ಭಾಲ್ಕಿ:
ಸ್ಥಳೀಯ ಹಿರೇಮಠ ಸಂಸ್ಥಾನದಲ್ಲಿ ಬಸವಾದಿ ಶರಣ ಮಾದಾರ ಚೆನ್ನಯ್ಯನವರ ಜಯಂತಿ ಹಾಗೂ ೪೯೩ ನೆಯ ಮಾಸಿಕ ಶಿವಾನುಭವಗೋಷ್ಠಿ ನಡೆಯಿತು.
ಸಾನಿಧ್ಯ ವಹಿಸಿದ್ದ ಪೂಜ್ಯ ಗುರುಬಸವ ಪಟ್ಟದ್ದೇವರು ಅನುಭಾವ ನೀಡುತ್ತ, ಮಾದಾರ ಚೆನ್ನಯ್ಯನವರು ೧೨ನೇ ಶತಮಾನದ ಬಸವಣ್ಣನವರ ಸಮಕಾಲಿನ ಹಿರಿಯ ಶರಣರಾಗಿದ್ದರು. ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಚೆನ್ನಯ್ಯನವರನ್ನು ಅಪ್ಪ, ಬೊಪ್ಪ ಎಂದು ಸ್ಮರಿಸಿದ್ದಾರೆ.
ಅಷ್ಟೇ ಅಲ್ಲದೆ ಗೋತ್ರ ನಾಮ ಕುಲಕ್ಕೆ ತಿಲಕ ಮಾದಾರ ಚೆನ್ನಯ್ಯ ಎಂದು ಅಭಿಮಾನದಿಂದ ಹೇಳಿದ್ದಾರೆ. ಮಾದಾರ ಚೆನ್ನಯ್ಯನವರು ಹಿರಿಯರಿದ್ದರು, ಬಸವಣ್ಣನವರನ್ನು ಗೌರವಿಸುತ್ತಿದ್ದರು.
ಬಸವ ಕ್ರಾಂತಿಯಿಂದಲೇ ನಮಗೆ ಸ್ವಾತಂತ್ರ್ಯ ಮತ್ತು ಸಮಾನತೆ ದೊರೆತಿದೆ ಎಂದು ಚೆನ್ನಯ್ಯನವರು ನಂಬಿದರು. ೧೨ನೇ ಶತಮಾನದಲ್ಲಿ ತುಳಿತಕ್ಕೊಳಾದ ಅನೇಕ ಸಮುದಾಯದ ಶರಣರಿಗೆ ಅನುಭವಮಂಟಪದಲ್ಲಿ ಪ್ರವೇಶ ನೀಡಿ ಸಮಾನತೆಯ ನೀಡಿದವರು ವಿಶ್ವಗುರು ಬಸವಣ್ಣನವರು.
ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಆಚರಣೆಯಲ್ಲಿ ತರುವ ಮೂಲಕ ನಾವು ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕೆಂದು ಪೂಜ್ಯರು ಹೇಳಿದರು.
ರಾಜಕುಮಾರ ಡಾವರಗಾಂವೆ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಕಡ್ಯಾಳೆ ತಮ್ಮ ಅನುಭಾವವನ್ನು ಹಂಚಿಕೊಂಡರು. ರಮೇಶ ಕಟ್ಟಿತುಗಾಂವ ಅವರಿಂದ ವಚನ ಪಠಣ ನಡೆಯಿತು.
ಸಂಜುಕುಮಾರ ಲಂಜವಾಡೆ, ಗುಂಡಪ್ಪ ಕೋಟೆ, ರವಿ ಗೌಂಡೆ, ದತ್ತಾತ್ರಿ ಜ್ಯೋತೆ, ಅನೀಲ ಹಲೆಪುರ್ಗೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ರಾಜಕುಮಾರ ಭಟಾರೆ, ರಾಹುಲ ಮೇತ್ರೆ, ಮಧುಕರ ಟೇಲರ್, ರೋಹನ ಸಿಂಧೆ, ಸಚೀನ್ ಅಂಬೆಸಾಂಗವಿ, ಪ್ರಮೋದ ಸಿಂಧೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ದೀಪಕ ಠಮಕೆ ನಿರೂಪಣೆ ಮಾಡಿದರು. ಶಕುಂತಲಾ ಲಿಂ. ವೈಜಿನಾಥಪ್ಪ ಅಣದೂರೆ ಅವರಿಂದ ಭಕ್ತಿದಾಸೋಹ ನಡೆಯಿತು.
