ ಶಿವಾಚಾರ್ಯನ ಪ್ರಸ್ತಾಪವೇ ಕಾಣಿಸುವುದಿಲ್ಲ.

12ನೇ ಶತಮಾನದ ಕೆಲ ವಚನಗಳು ಆಚಾರ್ಯರನ್ನು ಉಲ್ಲೇಖಿಸುತ್ತವೆ ಎನ್ನುವ ವಾದವಿದೆ. ಆದರೆ ಇವೆಲ್ಲ ನಂತರ ರಚನೆಯಾಗಿ, ಇವರಿಗೆ ಪ್ರಾಚೀನತೆ ಸೃಷ್ಟಿಸಲು ನಡೆದ ಕೃತಕ ಪ್ರಯತ್ನಗಳು.

ಪಂಚಾಚಾರ್ಯರಲ್ಲಿ ಕಾಣಿಸುವ ಗೊಂದಲಗಳು

ಪಂಚಾಚಾರ್ಯರ ಕೃತಕ ಪರಂಪರೆಯನ್ನು ಸೃಷ್ಟಿಸಿದ ವೀರಶೈವರ ಪ್ರಯತ್ನಗಳಲ್ಲಿ ಅನೇಕ ಗೊಂದಲಗಳಿವೆ. ಅವರ ಹೆಸರು, ಊರು, ಕಾಲ, ಚರಿತ್ರೆ ಯಾವುದರಲ್ಲೂ ಒಮ್ಮತವಿಲ್ಲ.

ಪಂಡಿತಾರಾಧ್ಯರು, ರೇವಣ ಸಿದ್ದರು ಬದುಕಿದ್ದು ೧೨ನೇ ಶತಮಾನದಲ್ಲಿ. ಆದರೆ ಮರುಳಸಿದ್ದರ ಮತ್ತು ಏಕೋರಾಮರ ಕಾಲ-ಚರಿತ್ರೆ ಅಸ್ಪ್ರಷ್ಠವಾಗಿದೆ. ವಿಶ್ವರಾಧ್ಯರ ಕಲ್ಪನೆ ಇನ್ನೂ ಗೊಂದಲಮಯ.

೧೨ನೇ ಶತಮಾನದ ಪ್ರಸಾದಿ ಭೋಗಣ್ಣನ ಎರಡು ವಚನಗಳು ಇವರ ಪ್ರಾಚೀನತೆಗೆ ಸಾಕ್ಷಿ ಎಂಬ ವಾದವಿದೆ. ಆದರೆ ಅವುಗಳಲ್ಲಿ ಮರುಳಸಿದ್ದ, ರೇವಣಸಿದ್ದರ ಹೆಸರುಗಳೇ ಇಲ್ಲ.

ಈ ಪರಂಪರೆಯ ಮುಂಚೂಣಿಯಲ್ಲಿ ಇದ್ದವರು ಆರಾಧ್ಯರು. ಆದರೆ ಚತುರಾಚಾರ್ಯ ಪುರಾಣದಲ್ಲಿ (ಕ್ರಿ ಶ 1498) ಅವರ ಗುರು ಪಂಡಿತಾರಾಧ್ಯರ ಬದಲು ಶಿವಲಂಕ ಮಂಚಣ್ಣರ ಹೆಸರಿದೆ.

ಪಂಚಾಚಾರ್ಯರು ಸ್ಥಾವರಲಿಂಗಗಳಿಂದ ಉದ್ಬವಿಸಿದರು ಎನ್ನುವುದು ಈ ಪರಂಪರೆಯ ಮುಖ್ಯ ನಂಬಿಕೆ. ಆದರೆ ಬೇರೆ ಬೇರೆ ಕೃತಿಗಳಲ್ಲಿ ಆಚಾರ್ಯರು ಬೇರೆ ಬೇರೆ ಲಿಂಗಗಳಿಂದ ಉದ್ಬವಿಸುತ್ತಾರೆ.

ಆಚಾರ್ಯರು ದೀಕ್ಷಾವಿಧಿಯಲ್ಲಿ ಬಳಸುವ ೫ ಕಳಸಗಳ ಪ್ರತಿನಿಧಿಗಳು. ಆದರೆ ಹರಿಹರ, ಪದ್ಮರಸ, ಲಕ್ಕಣ್ಣ ದಂಡೇಶ ಮುಂತಾದವರ ಕೃತಿಗಳಲ್ಲಿ ಈ ಕಳಸಗಳ ಹೆಸರು, ಕಾರ್ಯಾರ್ಥ, ಸಂಖ್ಯೆ ಕೂಡ ಬದಲಾಗುತ್ತವೆ.

