ವೇದಗಳು ಬಹುದೇವತಾ ಪೂಜೆ, ಯಜ್ಞ, ಪ್ರಾಣಿ ಬಲಿಗಳನ್ನು ಅನುಮೋದಿಸುತ್ತವೆ. ಆದರೆ ಏಕದೇವೋಪಾಸಕರು, ಅಹಿಂಸಾವಾದಿಗಳು, ವೈಚಾರಿಕರು ಆದ ಲಿಂಗಾಯತರು ಇವುಗಳನ್ನು ತಿರಸ್ಕರಿಸುತ್ತಾರೆ.
ಲಿಂಗಾಯತರಿಗೆ ಲಿಂಗವನಲ್ಲದೆ (ಶಿವ) ಬೇರೆ ಯಾರನ್ನೂ ಪೂಜಿಸಬಾರದೆಂದು ನಿಷೇಧವಿದೆ. ಅವರಿಗೆ ಪಾರ್ವತಿ, ಗಣಪತಿ, ವೀರಭದ್ರ , ಕುಮಾರ ಮುಂತಾದವರ ಪೂಜೆಯೂ ನಿಷಿದ್ಧ.
ಲಿಂಗಾಯತರ ಶಿವನೆಂದರೆ ಕೈಲಾಸವಾಸಿ, ನಂದಿವಾಹನವಿರುವ, ರುಂಡ ಮಾಲಾಧಾರಿ ಶಿವನಲ್ಲ. ಅವನು ನಿರಾಕಾರ ಶಿವ. ಈ ಲೋಕವನ್ನು ಆವರಿಸಿಕೊಂಡಿರುವ ಚೈತನ್ಯಮಯ ಮಹಾಲಿಂಗ.
ಸಮುದ್ರದಲ್ಲಿನ ಅಲೆಗಳಂತೆ ಮಹಾಲಿಂಗ ಚೇತನದಲ್ಲಿ ಲಿಂಗ ಕಣಗಳು ನಿರಂತರವಾಗಿ ಹುಟ್ಟಿ ಲೀನವಾಗುತ್ತವೆ. ಅಂಗ ಅಥವಾ ಮನುಷ್ಯರೂಪವೂ ಈ ಲಿಂಗಕಣಗಳ ಒಂದು ಸ್ವರೂಪ.
ಲಿಂಗಾಯತರ ಷಟಸ್ಥಲ, ಗುರು ಲಿಂಗ ಜಂಗಮ ತತ್ವಗಳಲ್ಲಿ ಅಂಗ ವಿಕಾಸವಾಗುತ್ತಾ ಲಿಂಗದೊಂದಿಗೆ ಸಮರಸವಾಗುತ್ತದೆ. ಇನ್ನೂ ಮುಂದುವರೆದು ಸಮಾಜಕ್ಕಾಗಿ ಬದುಕುವ ಜಂಗಮವಾಗುತ್ತದೆ,
ಬಹುದೇವತಾ ಆಚರಣೆಗೂ ಜಾತಿಗೊಂದು ದೇವರಿರುವ ವ್ಯವಸ್ಥೆಗೂ ಹತ್ತಿರದ ಸಂಬಂಧವಿದೆ, ಲಿಂಗಾಯತರು ಬಹುದೇವತಾ ಆಚರಣೆಯ ಜತೆಗೆ ಜಾತಿ ಪದ್ದತಿಯನ್ನೂ ತಿರಸ್ಕರಿಸಿದರು.
(ಮಾರ್ಗ ೭ರ ಲಿಂಗಾಯತ ಧರ್ಮದ ಮೇಲಿನ ವಿವಿಧ ಲೇಖನಗಳಿಂದ ಆಯ್ದುಕೊಳ್ಳಲಾಗಿದೆ.)