ಲಿಂಗಾಯತ ಅಸ್ಮಿತೆಯ ಮೇಲೆ ಯುದ್ಧ ಸಾರಿರುವ ಹಿಂದುತ್ವವಾದಿಗಳು

ಬಸವಣ್ಣನವರ ಹೆಸರು ಬಳಸಿಕೊಂಡು ಬಸವತತ್ವ ಅಳಿಸುವ ಪ್ರಯತ್ನ ನಡೆಯುತ್ತಿದೆ

ಬೆಂಗಳೂರು

ಇಂದಿನ ಕರ್ನಾಟಕದ ಸಾಮಾಜಿಕ–ಬೌದ್ಧಿಕ ವಲಯದಲ್ಲಿ ಬಸವಣ್ಣನವರ ಹೆಸರನ್ನು ಎಲ್ಲರೂ ಉಚ್ಚರಿಸುತ್ತಿದ್ದಾರೆ. ಆದರೆ ಇಂದು ಅವರ ತತ್ವವನ್ನು ಉಳಿಸುತ್ತಿರುವವರು ಯಾರು? ಮತ್ತು ಅವರ ಹೆಸರಿನ ನೆರಳಿನಲ್ಲಿ ನಡೆಯುತ್ತಿರುವುದೇನು?

ಈ ಪ್ರಶ್ನೆಗಳು ಕೇವಲ ಭಾವನಾತ್ಮಕವಲ್ಲ; ಇವು ನಮ್ಮ ಇತಿಹಾಸ, ಅಸ್ಮಿತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಷಯಗಳನ್ನೇ ಪೇಲವಗೊಳಿಸುವ ಯತ್ನಗಳಾಗುತ್ತಿವೆಯೇ ಎಂಬ ಆತಂಕ ಮೂಡುತ್ತಿದೆ.

ಬಸವಣ್ಣನವರು 12ನೇ ಶತಮಾನದಲ್ಲಿ ಹುಟ್ಟುಹಾಕಿದ ಚಳುವಳಿ, ಸಾಮಾನ್ಯ ಭಕ್ತಿ ಚಳುವಳಿ ಅಲ್ಲ. ಅದು ಒಂದು ಮಹಾ ಸಾಮಾಜಿಕ ಕ್ರಾಂತಿ. ಆ ಕ್ರಾಂತಿ ವೇದಾಧಾರಿತ ಧಾರ್ಮಿಕ ವ್ಯವಸ್ಥೆಯನ್ನು ಪ್ರಶ್ನಿಸಿತು; ವರ್ಣ ವ್ಯವಸ್ಥೆಯನ್ನು ತಿರಸ್ಕರಿಸಿತು; ಮಧ್ಯವರ್ತಿಗಳ ಆಧಾರಿತ ದೇವಾರಾಧನೆಯನ್ನು ನಿರಾಕರಿಸಿತು.

“ಕಾಯಕವೇ ಕೈಲಾಸ” ಮತ್ತು “ದಾಸೋಹವೇ ಧರ್ಮ” ಎಂಬ ತತ್ವಗಳು ಮಾನವೀಯತೆ ಮತ್ತು ಸಮಾನತೆಯ ಘೋಷಣೆಗಳಾಗಿ ಪರಿಣಮಿಸಿದ್ದವು. ಆದರೆ ಇಂದು, ಬಸವಣ್ಣನವರನ್ನು ನಿಧಾನವಾಗಿ, ಯೋಜಿತ ರೀತಿಯಲ್ಲಿ, ಬೇರೆ ಚೌಕಟ್ಟಿನೊಳಗೆ ಸೆರೆಯಾಗಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.