ರಾಜಾಶ್ರಯ ಬಳಸಿಕೊಂಡು ಬೆಳೆದ ಪಂಚಪೀಠಗಳು

ಸಮ ಸಮಾಜ ಕಟ್ಟಲು ಹೊರಟ ಲಿಂಗಾಯತರು ರಾಜರ ವಿರೋಧದಿಂದ ನಲುಗಿದರು. ಆದರೆ ರಾಜಾಶ್ರಯ ಬಳಸಿಕೊಂಡು ವೀರಶೈವರು ಪಂಚಾಚಾರ್ಯ ಪೀಠಗಳನ್ನು ಕಟ್ಟಿ ಬೆಳೆಸಿದರು.

೧೪ನೇ ಶತಮಾನದಲ್ಲಿ ಕಾಕತೀಯರ ಪತನವಾಗುತ್ತಿದ್ದಂತೆ ಆರಾಧ್ಯರ ಒಂದು ತಂಡ ಆಂಧ್ರದಿಂದ ವಿಜಯನಗರಕ್ಕೆ ವಲಸೆ ಬಂದು, ತಮ್ಮ ವೀರಶೈವ ತತ್ವವನ್ನು ಪ್ರಸಾರ ಮಾಡಲು ಶುರು ಮಾಡಿದರು.

ವಚನಗಳಿಗೆ ಆಗಮ, ಸಂಸ್ಕೃತ ಶ್ಲೋಕ ಬೆರೆಸಿ ಶರಣ ಸಾಹಿತ್ಯವನ್ನು ವೀರಶೈವ ಸಾಹಿತ್ಯವನ್ನಾಗಿ ಪರಿವರ್ತಿಸಿದರು. ಹಂಪಿಯಲ್ಲಿ ನಡೆದಿದ್ದು ಲಿಂಗಾಯತದ ಪುನರುಜ್ಜೀವನವಲ್ಲ ವೀರಶೈವೀಕರಣ.

ಸಂಗಮ ವಂಶ ಪತನವಾಗುತ್ತಿದಂತೆ ಶಿವಗಂಗೆಯ ಬಳಿ ನೆಲೆಸಿದ್ದ ಇನ್ನೊಂದು ಆರಾಧ್ಯರ ತಂಡ ಸೇರಿಕೊಂಡರು. ಇಬ್ಬರೂ ಸೇರಿ ಅಲ್ಲಿ ಚತುರಾಚಾರ್ಯ ಪೀಠಗಳನ್ನು ಸೃಷ್ಟಿಸಿದರು.

ನಂತರ ಕೆಳದಿಯ ನಾಯಕರ ಆಶ್ರಯ ಬಯಸಿ ರಂಭಾಪುರಿ ಪೀಠ ಬಾಳೇಹಳ್ಳಿಗೆ ವಲಸೆ ಹೋಯಿತು. ಅವರ ಸಹಾಯದಿಂದ ಚತುರಾಚಾರ್ಯರು ಕಾಶಿ ಮಠವೊಂದನ್ನು ಸೇರಿಸಿಕೊಂಡು ಪಂಚಾಚಾರ್ಯರಾದರು.

ಕನ್ನಡದ ಅರಸರು ಸಮಾಜದಲ್ಲಿ ಸಮಾನತೆ, ವೈಚಾರಿಕತೆ ಬಿತ್ತುವ ಶರಣ ತತ್ವದಿಂದ ದೂರ ನಿಂತು, ವೈದಿಕತೆ ತುಂಬಿಕೊಂಡು ತಮ್ಮನ್ನು ಎಂದೂ ಪ್ರಶ್ನಿಸದ ವೀರಶೈವ ತತ್ವವನ್ನು ಪ್ರೋತ್ಸಾಹಿಸಿದರು.

ಆಚಾರ್ಯರು ವಚನಗಳನ್ನು, ಕನ್ನಡವನ್ನು ಅಲಕ್ಷಿಸಿದರು

ಆಚಾರ್ಯರು ವೀರಶೈವ ಸಿದ್ದಾಂತಕ್ಕೆ ಪ್ರತಿಷ್ಠತೆ, ಪ್ರಾಚೀನತೆ ಕಲ್ಪಿಸಲು ಶರಣ ಸಾಹಿತ್ಯವನ್ನು, ಸಂಸ್ಕೃತವನ್ನು ಬಳಸಿಕೊಂಡರು. ಅವರಿಗೆ ಸಂಸ್ಕೃತ ಪವಿತ್ರವಾಗಿ, ಕನ್ನಡ ಮೈಲಿಗೆಯಾಯಿತು.

