ಬೆಳಗಾವಿ
ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕಗಳ ಅಡಿಯಲ್ಲಿ ಮಾಸಿಕ ಹುಣ್ಣಿಮೆ ಕಾರ್ಯಕ್ರಮದಲ್ಲಿ ಬಸವಾದಿ ಶರಣ ಮಾದಾರ ಚೆನ್ನಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಆರಂಭದಲ್ಲಿ ವಿಶ್ವಗುರು ಬಸವಣ್ಣನವರ ಪೂಜೆಯನ್ನು ಕಾರ್ಯಕ್ರಮದ ಪ್ರಸಾದ ದಾಸೋಹಿಗಳಾದ ಈರಣ್ಣ ಬೊಮ್ಮಣ್ಣವರ ಮತ್ತು ಕುಟುಂಬ ವರ್ಗದವರು ನೆರವೇರಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಂಚಾರಿ ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ಅವರು, ಮಾದಾರ ಚೆನ್ನಯ್ಯನವರ ಜೀವನದ ಬಗ್ಗೆ ಅನುಭಾವದ ನುಡಿಯುತ್ತ, ಬಸವಣ್ಣನವರು ಶರಣ ಚೆನ್ನಯ್ಯ ಅವರನ್ನು ಎನ್ನ ತಂದೆ ಎಂದು ಕರೆದು ಅಪಾರವಾಗಿ ಗೌರವಿಸಿದರು. ಯಾವ ಭೇದ ಎಣಿಸದೇ ಚೆನ್ನಯ್ಯರನ್ನು ಒಪ್ಪಿ ಅಪ್ಪಿಕೊಂಡರು. ಸಾಕ್ಷಾತ್ ಶಿವನ ಸ್ವರೂಪ ಚೆನ್ನಯ್ಯ ಎಂದು ಭಾವಿಸಿದರು ಎಂದರು.
ಹಾಗೇ ಬಸವ ಧರ್ಮಪೀಠ, ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತೆ ಮಹಾದೇವಿ ಅವರ ಸಾಧನೆಗಳ ಬಗ್ಗೆ ವಿವರಿಸುತ್ತ, 12ನೇ ಶತಮಾನದಲ್ಲಿ ಎಲ್ಲವನ್ನು, ಎಲ್ಲರನ್ನೂ ಇಂಬಿಟ್ಟುಗೊಂಡು ಅನುಭವ ಮಂಟಪ ಸ್ಥಾಪಿತವಾಗಿತ್ತು.

21ನೇ ಶತಮಾನದಲ್ಲಿ ಅಪ್ಪಾಜಿ, ಮಾತಾಜಿ ಅವರಿಂದ ಶರಣಮೇಳಗಳ ರೂಪದಲ್ಲಿ ಅನುಭವ ಮಂಟಪ ಪ್ರದರ್ಶನಗೊಂಡಿತು ಎಂದು ಮಹಾಂತೇಶ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷರಾದ ಅಶೋಕ ಬೆಂಡಿಗೇರಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತೆ ಮಹಾದೇವಿ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಪೂಜ್ಯ ಸತ್ಯದೇವಿ ಮಾತಾಜಿಯವರು ಸಂಗ್ರಹಿಸಿದ ವಿವರಗಳ ಬ್ಯಾನರನ್ನು ಉದ್ಘಾಟಿಸಲಾಯಿತು.

ಬ್ಯಾನರನ್ನು ಬಸವ ಮಂಟಪಕ್ಕೆ ಕಾಣಿಕೆಯಾಗಿ ಕೊಟ್ಟ ಓಂಕಾರ ಮತ್ತು ಸನ್ನಿಧಿ ಹಂಪಣ್ಣವರ ಅವರನ್ನು ಹಾಗೂ ಮಾದಾರ ಚೆನ್ನಯ್ಯನವರ ಕಲಾಕೃತಿಯನ್ನು ಉತ್ತಮವಾಗಿ ತಯಾರಿಸಿದ ಶರಣು ಲಿಂಗಾಯತ ಅವರನ್ನು ಸತ್ಕರಿಸಲಾಯಿತು.
ಮಹಾಪ್ರಸಾದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ಶರಣ ಶರಣೆಯರು ಉಪಸ್ಥಿತರಿದ್ದರು.