ಅವರನ್ನು ಶೈವಧರ್ಮದ ಒಂದು ಉಪಪಂಥದ ನಾಯಕನನ್ನಾಗಿಯೋ ಇಲ್ಲವೇ ಹಿಂದು ಧರ್ಮದ ಸುಧಾರಕನಾಗಿ, ಅಥವಾ ಭಕ್ತಿಚಳುವಳಿಯ ಒಂದು ಭಾಗವಾಗಿ ಮರು ವ್ಯಾಖ್ಯಾನ ಮಾಡಲಾಗುತ್ತಿದೆ. ಇದು ಸರಳ ಶೈಕ್ಷಣಿಕ ಭಿನ್ನಾಭಿಪ್ರಾಯವಲ್ಲ; ಇದು ಲಿಂಗಾಯತ ತತ್ವದ ಮೂಲ ಸ್ವರೂಪವನ್ನೇ ಬದಲಿಸುವ ಪ್ರಯತ್ನವೆಂದೇ ಹೇಳಬಹುದು!

ವಿಕೃತಿ ಹೇಗೆ ನಡೆಯುತ್ತಿದೆ?

ಮೊದಲನೆಯದಾಗಿ, “ವೀರಶೈವ–ಲಿಂಗಾಯತ” ಎಂಬ ಸಂಯೋಜಿತ ಪದಬಳಕೆ ಎಂದಿಗಿಂತ ಇಂದು ಹೆಚ್ಚುತ್ತಿದೆ. ಇದು ಐಕ್ಯತೆಯ ಹೆಸರಿನಲ್ಲಿ ನಡೆಯುತ್ತಿರುವ ಲಿಂಗಾಯತ ಅಸ್ಮಿತೆಯ ನಿಧಾನ ಕರಗಿಸುವಿಕೆಯ ಯತ್ನವೇ ಹೌದು. ಲಿಂಗಾಯತ ಧರ್ಮವು ಸ್ವತಂತ್ರ ತತ್ವಶಾಸ್ತ್ರ, ಆಚರಣೆ ಮತ್ತು ಧಾರ್ಮಿಕ ದೃಷ್ಟಿಕೋನ ಹೊಂದಿರುವ ಒಂದು ಅಭೂತಪೂರ್ವ ವ್ಯವಸ್ಥೆ. ಅದನ್ನು ಇನ್ನೊಂದು ಪರಂಪರೆಯೊಳಗೆ ವಿಲೀನಗೊಳಿಸುವುದು ಅದರ ವೈಶಿಷ್ಟ್ಯವನ್ನು ಅಳಿಸುವುದೇ ಆಗುತ್ತದೆ.

ಎರಡನೆಯದಾಗಿ, ವಚನ ಸಾಹಿತ್ಯದ ಬಗ್ಗೆ ತಪ್ಪು ಅಭಿಪ್ರಾಯ ಹರಡುವ ಯತ್ನ ಕಾಣಿಸುತ್ತಿದೆ. ವಚನಗಳನ್ನು ಉಪನಿಷತ್ತುಗಳ ಕನ್ನಡ ಅನುವಾದವೆಂದು ಹೇಳುವುದು, ಶರಣರ ಚಿಂತನೆಗೆ ಇರುವ ಸ್ವತಂತ್ರ ಲಕ್ಷಣಗಳನ್ನು ನಿರಾಕರಿಸುವ ಯತ್ನವೇ ಹೌದು. ವಚನಗಳು ಜೀವಂತ ಅನುಭವದ ಭಾಷೆ; ಅವು ಶಾಸ್ತ್ರದ ಪುನರುಚ್ಚಾರವಲ್ಲ.

ಮೂರನೆಯದಾಗಿ, “ಅನುಭವ ಮಂಟಪ ಇರಲಿಲ್ಲ” ಎಂಬಂತಹ ವಾದಗಳನ್ನು ಕೆಲವೊಮ್ಮೆ ಮುಂದಿಡಲಾಗುತ್ತಿವೆ. ಇದು ಕೇವಲ ಇತಿಹಾಸದ ವಿವಾದವಲ್ಲ; ಇದು ಶರಣರ ಸಮಾನತಾಧಾರಿತ ಚರ್ಚಾ ಪರಂಪರೆಯನ್ನು ನಿರಾಕರಿಸುವ ಪ್ರಯತ್ನ.