ಲಿಂಗಾಯತ ಸಿದ್ದಾಂತಕ್ಕೆ ವೈದಿಕತೆ ಬೆರೆಸಿದಂತೆ, ಶರಣ ಸಾಹಿತ್ಯಕ್ಕೆ ಆಗಮ, ವೇದ, ಶಾಸ್ತ್ರಗಳನ್ನು ಜೋಡಿಸಿ, ಅವುಗಳೆಲ್ಲ ಪ್ರಾಚೀನ ವೈದಿಕ ಮೂಲದ್ದು ಎಂಬ ಅನುಮಾನ ಬರುವಂತೆ ಮಾಡಿದರು.

ಷಟ್ಸ್ಥಲ ಸಿದ್ದಾಂತವನ್ನು ಸಂಸ್ಕೃತಕ್ಕೆ ಅನುವಾದಿಸಿ ಆಗಮಗಳ ಜೊತೆ ಸೇರಿಸಿದರು. ವಚನಗಳಿಗೆ ಆಗಮ ಶ್ಲೋಕಗಳನ್ನು ಬೆರೆಸಿ, ತಮ್ಮ ಸಿದ್ದಾಂತಕ್ಕೆ ಹೊಂದುವಂತೆ ಅವುಗಳನ್ನು ಬದಲಿಸಿದರು.

13ನೇ ಶತಮಾನದಲ್ಲೇ ಶುರುವಾದ ಈ ಕಾರ್ಯ ಹಂಪಿ, ಕೆಳದಿಗಳಲ್ಲಿ ಭರದಿಂದ ಸಾಗಿತು. ವೈದಿಕರ ಪ್ರಭಾವದಲ್ಲಿದ್ದ ಕೆಳದಿ ರಾಜರ ಪ್ರೋತ್ಸಾಹದಿಂದ ಆಚಾರ್ಯರು ಸಂಸ್ಕೃತ ಪ್ರಧಾನ ಸಾಹಿತ್ಯ ನಿರ್ಮಿಸಿದರು.

ಆ ರಾಜ್ಯದಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ಸ್ವತಂತ್ರ ಕೃತಿಯೂ ಹುಟ್ಟಲಿಲ್ಲ. ಆ ಕಾಲದ ವಚನಕಾರರು ಶರಣ ಪರಂಪರೆಯಿಂದ ದೂರವಾಗಿ ವೈದಿಕ ನಿಷ್ಠ ವಚನಗಳನ್ನು ಬರೆದರು.

ಶರಣ ಚಳುವಳಿಯ ಕಾವು ಕಡಿಮೆಯಾಗಿ, ವೀರಶೈವ ಬೆಳೆದಂತೆ ಮಿಶ್ರ ಸಾಹಿತ್ಯವೂ ರಭಸದಿಂದ ಹೊಮ್ಮಿತು. ಕ್ರಮೇಣ ಆಚಾರ್ಯರು ವಚನಗಳನ್ನು ಬಿಟ್ಟು, ಆಗಮ, ವೇದಗಳನ್ನು ಲಿಂಗಾಯತರ ಮೇಲೆ ಹೇರಿದರು.

ಬಸವ ನಿಷ್ಠೆ ಕಳೆದುಕೊಂಡ ಪಂಚಾಚಾರ್ಯರು

ಪಂಚಾಚಾರ್ಯ ಪರಂಪರೆಯವರು ಮೊದಲು ಬಸವಣ್ಣನವರನ್ನು ಗೌರವಿಸುತ್ತಿದ್ದರು. ಆದರೆ ಅವರ ಲಿಂಗಾಯತ-ವೈದಿಕ ಮಿಶ್ರ ಧರ್ಮ, ವೀರಶೈವ, ಬೆಳೆದಂತೆ ಬಸವ ನಿಷ್ಠೆ ಕಡಿಮೆಯಾಯಿತು.

ಈ ಸಂಪ್ರದಾಯ ಸೃಷ್ಟಿಸಿದ ಆರಾಧ್ಯರ ಗುರು ಪಂಡಿತಾರಾಧ್ಯರು ಬಸವ ಭಕ್ತರು. ಕಲ್ಯಾಣಕ್ಕೆ ಬರುತ್ತಿದ್ದ ಅವರು ಬಸವಣ್ಣ ಲಿಂಗೈಕ್ಯರಾದ ಸುದ್ದಿ ಕೇಳಿ ದುಃಖದಿಂದ ಹಿಂತಿರುಗಿದರು.

