ಮೊರಬಗಿ (ಮಹಾರಾಷ್ಟ್ರ)
ದುರಂತ ಸಾವಿಗೆ ಬಲಿಯಾದ ಐಟಿ ಕಂಪೆನಿ ಮಾಲೀಕ ಚಂದ್ರಮ್ ಏಗಪ್ಪಗೋಳ ಹಾಗೂ ಅವರ ಕುಟುಂಬಸ್ಥರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ಮಹಾರಾಷ್ಟ್ರದ ಜತ್ ತಾಲೂಕಿನ ಮೊರಬಗಿ ಗ್ರಾಮದಲ್ಲಿ ರವಿವಾರ ಬೆಳಿಗ್ಗೆ ನಡೆಯಿತು.
ಮೃತ ಚಂದ್ರಮ್ ಅವರ ಜಮೀನಿನಲ್ಲಿ ಲಿಂಗಾಯತ ಸಮಾಜದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಮೃತದೇಹಗಳಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿದ ಬಳಿಕ ಮೃತ ಚಂದ್ರಮ್ ಸಹೋದರ ಮಲ್ಲಿನಾಥ್ ಅಗ್ನಿಸ್ಪರ್ಶ ನೀಡಿ ಅಂತ್ಯಕ್ರಿಯೆ ನೆರವೇರಿಸಿದರು.
ವಚನ ಮೂರ್ತಿ ಅಣ್ಣಪ್ಪ ಜಗದೇವ, ಜಮಖಂಡಿ, ಅವರು ಅಪಘಾತದಲ್ಲಿ ಮಡಿದು ಪೋಸ್ಟ್ ಮಾರ್ಟಮ್ ಆಗುವ ಲಿಂಗಾಯತರಿಗೂ ಅಗ್ನಿಸ್ಪರ್ಷದ ಮೂಲಕವೇ ಅಂತಿಮ ಸಂಸ್ಕಾರ ನಡೆಸಲಾಗುವುದೆಂದು ಹೇಳಿದರು.
ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಶನಿವಾರ ನಡೆದ ದುರಂತದಲ್ಲಿ ಹೊಸ ಕಾರಿನ ಮೇಲೆ ಕಂಟೇನರ್ ಉರುಳಿ ಬಿದ್ದಾಗ ಚಂದ್ರಮ್ ಏಗಪ್ಪಗೋಳ (48), ಗೌರಬಾಯಿ(42), ಜ್ಞಾನ್, (16) ದೀಕ್ಷಾ(12), ವಿಜಯಲಕ್ಷೀ(36) ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ವಲಯ ಐಜಿಪಿ ಲಾಬೂ ರಾಮ್ ಮಾತನಾಡಿ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸಲು ಪೊಲೀಸ್ ಇಲಾಖೆ ವಿಶೇಷ ತನಿಖಾಧಿಕಾರಿಯಾಗಿ ನೆಲಮಂಗಲ ಉಪವಿಭಾಗದ ಉಪ ಅಧೀಕ್ಷಕ ಜಗದೀಶ್ ಅವರನ್ನು ನೇಮಕ ಮಾಡಿಲಾಗಿದೆ.
ನೆನ್ನೆ ಬೆಳಿಗ್ಗೆ ಮೊರಬಗಿ ಗ್ರಾಮಕ್ಕೆ ಮೃತದೇಹಗಳು ರವಾನೆಯಾಗಿವೆ. ಮೂರು ಅಂಬುಲೆನ್ಸ್ ಮೂಲಕ ಆರು ಮೃತದೇಹಗಳನ್ನು ಕರೆತರಲಾಗಿತ್ತು. ಮೃತದೇಹಗಳನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಮೃತಪಟ್ಟವರ ಅಂತಿಮ ದರ್ಶನ ಪಡೆಯಲು ಬಂದಿದ್ದು ಕಣ್ಣೀರು ಹಾಕಿದ್ದಾರೆ.

ಚಂದ್ರಮ್ ಅವರು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಬಳಿಯಿರುವ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಉದ್ಯಮವನ್ನು 2018ರಲ್ಲಿ ಆರಂಭಿಸಿ 50 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದರು. ಚಂದ್ರಮ್ ಅವರೆ ಎಂಡಿ, ಸಿಇಒ ಆಗಿದ್ದರು.
ಬೆಳ್ಳಂದೂರಿನ ಸ್ವಂತ ಮನೆಯಲ್ಲಿ ಚಂದ್ರಮ್ ಅವರು ನೆಲಸಿದ್ದರು. ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಮೊರಬಗಿ ಗ್ರಾಮದಲ್ಲಿ ವಯಸ್ಸಾದ ತಂದೆ ಹಾಗೂ ತಾಯಿ ಇದ್ದರು. ಕೆಲವು ದಿನಗಳಿಂದ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಮಕ್ಕಳಿಗೂ ಕ್ರಿಸ್‌ಮಸ್ ರಜೆಯಿದ್ದ ಕಾರಣಕ್ಕೆ ಪೋಷಕರನ್ನು ನೋಡಲು ಕುಟುಂಬಸ್ಥರ ಜತೆಗೆ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು.
ಬಡತನದಲ್ಲಿ, ಸರಕಾರಿ ಶಾಲೆಯಲ್ಲಿ ಓದಿ ಚಂದ್ರಮ್ ಮೇಲೆ ಬಂದಿದ್ದರು ಎಂದು ಅವರ ಸ್ನೇಹಿತ ಸಂಜಯ ಪಾಟೀಲ್ ಮಾಧ್ಯಮಗಳಿಗೆ ಹೇಳಿದರು.

ಮಹಾರಾಷ್ಟ್ರದಲ್ಲಿದ್ದರೂ ಅಪ್ಪಟ್ಟ ಕನ್ನಡಿಗರಾಗಿ ಬದುಕಿದರು. ಬಸವಣ್ಣನವರ ಮೇಲೆ ಅಪಾರ ಅಭಿಮಾನ. ಎಲ್ಲರೊಂದಿಗೂ ಸೌಜನ್ಯದಿಂದ ವರ್ತಿಸುತ್ತಿದ್ದರು. ದೊಡ್ಡ ದುರಂತ ಇದು.