ಈ ಪ್ರಕ್ರಿಯೆಯ ಹಿಂದಿನ ಉದ್ದೇಶ ಲಿಂಗಾಯತ ಧರ್ಮದ ಮೂಲ ತತ್ವಗಳು—ವರ್ಣ ವಿರೋಧ, ಶಾಸ್ತ್ರಾಧಾರಿತ ಅಸಮಾನತೆ ವಿರೋಧ, ದೇವಾಲಯ ಕೇಂದ್ರಿತ ಧಾರ್ಮಿಕ ವ್ಯವಸ್ಥೆಗೆ ಪ್ರಶ್ನೆ—ಇವೆಲ್ಲವೂ ಸಹ ಪ್ರಬಲ ಧಾರ್ಮಿಕ–ಸಾಮಾಜಿಕ ವ್ಯವಸ್ಥೆಗಳೊಂದಿಗೆ ಸಂಘರ್ಷಗೊಳ್ಳುತ್ತವೆ.

ಈ ಸಂಘರ್ಷವನ್ನು ನೇರವಾಗಿ ಎದುರಿಸಲು ಸಾಧ್ಯವಾಗದಾಗ, ಅದನ್ನು ಒಳಗೊಳ್ಳುವ ತಂತ್ರ ಬಳಸಲಾಗುತ್ತಿದೆ.

ಅದೇ ಕಾರಣಕ್ಕೆ ಬಸವಣ್ಣನವರನ್ನು ಪ್ರಶ್ನಿಸುವ ಕ್ರಾಂತಿಕಾರಿಯನ್ನಾಗಿ ಅಲ್ಲ, “ಪರಂಪರೆಯೊಳಗಿನ ಸುಧಾರಕ”ನಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಅವರ ತತ್ವದ ತೀಕ್ಷ್ಣತೆಯನ್ನು ಕುಗ್ಗಿಸಲಾಗುತ್ತಿದೆ ಮಾತ್ರವಲ್ಲ ಬಸವಾದಿ ಶರಣರ ಸಂದೇಶಗಳ ಮೂಲಭೂತ ಅರ್ಥಗಳನ್ನೇ ಮುಸುಕು ಮಾಡಲು ನಿರಂತರವಾಗಿ ಯತ್ನಿಸಲಾಗುತ್ತಿದೆ.

ಭಾರತೀಯ ಸಂವಿಧಾನದ Article 25 ಪ್ರತಿ ವ್ಯಕ್ತಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಇದು ಕೇವಲ ಆಚರಣೆಯ ಹಕ್ಕು ಮಾತ್ರವಲ್ಲ; ತನ್ನ ಧರ್ಮದ ಸ್ವರೂಪವನ್ನು ನಿರ್ಧರಿಸುವ ಹಕ್ಕು ಕೂಡ. ಒಂದು ಸಮುದಾಯದ ಧಾರ್ಮಿಕ ಗುರುತನ್ನು ವಿಕೃತಗೊಳಿಸುವುದು, ಆ ಹಕ್ಕಿನ ಮೇಲೆ ಅಪ್ರತ್ಯಕ್ಷ ಹಸ್ತಕ್ಷೇಪವಾಗುತ್ತದೆ.
ಇದಲ್ಲದೆ, ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕೃತ್ಯಗಳು ಭಾರತೀಯ ದಂಡ ಸಂಹಿತೆಯಡಿ ಪ್ರಶ್ನಾರ್ಹವಾಗುತ್ತವೆ ಕೂಡಾ. ಆದ್ದರಿಂದ, ಬಸವಣ್ಣನವರ ತತ್ವವನ್ನು ಮರುಬರೆಯುವ ಯಾವುದೇ ಪ್ರಯತ್ನವನ್ನು ಕೇವಲ ಬೌದ್ಧಿಕ ಚರ್ಚೆಯಾಗಿ ನೋಡಲು ಸಾಧ್ಯವಿಲ್ಲ; ಅದು ಸಾಮಾಜಿಕ ಪರಿಣಾಮಗಳನ್ನುಂಟುಮಾಡುವ ಪ್ರಕ್ರಿಯೆಯಾಗಿದೆ.