೧೫ ಶತಮಾನದವರೆಗೆ ಬಂದ ನೀಲಕಂಠ ನಾಗನಾಥಾಚಾರ್ಯ, ಮಗ್ಗೆಯ ಮಾಯಿದೇವ, ಜಕ್ಕಣಾರ್ಯ ಮುಂತಾದ ಆಚಾರ್ಯರ ಧರ್ಮಗ್ರಂಥಗಳಲ್ಲಿ ಬಸವ ಭಕ್ತಿ, ಸ್ತುತಿ ಕಾಣಿಸುತ್ತದೆ.

ಆದರೆ ವಿಜಯನಗರ ಮತ್ತು ಕೆಳದಿಯ ರಾಜಾಶ್ರಯದಿಂದ ವೀರಶೈವ ಸಿದ್ದಾಂತ ಬೆಳೆದಂತೆ ಮತ್ತು ಪಂಚಾಚಾರ್ಯ ಪೀಠಗಳು ಸ್ಥಾಪನೆಯಾದಂತೆ ಈ ಪರಂಪರೆಯ ಬಸವ ನಿಷ್ಠೆ ಕುಸಿಯಿತು.

ಪಂಚಾಚಾರ್ಯರು ತಾವು ಬಸವಣ್ಣನವರ ಪುರಾತನರು, ಶ್ರೇಷ್ಠರು ಎಂದು ಬಿಂಬಿಸಲಾರಂಭಿಸಿದರು. ‘ಗುರು ಬಸವ ಲಿಂಗಾಯ ನಮಃ’ ಬದಲು ‘ಪಂಚಗುರುಭ್ಯೋನಮಃ’ ಸ್ತುತಿಯ ಬಳಕೆ ಬೆಳೆಯಿತು.

ಬಸವಣ್ಣ ತಿರಸ್ಕರಿಸಿದ್ದ ವೈದಿಕತೆ
ಲಿಂಗಾಯತರನ್ನು ಆವರಿಸಿಕೊಂಡಿತು

ಶುದ್ಧ ಶೈವ ಬ್ರಾಹ್ಮಣ ಕುಟುಂಬದಿಂದ ಬಂದರೂ ಬಸವಣ್ಣ ಜನಿವಾರ, ವೈದಿಕ ಆಚರಣೆಗಳನ್ನು ತಿರಸ್ಕರಿಸಿದರು. ಶರಣ ಚಳುವಳಿಯ ಮೂಲಕ ವೈಚಾರಿಕ, ಸಮ ಸಮಾಜ ಕಟ್ಟಲು ಹೋರಾಡಿದರು.

ಅವರ ಅನುಯಾಯಿಗಳಾಗಿ ನುಸುಳಿ ಬಂದ ಶೈವ ಬ್ರಾಹ್ಮಣ ಆರಾಧ್ಯರು ಶರಣ ತತ್ವಕ್ಕೆ ವೈದಿಕತೆ ಬೆರೆಸಿ ತಮ್ಮ ಮಿಶ್ರ ಧರ್ಮ ವೀರಶೈವವನ್ನು ಲಿಂಗಾಯತಕ್ಕೆ ಪರ್ಯಾಯವಾಗಿ ಬೆಳೆಸಿದರು.

ಅದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲು ಪಂಚಾಚಾರ್ಯರನ್ನು ಸೃಷ್ಟಿಸಿದರು. ವಚನಗಳಿಗೆ ಆಗಮ ಬೆರೆಸಿ, ಆಗಮಗಳಿಗೆ ಷಟ್ಸ್ಥಲ ಸಿದ್ದಾಂತ ಸೇರಿಸಿ, ಕನ್ನಡದ ಬದಲು ಸಂಸ್ಕೃತ ಪೋಷಿಸಿದರು.

ಲಿಂಗಾಯತ ವಟುಗಳು ಕಾಶಿಗೆ ಹೋಗಿ ಅಲ್ಲಿ ಸಂಸ್ಕೃತದ ವೈದಿಕ ಗ್ರಂಥಗಳಲ್ಲಿ ಪಂಡಿತರಾದರು. ಅಲ್ಲಿಂದ ಬಂದು ಇಲ್ಲಿನ ಮಠಗಳಲ್ಲಿ, ಪಾಠಶಾಲೆಗಳಲ್ಲಿ ತಾವು ಕಲಿತಿದ್ದನ್ನೇ ಬಿತ್ತಿದರು.

