ರಾಣೇಬೆನ್ನೂರು :
ತಾಲ್ಲೂಕಿನ ಹೆಡಿಯಾಲ ಗ್ರಾಮದ ಬಸವರಾಜ ಮಾಸಣಗಿ ಇವರ ಮಕ್ಕಳ ಮದುವೆ ಕಾರ್ಯಕ್ರಮದಲ್ಲಿ “ವಚನ ಸಂದೇಶ ಭಾಗ – 4” ಕೃತಿಯನ್ನು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಂಗಳವಾರ ಬಿಡುಗಡೆಗೊಳಿಸಿದರು.
ಅವರು ಮಾತನಾಡುತ್ತ, ಇಂದಿನ ದಿನಗಳಲ್ಲಿ ಜನರಲ್ಲಿ ಓದುವ ಪ್ರವೃತ್ತಿ ಬಹಳ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ಸ್ವಲ್ಪ ಸಮಯವಾದರೂ ಓದುವುದಕ್ಕಾಗಿ ಮೀಸಲಿಟ್ಟು ಜ್ಞಾನ ಸಂಪಾದಿಸಿ ವ್ಯಕ್ತಿತ್ವ ವಿಕಾಸಗೊಳಿಸಿಕೊಳ್ಳಬೇಕು.

ಅದರಲ್ಲೂ ವಿಶೇಷವಾಗಿ ‘ಶರಣ ಸಾಹಿತ್ಯ’ದ ಬಗ್ಗೆ ನಮ್ಮ ಜನರಲ್ಲಿ ಅರಿವು ಬಹಳ ಕಡಿಮೆ ಇದೆ. ಶರಣರ ವಚನಗಳು ಮತ್ತು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಹಿತ್ಯದ ಓದು ಅತಿ ಅಗತ್ಯ.
ಸಾಹಿತ್ಯ ಕೇವಲ ಪುಸ್ತಕಕ್ಕಷ್ಟೇ ಸೀಮಿತವಾಗದೆ, ಅದು ಜೀವನದ ಹಾದಿಯನ್ನು ಸುಗಮಗೊಳಿಸುವಂತಿರಬೇಕು. ಯುವ ಪೀಳಿಗೆಗೆ ಶರಣರ ವಿಚಾರಧಾರೆಗಳನ್ನು ತಲುಪಿಸುವ ಅಗತ್ಯವಿದೆ ಎಂದು ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.
ಆರ್. ಬಿ. ತೋಟಗೇರಿ, ನಂದಿಹಳ್ಳಿ ಶಿವಣ್ಣ, ಮಂಜುನಾಥ ಗೌಡ್ರು, ಶಿವಣ್ಣನವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಬಸವರಾಜ ಮಾಸಣಗಿ ಎಲ್ಲರನ್ನು ಸ್ವಾಗತಿಸಿದರು.