ಲಿಂಗಾಯತ ಸಮಾಜದ ಹೊಣೆಗಾರಿಕೆ

ಈ ಸಂದರ್ಭದಲ್ಲಿ ಪ್ರಮುಖ ಪ್ರಶ್ನೆ— ಲಿಂಗಾಯತರು ಹಾಗೂ ಬಸವ ತತ್ವ ಒಪ್ಪುವವರು ಮೌನವಾಗಿರಬೇಕೇ? ಅಥವಾ ಇತಿಹಾಸ ಮತ್ತು ತತ್ವದ ರಕ್ಷಣೆಗೆ ನಿಲ್ಲಬೇಕೇ?

ಮೌನವು ಇಲ್ಲಿ ತಟಸ್ಥವಾಗುಳಿದರೆ; ಅದು ವಿಕೃತಿಗೆ ಸಹಕಾರ.

ಬಸವಣ್ಣನವರ ತತ್ವವು ಮಾನವೀಯತೆ, ಸಮಾನತೆ ಮತ್ತು ಆತ್ಮಗೌರವದ ಮೇಲೆ ನಿಂತಿದೆ. ಅದನ್ನು ಮಸುಕಾಗಿಸಲು ಬಿಡುವುದು, ಆ ಮೌಲ್ಯಗಳನ್ನು ಕಳೆದುಕೊಳ್ಳುವುದೇ ಆಗುತ್ತದೆ.

ಇಂತಹ ಸಂಕೋಲೆಗಳಿಂದ ಬಸವಣ್ಣನವರನ್ನು ಅವರ ತತ್ವಗಳನ್ನು
ಮುಕ್ತಗೊಳಿಸಬೇಕಾದ ವರು ಯಾರು? ಬಸವಣ್ಣನವರು ಯಾರೊಬ್ಬರ ಆಸ್ತಿಯೂ ಅಲ್ಲ. ಅವರನ್ನು ಯಾವುದೇ ಒಂದು ಧಾರ್ಮಿಕ ಅಥವಾ ರಾಜಕೀಯ ಚೌಕಟ್ಟಿನಲ್ಲಿ ಸೀಮಿತಗೊಳಿಸಲು ಬರುವುದಿಲ್ಲ. ಬಸವ ತತ್ವ ಅಂದರೇನೇ ಅದೊಂದು ವಿಶಿಷ್ಠವಾದ ಅತ್ಯಮೂಲ್ಯ ಚಿಂತನೆ… ದಾರ್ಶನಿಕ ಪರಂಪರೆ. ಅದೊಂದು ಸಾಮಾಜಿಕ ಚಳುವಳಿ.

ಆದ್ದರಿಂದ, ಬಸವಾದಿ ಶರಣರನ್ನು “ರಕ್ಷಿಸುವುದು” ಎಂದರೆ ಕೇವಲ ಅವರನ್ನು ಗೌರವಿಸುವುದಷ್ಟೇ ಅಲ್ಲ; ಅವರ ತತ್ವವನ್ನು ಅದರ ಮೂಲಸ್ವರೂಪದಲ್ಲಿ ಅರ್ಥಮಾಡಿಕೊಳ್ಳುವುದು ಮತ್ತು ವಿಕೃತಿಗಳ ವಿರುದ್ಧ ನಿಲ್ಲುವುದು.

ಇದು ಕೇವಲ ಲಿಂಗಾಯತ ಸಮುದಾಯದ ಪ್ರಶ್ನೆಯಲ್ಲ. ಇದು ಇತಿಹಾಸವನ್ನು ಯಾರು ಬರೆಯುತ್ತಾರೆ, ತತ್ವಗಳನ್ನು ಯಾರು ನಿರ್ಧರಿಸುತ್ತಾರೆ, ಮತ್ತು ಧಾರ್ಮಿಕ ಸ್ವಾತಂತ್ರ್ಯದ ಅರ್ಥವೇನು ಎಂಬ ದೊಡ್ಡ ಪ್ರಶ್ನೆಯೂ ಕೂಡ.