ಪಂಚಾಚಾರ್ಯರ ವೇಷ, ಆಚರಣೆ, ಸಂಸ್ಕೃತ ಭಾಷೆಗಳಿಗೆ ಮಾರುಹೋಗಿ ಲಿಂಗಾಯತರು ಬಸವ ಮಾರ್ಗದಿಂದ ದೂರವಾಗಿ ಜಾತಿ, ವರ್ಣ, ಕರ್ಮಾಚರಣೆಗಳನ್ನು ಮತ್ತೆ ಅಂಟಿಸಿಕೊಂಡರು.

ಬಸವಣ್ಣ ತಿರಸ್ಕರಿಸಿದ್ದ ವೈದಿಕ ಸಿದ್ದಾಂತ, ಆಚರಣೆಗಳು ಕಾಲಕ್ರಮೇಣ ಲಿಂಗಾಯತ ಸಮಾಜವನ್ನು ಮತ್ತೆ ಆವರಿಸಿಕೊಂಡವು. ಒಳಗೆ ಬಂದವರು ಇಡೀ ಸಮುದಾಯವನ್ನೇ ಹಿಡಿತಕ್ಕೆ ತೆಗೆದುಕೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
6 Comments
    • ಪಂಚಾಚಾರ್ಯರ ದ್ವಂದ್ವ ನೀತಿಯನ್ನು, ಅದು ಬೆಳೆದು ಬಂದ ಬಗೆಯನ್ನು ಅರಿಯಲು ಈ ಚಿಕ್ಕ ಚೊಕ್ಕ ಲೇಖನ ಅತ್ಯುತ್ತಮವಾಗಿದೆ.

  • ಇದೆಂತ ಅದ್ಬುತ ವಿಷಯ. ಮುಂದಿನ ಎರಡು ತಿಂಗಳು ಲಿಂಗಾಯತರು ಕಲಬುರಗಿ ಸರ್ ಅವರ ಚಿಂತನೆಯನ್ನು ಎಲ್ಲರಿಗೂ ಮುಟ್ಟಿಸಬೇಕು

    • ಲಿಂಗಾಯತ ಮತ್ತು ವೀರಶೈವ ಧರ್ಮಗಳ ಉಗಮ ಮತ್ತು ಆ ದೆಸೆಯಲ್ಲಿ ನಡೆದ ಘಟನೆಗಳ ಕುರಿತಾದ ಮಾಹಿತಿ ತಿಳಿಯಿತು. ಇಂದಿನ ಪ್ರಸ್ತುತ ದಿನದಲ್ಲಿ ಪಂಚ ಪೀಠಗಳು ಮತ್ತೆ ಬಸವಣ್ಣನ ಕುರಿತು ಮಾತನಾಡುವ ಹಂತಕ್ಕೆ ಬಂದಿದ್ದಾರೆ. ಇದಕ್ಕೆ ಮೊನ್ನೆ ದಾವಣಗೆರೆ ಪಂಚಾಚಾರ್ಯ ಮತ್ತು ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಕೇಳಿ ಬಂದ ಭಾಷಣ ತುಣುಕುಗಳು ಸಾಕ್ಷಿ.

  • ಬಹಳ ಅದ್ಭುತ ಸಂಗತಿ ಮತ್ತು ಅವರ (ಬಸವ ತತ್ವ) ದ ಮೇಲೆ ಆಚರಣೆಗಳನ್ನು ಹೇರಿದರು. ಅರಮನೆ, ಗುರುಮನೆಯವರೂ ವೃತ್ತಿ ,ಉದ್ಯೋಗಗಳನ್ನು ಜಾತಿಎನ್ನಾಗಿ ಮಾಡಿ, ಜನರನ್ನು ಒಡೆದು ಆಳುವ ವರ್ಗ, ಶ್ರಮಿಕ ವರ್ಗ, ಬಡವ, ಶ್ರೀಮಂತ ಎಂಬುದನ್ನು ಭೇದ ಭಾವನೆ ಮೂಡಿಸುವಲ್ಲಿ ಸಫಲ ವಾದರೂ. ಲಿಂಗ ತಾರತಮ್ಯ ಮಾತ್ರವಲ್ಲದೆ ಅನೇಕರಿಗೆ ದಿಕ್ಕು ತಪ್ಪಿಸಿ ಬದುಕುವ ಅವಕಾಶ ಹೆಚ್ಚಿಸಿಕೊಂಡರು. ಶೋಷಣೆ ರಹಿತ, ಸುಂದರ ಸಮಾಜ ನಿರ್ಮಾಣದ ಬಸವಣ್ಣನವರ ಕನಸು ನುಚ್ಚು ನೀರು ಮಾಡಿದರು.

Leave a Reply

Your email address will not be published. Required fields are marked *