ಬಸವಣ್ಣನವರನ್ನು ಹಿಂದುತ್ವದ ಅಂದಾಭಿಮಾನದಿಂದ ಬಂಧಿಸುವ ಪ್ರಯತ್ನಗಳು ಎಷ್ಟೇ ಮುಂದುವರೆದರೂ ಸಹ ಅಂತಹ ವಿಕೃತಿಗಳನ್ನು ಪ್ರಶ್ನಿಸುವ ಧೈರ್ಯವೂ ಸಮಾಜದಲ್ಲಿರಬೇಕು. ಇಲ್ಲವಾದರೆ, ನಾವು ಕೇವಲ ಒಂದು ಮಹಾನ್ ಚಿಂತಕರನ್ನಷ್ಟೇ ಕಳೆದುಕೊಳ್ಳುವುದಿಲ್ಲ; ಅವರ ಮೂಲಕ ಮೂಡಿದ ಮಾನವೀಯ ಮೌಲ್ಯಗಳನ್ನೂ ಕಳೆದುಕೊಳ್ಳುತ್ತೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
3 Comments
  • ಉತ್ತಮವಾದ ಚಿಂತನೆ, ವಾಸ್ತವಿಕ ಚಿತ್ರಣವನ್ನು
    ಬಿಚ್ಚಿಟ್ಟು ಬಸವ ತತ್ವ ಅಭಿಮಾನಿಗಳು ಮತ್ತು ಅನುಯಾಯಿಗಳ ಮೌನ ಬಸವ ತತ್ವ ರಕ್ಷಿಸಬಲ್ಲದೇ?
    ವಚನಗಳು ಇಂದು ಮಾತನಾಡಬೇಕಾಗಿದೆ, ವಚನಗಳನ್ನು ತೆಲೆಯೊಳಗೆ ಇಟ್ಟಿಕೊಂಡು ನಡೆಯಬೇಕಾಗಿದೆ.

    • ಮತ್ತೆ ಮತ್ತೆ ಚಿಂತನೆಗೆ ಹಚ್ಚಾಬಹುದಾದ ಬರಹ.

  • ಲಿಂಗಾಯತ ಧರ್ಮ ರಕ್ಷಿಸಿ ಉಳಿಸಬೇಕಾದ ಕರ್ತವ್ಯ ಯಾರದು?
    ಲಿಂಗಾಯತ ಮಠಗಳಿಗೆ ಈ ಬಗ್ಗೆ ಜವಾಬ್ದಾರಿ ಇಲ್ಲವೇ? ಲಿಂಗಾಯತ ಸಂಘಟನೆಗಳಿಗೆ ಇದು ಸಂಬಂದಿಸಿಲ್ಲವೇ?
    ಇಂದಿನ ಈ ಪರಿಸ್ಥಿತಿಗೆ ಯಾರ್ಯಾರು ಕಾರಣ..
    ಧರ್ಮದ ಅಧೀನದಲ್ಲಿ ಮಠಗಳಿರಬೇಕ ಅಥವಾ ಮಠಗಳ ಅಧೀನದಲ್ಲಿ ಧರ್ಮವೋ?.ಪೂರ್ವದಲ್ಲಿ ಮಠಗಳು ಸಮುದಾಯ ಅಭಿವೃದ್ದಿಯಾಗಲು‌ ಮುಖ್ಯ ಕಾರಣಗಳಾಗಿತ್ತು. ಇಂದು ಅಭವೃದ್ದಿಗೆ ಮಠಗಳೆ ತೋಡಕಾಗಿವೆ. ಇನ್ನೂ ಅನೇಕ ಸಮಸ್ಯೆ ಮತ್ತು ವಿಷಯಗಳನ್ನು ಮುಕ್ತವಾಗಿ ‌ಚರ್ಚಿಸಿ ಮುಂದಿನ ದಾರಿ ರೂಪಿಸಿ ಮುಂದುವರೆದರೆ ಮಾತ್ರ ಧರ್ಮ ಉಳಿಸಿಕೊಳ್ಳ ಬಹುದು.

Leave a Reply

Your email address will not be published. Required fields are marked *